ADVERTISEMENT

ಬಾಂಬ್ ಸ್ಫೋಟ | ಬಾಯ್ಬಿಡದ ಶಂಕಿತರು; ಎನ್‌ಐಎ ತನಿಖೆ ಮುಂದುವರಿಕೆ

ಶಂಕಿತ ಉಗ್ರರ ಕಸ್ಟಡಿ ಅವಧಿ ಮುಕ್ತಾಯ; ಮತ್ತಷ್ಟು ಫೋಟೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2024, 0:27 IST
Last Updated 10 ಮಾರ್ಚ್ 2024, 0:27 IST
ಎನ್‌ಐಎ ಬಿಡುಗಡೆ ಮಾಡಿರುವ ಶಂಕಿತನ ಪೋಟೊ
ಎನ್‌ಐಎ ಬಿಡುಗಡೆ ಮಾಡಿರುವ ಶಂಕಿತನ ಪೋಟೊ   

ಬೆಂಗಳೂರು: ‘ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದಾರೆ’ ಎಂಬ ಅನುಮಾನದ ಮೇರೆಗೆ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿರುವ ನಾಲ್ವರು ಶಂಕಿತ ಉಗ್ರರು, ಕೆಫೆಯಲ್ಲಿ ಬಾಂಬ್‌ ಇಟ್ಟವನ ಬಗ್ಗೆ ಮಾಹಿತಿ ಬಾಯ್ಬಿಡುತ್ತಿಲ್ಲವೆಂದು ಗೊತ್ತಾಗಿದೆ.

‘ಶಂಕಿತ ಉಗ್ರ ಬಳ್ಳಾರಿಯ ಮಿನಾಜ್ ಅಲಿಯಾಸ್ ಸುಲೇಮಾನ್‌ (26), ಸೈಯದ್ ಸಮೀರ್ (19), ಮುಂಬೈನ ಅನಾಸ್ ಇಕ್ಬಾಲ್ ಶೇಖ್ (23) ಹಾಗೂ ದೆಹಲಿಯ ಶಯಾನ್ ರಹಮಾನ್ ಅಲಿಯಾಸ್ ಹುಸೈನ್‌ನನ್ನು (26) ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲಾಗಿತ್ತು. ಇವರು ವಿಚಾರಣೆಗೂ ಸಹಕರಿಸುತ್ತಿಲ್ಲ’ ಎಂದು ಮೂಲಗಳು ಹೇಳಿವೆ.

‘ಮಿನಾಜ್ ಹಾಗೂ ಇತರರನ್ನು ಜೈಲಿನಲ್ಲಿ ಭೇಟಿಯಾಗಿದ್ದವರ ವಿಚಾರಣೆ ನಡೆಸಲಾಗಿದೆ. ಕೆಲ ತಾಂತ್ರಿಕ ಪುರಾವೆಗಳನ್ನು ಆಧರಿಸಿ ಬಳ್ಳಾರಿ, ಕಲಬುರಗಿಯಲ್ಲಿ ಶೋಧ ನಡೆಸಲಾಗಿದೆ. ನಾಲ್ವರ ಕಸ್ಟಡಿ ಅವಧಿ ಶನಿವಾರ ಮುಕ್ತಾಯಗೊಂಡಿದ್ದು, ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು’ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮತ್ತಷ್ಟು ಫೋಟೊ ಬಿಡುಗಡೆ: ಕೆಫೆಯಲ್ಲಿ ಬಾಂಬ್ ಇರಿಸಿದ್ದ ಶಂಕಿತನ ಮತ್ತಷ್ಟು ಫೋಟೊಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದ್ದಾರೆ. ಶಂಕಿತನ ಸುಳಿವು ನೀಡುವಂತೆ ಜನರನ್ನು ಕೋರಿದ್ದಾರೆ.

ಬೆಂಗಳೂರು ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟ ನಡೆದಿತ್ತು. ಬಳಿಕ ಶಂಕಿತ, ಬಳ್ಳಾರಿ ಹಾಗೂ ಅಲ್ಲಿಂದ ಕಲಬುರಗಿಗೆ ಹೋಗಿರುವ ಮಾಹಿತಿ ಎನ್‌ಐಎ ಅಧಿಕಾರಿಗಳಿಗೆ ಲಭ್ಯವಾಗಿದೆ. ಜೊತೆಗೆ, ಶಂಕಿತ ಹೊರ ರಾಜ್ಯಕ್ಕೆ ಪರಾರಿಯಾಗಿರುವ ಬಗ್ಗೆಯೂ ಅಧಿಕಾರಿಗಳಿಗೆ ಶಂಕೆ ಇದೆ.

ಬಳ್ಳಾರಿ, ಕಲಬುರಗಿ, ಹೊಸಪೇಟೆ ಹಾಗೂ ಇತರೆ ನಗರಗಳಲ್ಲಿ ಶನಿವಾರ ಸುತ್ತಾಡಿದ ಎನ್‌ಐಎ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು, ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದರು. ಶಂಕಿತ ಉಗ್ರ ಓಡಾಡಿದ್ದ ಸ್ಥಳಗಳನ್ನು ಗುರುತಿಸಿ, ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು.

