ADVERTISEMENT

ಬೆಂಗಳೂರು | ರಸ್ತೆ ಅಪಘಾತ: ಶಿಕ್ಷೆ ಪ್ರಮಾಣ ಶೇಕಡ 7

ಕೆ.ಎಸ್.ಸುನಿಲ್
Published 8 ಸೆಪ್ಟೆಂಬರ್ 2025, 23:02 IST
Last Updated 8 ಸೆಪ್ಟೆಂಬರ್ 2025, 23:02 IST
ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಆಟೊ ಜಖಂಗೊಂಡಿದೆ.  
ನಗರದಲ್ಲಿ ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಆಟೊ ಜಖಂಗೊಂಡಿದೆ.      

ಬೆಂಗಳೂರು: ನಗರದಲ್ಲಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ 3 ಸಾವಿರಕ್ಕೂ ಅಧಿಕ ಗಂಭೀರ ಅಪಘಾತ ಪ್ರಕರಣಗಳು ವರದಿಯಾಗಿವೆ. ಆದರೆ, ಈ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಶೇಕಡ 7ರಷ್ಟು ಇದೆ.

ನಗರದಲ್ಲಿ ನಿತ್ಯ ಸರಾಸರಿ 2,300 ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಹೀಗಾಗಿ ವಾಹನಗಳ ಸಂಖ್ಯೆಯು 1.25 ಕೋಟಿಯ ಗಡಿ ದಾಟಿದೆ. ಈ ಪೈಕಿ ಶೇಕಡ 72ರಷ್ಟು ದ್ವಿಚಕ್ರ ವಾಹನಗಳಿವೆ. ನಿತ್ಯ ಸರಾಸರಿ 11 ಅಪಘಾತ ಪ್ರಕರಣಗಳು ವರದಿಯಾಗುತ್ತಿವೆ. 

ಗಂಭೀರ‌ ಅಪಘಾತಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಆಗುತ್ತಿರುವುದಕ್ಕೆ ಹಲವು ಕಾರಣಗಳನ್ನು ತಜ್ಞರು ತಿಳಿಸಿದ್ದಾರೆ. ಗುಣಮಟ್ಟವಲ್ಲದ ತನಿಖೆ, ಪ್ರತ್ಯಕ್ಷದರ್ಶಿಗಳ ಕೊರತೆ, ನ್ಯಾಯಾಲಯದ ಹೊರಗೆ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳುತ್ತಿರುವುದು ಹಾಗೂ ಅಪಘಾತ ಸಂಭವಿಸಿದಾಗ ಎರಡೂ ಕಡೆಯವರು ರಾಜಿ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

2021ರಿಂದ 2025ರವರೆಗಿನ(ಜೂನ್‌) ಅಂಕಿ ಅಂಶಗಳ ಪ್ರಕಾರ, ಒಟ್ಟು 3,536 ಗಂಭೀರ ಅಪಘಾತಗಳು ಮತ್ತು 15,349 ಸಣ್ಣ ಪ್ರಮಾಣದ ಅಪಘಾತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 250 ಗಂಭೀರ ಅಪಘಾತ ಪ್ರಕರಣ ಮತ್ತು 9,811 ಸಣ್ಣ ಅಪಘಾತ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ.

