ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ರೇನ್‌ಬೋ ಡ್ರೈವ್ ಲೇಔಟ್ ಜಲಾವೃತವಾಗಿದೆ
ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಪ್ರಜಾವಾಣಿ ವಾರ್ತೆ
ಬೆಂಗಳೂರು: ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೆ ಸುರಿದ ಮಳೆಗೆ ನಗರದ ವಿವಿಧ ಪ್ರದೇಶಗಳು ಜಲಾವೃತಗೊಂಡವು. ರಸ್ತೆಗಳು ಕಾಲುವೆಯಂತಾದವು. ವಸತಿ ಪ್ರದೇಶಗಳಿಗೆ ನೀರು ನುಗ್ಗಿತ್ತು.
ನಗರದ ಹಲವು ರಸ್ತೆಗಳಲ್ಲಿ ಮಳೆ ನೀರು ನಿಂತು, ಮುಚ್ಚಿದ್ದ ಗುಂಡಿಗಳು ಮತ್ತೆ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾದವು. ಮೈಸೂರು ರಸ್ತೆ ಮೇಲ್ಸೇತುವೆಯಲ್ಲಿ ದೊಡ್ಡ ಗುಂಡಿ ನಿರ್ಮಾಣವಾಗಿ ಸುಮಾರು ಒಂದು ಗಂಟೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಸರ್ಜಾಪುರದ ರೈನ್ ಬೋ ಡ್ರೈವ್ ಲೇಔಟ್, ಹೊಸೂರು ಪಯನೀರ್ ರೆಸಿಡೆನ್ಸಿ, ವಿಲ್ಸನ್ ಗಾರ್ಡನ್ ಬಿಟಿಎಸ್ ರಸ್ತೆ, ಮಾನ್ಯತಾ ಟೆಕ್ ಪಾರ್ಕ್ ಸಹಿತ ಅನೇಕ ಪ್ರದೇಶಗಳು ಕೆರೆಯಂತಾದವು.
ವರ್ತೂರು ಪೊಲೀಸ್ ಠಾಣೆಯ ಬಳಿ ನೀರು ನಿಂತು, ಗುಂಜೂರು ಕಡೆಗೆ ವಾಹನ ಸಂಚಾರಕ್ಕೆ ತೊಡಕುಂಟಾಯಿತು. ದೊಡ್ಡಕನಹಳ್ಳಿ ಬಳಿ ನೀರು ನಿಂತು ಇಬ್ಬಲೂರು ಕಡೆಗೆ ವಾಹನಗಳು ಸಂಚರಿಸದಂತಾಯಿತು. ಮಡಿವಾಳ ಅಯ್ಯಪ್ಪ ಅಂಡರ್‌ಪಾಸ್‌ನಲ್ಲಿ ನೀರು ತುಂಬಿ ಹೋಗಿತ್ತು.
ನಾಗರಬಾವಿ, ಅಶ್ವತ್ಥನಗರದಲ್ಲಿ ಮರ ಬಿದ್ದ ಪರಿಣಾಮ ನಾಗಶೆಟ್ಟಿಹಳ್ಳಿ ರಸ್ತೆಯನ್ನು ತಾತ್ಕಾಲಿಕವಾಗಿ ಮುಚ್ಚಲಾಯಿತು. ಪರ್ಯಾಯ ಮಾರ್ಗವಾಗಿ ಭೂಪಸಂದ್ರ ರಸ್ತೆಯ ಮೂಲಕ ವಾಹನಗಳು ಸಂಚರಿಸಿದವು.
ಅತಿ ಮಳೆ: ಚಾಮರಾಜಪೇಟೆ 6 ಸೆಂ.ಮೀ., ವಿಶ್ವೇಶ್ವರಪುರ 4.6 ಸೆಂ.ಮೀ., ಸಂಪಂಗಿರಾಮನಗರ 4.6 ಸೆಂ.ಮೀ., ಶಾಂತಿನಗರ 4.6 ಸೆಂ.ಮೀ., ಜಕ್ಕೂರು 4.6 ಸೆಂ.ಮೀ., ವನ್ನಾರ್‌ಪೇಟೆ 4.5 ಸೆಂ.ಮೀ., ಪೂರ್ವ ದೊಮ್ಮಲೂರು 4.5 ಸೆಂ.ಮೀ., ಕೋರಮಂಗಲ 4.4 ಸೆಂ.ಮೀ., ಗೊಟ್ಟಿಗೆರೆ 4.3 ಸೆಂ.ಮೀ., ಬೇಗೂರು 4.3 ಸೆಂ.ಮೀ. ಮಳೆ ದಾಖಲಾಗಿದೆ.
