ಎಫ್‌ಐಆರ್
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ರ್‍ಯಾಪಿಡೊ ಆಟೊ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. 19 ವರ್ಷದ ವಿದ್ಯಾರ್ಥಿನಿ ದೂರು ನೀಡಿದ್ದಾರೆ.
ಲೈಂಗಿಕ ಕಿರುಕುಳ ನೀಡಿದ್ದ ಚಾಲಕ ಹನುಮಂತಪ್ಪ ಎಚ್.ತಳವಾರ್ ಎಂಬುದು ಗೊತ್ತಾಗಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ಹೇಳಿದರು.
ಸಂತ್ರಸ್ತೆ ಸೆ.8ರಂದು ಸಂಜೆ ಕುಮಾರಸ್ವಾಮಿ ಲೇಔಟ್‍ನ ಕಾಲೇಜಿನಿಂದ ಮನೆಗೆ ಹೋಗಲು ಆ್ಯಪ್‌ನಲ್ಲಿ ರ್‍ಯಾಪಿಡೊ ಆಟೊ ಬುಕ್ ಮಾಡಿದ್ದರು. ಬಳಿಕ, ವಿದ್ಯಾರ್ಥಿನಿಯನ್ನು ಜೆ.ಪಿ.ನಗರದ ಏಳನೇ ಹಂತದ ನಟರಾಜ ಲೇಔಟ್‍ನ ಮನೆ ಬಳಿ ಕರೆದುಕೊಂಡು ಬಂದಿದ್ದ ಆಟೊ ಚಾಲಕ, ವಿದ್ಯಾರ್ಥಿನಿಯನ್ನು ಹೊಗಳಿದ್ದ. ‘ನೀವು ನಟಿಯಂತೆ ಕಾಣಿಸುತ್ತೀರಿ’ ಎಂದು ಹೇಳಿದ್ದ. ‘ನೀವು ಏಕೆ ಮೌನವಾಗಿದ್ದೀರಿ. ನಿಮಗೆ ಜ್ವರವಿದೆಯಾ’ ಎಂದು ಪ್ರಶ್ನಿಸಿದ್ದ.
‘ಆಟೊ ಚಾಲಕನ ವರ್ತನೆಯನ್ನು ಪ್ರಶ್ನಿಸಿದೆ. ಅದಾದ ಮೇಲೆ ಆತ, ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಗಾಬರಿಯಿಂದ ಚಾಲಕನನ್ನು ದೂರ ತಳ್ಳಿ ಮನೆಗೆ ಹೋಗಿದ್ದೆ’ ಎಂದು ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.