ADVERTISEMENT

ಬೆಂಗಳೂರು: ವ್ಯಸನ ಮುಕ್ತ ಕೇಂದ್ರದಲ್ಲಿ ಯುವಕ ಅನುಮಾನಾಸ್ಪದ ಸಾವು

ಪೊಲೀಸರ ಮೇಲೆ ಪೋಷಕರ ಆರೋಪ, ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 15:53 IST
Last Updated 28 ನವೆಂಬರ್ 2025, 15:53 IST
ದರ್ಶನ್‌ 
ದರ್ಶನ್‌    

ಪ್ರಜಾವಾಣಿ ವಾರ್ತೆ

ಬೆಂಗಳೂರು: ಅಡಕಮಾರನಹಳ್ಳಿಯಲ್ಲಿ ಇರುವ ವ್ಯಸನ ಮುಕ್ತ ಕೇಂದ್ರಕ್ಕೆ ದಾಖಲಾಗಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ಸೊಣ್ಣೇನಹಳ್ಳಿಯ ನಿವಾಸಿ ದರ್ಶನ್(23) ಮೃತ ಯುವಕ.

ADVERTISEMENT

ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭವಾಗಿದೆ.

‘ಪೊಲೀಸರ ಹಲ್ಲೆಯಿಂದ ಯುವಕ ಮೃತಪಟ್ಟಿದ್ದಾನೆ’ ಎಂದು ಪೋಷಕರು ಹಾಗೂ ಕುಟುಂಬದವರು ದೂರಿದ್ದಾರೆ.

‘ದರ್ಶನ್‌ ಅವರ ತಾಯಿ ಆದಿಲಕ್ಷ್ಮಿ ನೀಡಿದ ದೂರಿನ ಆಧಾರದಲ್ಲಿ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಮೊದಲು ಯುಡಿಆರ್‌ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ, ಮರಣೋತ್ತರ ಪರೀಕ್ಷೆ ವೇಳೆ ಮೃತದೇಹದಲ್ಲಿ ಗಾಯದ ಗುರುತುಗಳು ಇರುವುದು ಕಂಡುಬಂದಿತ್ತು’ ಎಂದು ಮೂಲಗಳು ಹೇಳಿವೆ. 

‘ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?: ‘ನನ್ನ ಮಗ ದರ್ಶನ್‌ ಅವರಿಗೆ ಪ್ರತಿನಿತ್ಯ ಮದ್ಯ ಸೇವಿಸುವ ಅಭ್ಯಾಸವಿತ್ತು. ಮದ್ಯ ಸೇವಿಸಿ ಬಂದು ರಸ್ತೆಯಲ್ಲಿ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ವಿವೇಕನಗರ ಠಾಣೆಯ ಪೊಲೀಸರು ದರ್ಶಶ್‌ನನ್ನು ಠಾಣೆಗೆ ಕರೆದುಕೊಂಡು ಹೋಗಿದ್ದರು. ನ.15ರಂದು ಠಾಣೆಗೆ ತೆರಳಿ ಮಗನನ್ನು ಮನೆಗೆ ಕಳುಹಿಸುವಂತೆ ಕೋರಿಕೊಂಡಿದ್ದೆ. ಅವನು ಎಲ್ಲರ ಬಳಿಯು ಗಲಾಟೆ ಮಾಡಿಕೊಳ್ಳುತ್ತಿದ್ದಾನೆ. ಅವನನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಪೊಲೀಸರು ಹೇಳಿದ್ದರು. ಮಗನಿಗೆ ಕುಡಿತದ ಚಟ ಬಿಡಿಸಲು ವ್ಯಸನ ಮುಕ್ತ ಕೇಂದ್ರಕ್ಕೆ ಸೇರಿಸುವಂತೆ ನಾನೇ ಪೊಲೀಸರ ಬಳಿ ಮನವಿ ಮಾಡಿದ್ದೆ. ಅವರು ಕೇಂದ್ರಕ್ಕೆ ಸೇರಿಸಿದ್ದರು’ ಎಂದು ಆದಿಲಕ್ಷ್ಮಿ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ವ್ಯಸನ ಮುಕ್ತ ಕೇಂದ್ರಕ್ಕೆ ಪ್ರತಿನಿತ್ಯ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದೆ. ಮಗ ಚೆನ್ನಾಗಿದ್ದಾನೆ ಎಂದು ಅಲ್ಲಿನ ಸಿಬ್ಬಂದಿ ಹೇಳುತ್ತಿದ್ದರು. ನ.26ರ ಬೆಳಿಗ್ಗೆ 11ರ ಸುಮಾರಿಗೆ ಕೇಂದ್ರದ ಸಿಬ್ಬಂದಿ ಕರೆ ಮಾಡಿ ನಿಮ್ಮ ಮಗ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದರು. ಆ ಕೇಂದ್ರಕ್ಕೆ ಹೋಗುವಷ್ಟರಲ್ಲಿ ಮೃತದೇಹವನ್ನು ನೆಲಮಂಗಲ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಈ ಸಂಬಂಧ ಯಾವುದೇ ಮಾಹಿತಿ ನೀಡಿರಲಿಲ್ಲ. ಉಸಿರಾಟದ ತೊಂದರೆ ಇತ್ತು ಎಂದು ಹೇಳುತ್ತಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಪುತ್ರನ ಸಾವಿನ ಬಗ್ಗೆ ಅನುಮಾನವಿದೆ. ಯೂನಿಟ್ ಸೋಷಿಯಲ್‌ ಸರ್ವಿಸ್‌ಗೆ ಸಂಬಂಧಿಸಿದ ವ್ಯಕ್ತಿಗಳನ್ನು ವಿಚಾರಣೆ ನಡೆಸಬೇಕು’ ಎಂದು ಆದಿಲಕ್ಷ್ಮಿ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.