ಸಿಂಗಸಂದ್ರ, ಯಲಹಂಕ, ಬೆಳ್ಳಂದೂರು, ವರ್ತೂರು, ಹಗ್ದೂರು, ಹೆಗ್ಗನಹಳ್ಳಿ, ಪೀಣ್ಯ ಕೈಗಾರಿಕಾ ವಲಯ, ಹಂಪಿನಗರ, ಬೊಮ್ಮನಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ, ಕೋನೆನ ಅಗ್ರಹಾರ, ಕಾಡುಗೋಡಿ, ದೊಡ್ಡನೆಕ್ಕುಂದಿ, ಕೊಟ್ಟಿಗೆ ಪಾಳ್ಯ, ಅಗ್ರಹಾರ ದಾಸರಹಳ್ಳಿ, ಬಸವೇಶ್ವರನಗರ, ನಾಗಪುರ, ಎಚ್‌ಎಸ್‌ಆರ್. ಲೇಔಟ್, ಅಟ್ಟೂರು, ವಿದ್ಯಾರಣ್ಯಪುರ, ಬ್ಯಾಟರಾಯನಪುರ, ಎಚ್‌ಎಎಲ್ ವಿಮಾನ ನಿಲ್ದಾಣ, ಗರುಡಾಚಾರ್‌ಪಾಳ್ಯ, ನಂದಿನಿ ಲೇಔಟ್, ಮಾರಪ್ಪನಪಾಳ್ಯ, ಆರ್.ಆರ್.ನಗರ, ಬಿಟಿಎಂ ಲೇಔಟ್, ಹೇರೊಹಳ್ಳಿ, ಹೊರಮಾವು, ಬಸವನಗುಡಿ, ಕುಮಾರಸ್ವಾಮಿ ಬಡಾವಣೆ, ವಿದ್ಯಾಪೀಠ, ಮಾರತ್‌ಹಳ್ಳಿ, ಪಟ್ಟಾಭಿರಾಮನಗರ, ಹೂಡಿ, ಲಕ್ಕಸಂದ್ರ, ಕಾಟನ್‌ಪೇಟೆ, ದಯಾನಂದನಗರ, ಪುಲಕೇಶಿನಗರ, ಅಂಜನಾಪುರ ಸಹಿತ ನಗರದ ವಿವಿಧ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.
ಬೆಂಗಳೂರು: ‘ರಸ್ತೆ ಕಾಮಗಾರಿಗಳ ವೇಳೆ ವೆಟ್‌ಮಿಕ್ಸಿಂಗ್ ವಿಧಾನ ಬಳಸಿಕೊಳ್ಳಲಾಗಿದೆ. ತುರ್ತು ಸಂದರ್ಭದಲ್ಲಿ ಮಳೆಯಲ್ಲೂ ಡಾಂಬರು ಹಾಕುವುದಕ್ಕೆ ಈ ವಿಧಾನ ಬಳಕೆ ಮಾಡಲಾಗುತ್ತದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ಸುದ್ದಿಗಾರರೊಂದಿಗೆ ಅವರು ಮಾತನಾಡಿ ‘ನಗರದಾದ್ಯಂತ ರಾತ್ರಿಯೆಲ್ಲ ಜೋರಾಗಿ ಮಳೆ ಸುರಿದಿದೆ. ನಮ್ಮ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಿದ್ದಾರೆ. ಎಲ್ಲಿಯೂ ಅವಘಡಗಳು ನಡೆದಿಲ್ಲ. ಕೆಲವು ಕಡೆ ಮಾತ್ರ ನೀರಿನ ಹರಿವಿಗೆ ಅಡಚಣೆ ಉಂಟಾಗಿದೆ’ ಎಂದರು.
ಕೆ.ಆರ್.ಪುರ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಾಲನಾಯಕನಹಳ್ಳಿ ಕೆರೆ ಕೊಡಿ ಬಿದ್ದು ನೀರಿನ ರಭಸ ಹೆಚ್ಚಾಗಿದ್ದರಿಂದ ರೈನ್ಬೋ ಡ್ರೈವ್ ಲೇಔಟ್ ಜಲಾವೃತಗೊಂಡಿತು. ಜನಜೀವನ ಅಸ್ತವ್ಯಸ್ತಗೊಂಡಿತ್ತು. ಲೇಔಟ್‌ನ ಕ್ಲಬ್ ಹೌಸ್ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು. ಸ್ಥಳಕ್ಕೆ ಎಸ್‌ಡಿಆರ್‌ಎಫ್ ಮತ್ತು ಜಿಬಿಎ ಸಿಬ್ಬಂದಿ ಬಂದು ನಿವಾಸಿಗಳಿಗೆ ಸಹಾಯ ಹಸ್ತಚಾಚಿದರು.
ಸರ್ಜಾಪುರ ರಸ್ತೆಯಲ್ಲಿರುವ ರೈನ್ಬೋ ಲೇಔಟ್‌ನ 50 ಕ್ಕೂ ಹೆಚ್ಚು ಐಷಾರಾಮಿ ಮನೆಗಳು ಮುಳುಗಡೆಯಾಗಿ ಕಾರು ಬೈಕ್ ಇನ್ನಿತರ ವಾಹನಗಳು ವಸ್ತುಗಳು ನೀರು ಪಾಲಾದವು. 2022ರಲ್ಲಿ ಬಾರಿ ಮಳೆಯಿಂದ ರೈನ್ಬೋ ಲೇಔಟ್ ಜಲಾವೃತ್ತಗೊಂಡಿತ್ತು. ಈಗ ಮತ್ತೆ ಜಲ ದಿಗ್ಬಂಧನ ಉಂಟಾಗಿದೆ. ನಿವಾಸಿಗಳು ಮನೆಯಿಂದ ಹೊರ ಬರಲಾಗದೆ ಪರದಾಡುವಂತಾಯಿತು. ಸರಿಯಾದ ರಾಜಕಾಲುವೆ ನಿರ್ಮಿಸದ ಪಾಲಿಕೆ ಅಧಿಕಾರಿಗಳ ಬಗ್ಗೆ ಜನಪ್ರತಿನಿಧಿಗಳ ಬಗ್ಗೆ ಲೇಔಟ್ ನಿವಾಸಿಗಳು ಬೇಸರ ವ್ಯಕ್ತಪಡಿಸಿದರು. ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಬೆಳ್ಳಂದೂರು ಅಗ್ನಿಶಾಮಕ ದಳದ ಸಿಬ್ಬಂದಿ ಶ್ರಮಿಸಿದರು.