ಬೆಂಗಳೂರು: ನಗರದ ಹಲವೆಡೆ ಶುಕ್ರವಾರ ಮಧ್ಯಾಹ್ನದಿಂದ ಉತ್ತಮವಾಗಿ ಮಳೆ ಸುರಿದು, ತಂಪಾದ ವಾತಾವರಣ ಸೃಷ್ಟಿಸಿತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಹಲವು ಪ್ರದೇಶಗಳಲ್ಲಿ ಮಳೆ ಸುರಿಯಿತು. ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡಿದರು. ವಾಹನ ಸಂಚಾರ ನಿಧಾನಗತಿಯಲ್ಲಿ ಇದ್ದ ಕಾರಣ ದಟ್ಟಣೆ ಉಂಟಾಗಿತ್ತು.
ಶುಕ್ರವಾರ ತಡರಾತ್ರಿಯವರೆಗೂ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆಯಾಯಿತು. ದೊಡ್ಡಕನ್ನಲ್ಲಿಯಿಂದ ಇಬ್ಲೂರು, ರೂಪೇನ ಅಗ್ರಹಾರದಿಂದ ಬೊಮ್ಮನಹಳ್ಳಿ, ಹೆಬ್ಬಾಳ ಜಂಕ್ಷನ್, ಎಂಪಿಎಸ್‌ನಿಂದ ಎಸ್‌ಪಿ ರಸ್ತೆ, ಕ್ವೀನ್ಸ್ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ವೃತ್ತ, ಕಾಡುಗೋಡಿಯಿಂದ ಬೆಳತ್ತೂರುವರೆಗಿನ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ವಿದ್ಯಾಪೀಠದಲ್ಲಿ 3.2 ಸೆಂ.ಮೀ, ರಾಜರಾಜೇಶ್ವರಿ ನಗರದಲ್ಲಿ 2.6 ಸೆಂ.ಮೀ, ನಾಯಂಡಹಳ್ಳಿಯಲ್ಲಿ 1.9 ಸೆಂ.ಮೀ, ಬೊಮ್ಮನಹಳ್ಳಿ, ದೊಡ್ಡಬಿದರಕಲ್ಲುನಲ್ಲಿ ತಲಾ 1.8 ಸೆಂ.ಮೀ, ಯಲಹಂಕದಲ್ಲಿ 1.65 ಸೆಂ.ಮೀ, ಪಟ್ಟಾಭಿರಾಮನಗರದಲ್ಲಿ 1.35 ಸೆಂ.ಮೀ, ಕೋರಮಂಗಲದಲ್ಲಿ 1.25 ಸೆಂ.ಮೀ, ಹೆಮ್ಮಿಗೆಪುರ, ಹಂಪಿ ನಗರ, ಕೆಂಗೇರಿಯಲ್ಲಿ ತಲಾ 1.1 ಸೆಂ.ಮೀ, ಮಾರುತಿ ಮಂದಿರ, ಹೇರೋಹಳ್ಳಿ, ಬಿಟಿಎಂ ಲೇಔಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ತಲಾ ಒಂದು ಸೆಂ.ಮೀ ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.