‘ವ್ಯವಸ್ಥಿತವಾಗಿ ಶಂಕಿತ ಕೆಫೆಯಲ್ಲಿ ಬಾಂಬ್‌ ಇರಿಸಿದ್ದ. ಈತ ಎಲ್ಲೆಲ್ಲಿ ಓಡಾಡಿದ್ದ? ಯಾರನ್ನೆಲ್ಲ ಭೇಟಿಯಾಗಿದ್ದ? ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆದರೆ, ಶಂಕಿತ ಯಾರು? ಆತನ ವಿಳಾಸವೇನು? ಎಂಬುದು ಮಾತ್ರ ಪತ್ತೆಯಾಗುತ್ತಿಲ್ಲ. ಶಂಕಿತ ಉಗ್ರರೂ ಈ ಬಗ್ಗೆ ಮಾಹಿತಿ ಬಾಯ್ಬಿಡುತ್ತಿಲ್ಲ’ ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ಆರೋಪಿಗಾಗಿ ಕಲಬುರಗಿಯಲ್ಲಿ ಎನ್‌ಐಎ ಶೋಧ

ಕಲಬುರಗಿ: ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಶಂಕಿತ ಆರೋಪಿಗಳಿಗಾಗಿ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ತಂಡ ಶನಿವಾರ ಕಲಬುರಗಿಗೆ ಬಂದು ಬೆಳಿಗ್ಗೆಯಿಂದ ಹಲವು ಕಡೆ ಶೋಧ ನಡೆಸಿತು.

ಶಂಕಿತರ ಜಾಡು ಹಿಡಿದು ಬಳ್ಳಾರಿಯಿಂದ ಕಲಬುರುಗಿಗೆ ಬಂದ ಎನ್‌ಐಎ ಅಧಿಕಾರಿಗಳು ಕೇಂದ್ರ ಬಸ್‌ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಪರಿಶೀಲನೆ ನಡೆಸಿದರು. ಬಸ್‌ ಮತ್ತು ರೈಲು ನಿಲ್ದಾಣಗಳಲ್ಲಿನ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿ, ಒಂದು ವಾರದ ಹಿಂದಿನಿಂದ ದಾಖಲಾದ ವಿಡಿಯೊ ದೃಶ್ಯಗಳ ಹಾರ್ಡ್‌ಡಿಸ್ಕ್‌ ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಫೋಟದ ಬಳಿಕ ಬಳಿಕ ಬಳ್ಳಾರಿಯಲ್ಲಿ ಕಾಣಿಸಿಕೊಂಡ ಶಂಕಿತ, ಅಲ್ಲಿಂದ ಇನ್ನೊಬ್ಬನ ಜತೆಗೂಡಿ ಬಳ್ಳಾರಿ ಬಸ್‌ ನಿಲ್ದಾಣದಲ್ಲಿ ಕಾಯ್ದಿರಿಸದ ಟಿಕೆಟ್ ಪಡೆದು ಕೆಎ 32 ಎಫ್‌ 1885 ನಾನ್‌ ಏಸಿ ಸ್ಲೀಪರ್‌ ಬಸ್‌ನಲ್ಲಿ ಕಲಬುರಗಿಗೆ ಬಂದಿದ್ದಾರೆ ಎನ್ನಲಾಗಿದೆ. ಒಬ್ಬ ರಾಮಮಂದಿರ ವೃತ್ತ, ಮತ್ತೊಬ್ಬ ಕೇಂದ್ರ ಬಸ್‌ ನಿಲ್ದಾಣದಲ್ಲಿ ಇಳಿದುಕೊಂಡ ಶಂಕೆ ವ್ಯಕ್ತವಾಗಿದೆ.

ಎನ್‌ಐಎ ಅಧಿಕಾರಿಗಳು ಬಸ್‌ ನಿಲ್ದಾಣದಲ್ಲಿನ 18 ಸಿ.ಸಿ. ಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲನೆ ನಡೆಸಿ, ನಂತರ ಬಸ್‌ ಚಾಲಕ ಮತ್ತು ನಿರ್ವಾಹಕನನ್ನು ವಿಚಾರಣೆ ನಡೆಸಿ ಅವರಿಂದ ಮಾಹಿತಿ ಕಲೆಹಾಕಿದರು. ಈ ಇಬ್ಬರಲ್ಲಿ ಒಬ್ಬ ಬಾಂಬ್ ಇರಿಸಿದವ ಇರಬಹುದು ಎನ್ನಲಾಗಿದೆ.

ರೈಲು ನಿಲ್ದಾಣದ ಸಮೀಪ, ಹಳೆ ಜೇವರ್ಗಿ ರಸ್ತೆ ಸೇರಿ ಹಲವೆಡೆಯ ಲಾಡ್ಜ್‌ಗಳಲ್ಲಿ ಶಂಕಿತ ತಂಗಿರುವ ಅನುಮಾನದಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ನಗರದ ಕೆಲವು ಪ್ರಮುಖ ಬಡಾವಣೆಗಳಲ್ಲಿ ಎನ್‌ಐಎ ತಂಡ ಪರಿಶೀಲಿಸಿ ಮಾಹಿತಿ ಕಲೆ ಹಾಕಿದೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.