‘ಗಂಭೀರ ಅಪಘಾತ ಪ್ರಕರಣಗಳಲ್ಲಿ ಶೇಕಡ 70ರಷ್ಟು ಆರೋಪಿ ಮತ್ತು ಸಂತ್ರಸ್ತ ಕುಟುಂಬದ ನಡುವೆ ನ್ಯಾಯಾಲಯದ ಹೊರಗೆ ರಾಜಿ ಮಾಡಿಕೊಳ್ಳಲಾಗುತ್ತದೆ. ಇದರಿಂದಾಗಿ ಶಿಕ್ಷೆಯ ಪ್ರಮಾಣ ಕಡಿಮೆಯಾಗುತ್ತದೆ. ಬಹುತೇಕರು ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳಲು ಬಯಸುತ್ತಾರೆ. ದೀರ್ಘ ಕಾನೂನು ಹೋರಾಟ ಹಾಗೂ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದ ಈ ರೀತಿಯ ನಿರ್ಧಾರ ಕೈಗೊಳ್ಳುತ್ತಾರೆ. ಹಾಗಾಗಿ, ಆರೋಪಿಗಳು ಶಿಕ್ಷೆಯಿಂದ ಪಾರಾಗುತ್ತಿದ್ದಾರೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ತನಿಖೆಯ ಬಳಿಕ ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತದೆ. ಕೆಲವೊಮ್ಮೆ ಸಂತ್ರಸ್ತ ವ್ಯಕ್ತಿಯ ವಯಸ್ಸು ಮತ್ತು ವೃತ್ತಿಯನ್ನು ಆಧರಿಸಿ ವಿಮಾ ಕಂಪನಿಗಳು ಹೆಚ್ಚಿನ ಪರಿಹಾರ ನೀಡಿರುವ ಉದಾಹರಣೆ ಇದೆ. ಸಾಮಾನ್ಯವಾಗಿ ವರ್ಷದೊಳಗೆ ಪ್ರಕರಣ ಇತ್ಯರ್ಥಪಡಿಸಲಾಗುತ್ತದೆ’ ಎಂದು ಹೇಳಿದರು. 

‘ಅಪಘಾತ ಪ್ರಕರಣಗಳಲ್ಲಿ ವಿಚಾರಣೆಯ ವಿಳಂಬದಿಂದಾಗಿ ಸಂತ್ರಸ್ತರು ಹಾಗೂ ಸಾಕ್ಷಿದಾರರು ಪ್ರತಿಕೂಲ ಸಾಕ್ಷಿಯಾಗಿ ಬದಲಾಗುತ್ತಾರೆ. ವಿಚಾರಣೆಯು ಹಲವು ವರ್ಷಗಳವರೆಗೆ ನಡೆದರೆ, ಕುಟುಂಬಗಳು ಪ್ರಕರಣವನ್ನು ಮುಂದುವರಿಸಲು ಆಸಕ್ತಿವಹಿಸುವುದಿಲ್ಲ . ಬದಲಾಗಿ ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕೆ ಒಪ್ಪಿಕೊಳ್ಳುತ್ತಾರೆ. ಹಲವು ಬಾರಿ ಆರೋಪಿಗಳಿಗೆ ಠಾಣಾ ಹಂತದಲ್ಲೇ ಜಾಮೀನು ನೀಡಲಾಗುತ್ತದೆ’ ಎಂದರು.

‘ಎಲ್ಲಾ ಆಯಾಮದಿಂದ ತನಿಖೆ ನಡೆಸಿ’

‘ಅಪಘಾತ ಸಂಭವಿಸಿದಾಗ ಪೊಲೀಸರು ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಬೇಕು. ಉದ್ದೇಶಪೂರ್ವಕವಾಗಿ ಅಪಘಾತ ಮಾಡಲಾಗಿದೆಯೇ ಆಕಸ್ಮಿಕವಾಗಿ ಆಗಿದೆಯೇ? ಯಾವ ಕಾರಣಕ್ಕೆ ಎಂಬುದನ್ನು ಪರಿಶೀಲಿಸಬೇಕು. ಅವೈಜ್ಞಾನಿಕ ರಸ್ತೆ ಚಾಲಕನ ನಿರ್ಲಕ್ಷ್ಯ ವಾಹನದ ಬ್ರೇಕ್ ಫೇಲ್‌ನಿಂದ ಅಪಘಾತ ಸಂಭವಿಸಿರುವ ಉದಾಹರಣೆಗಳು ಇವೆ. ಕೆಲವೊಮ್ಮೆ ರಸ್ತೆಗೆ ಅಡ್ಡವಾಗಿ ಬಂದ ಪ್ರಾಣಿ ಹಾಗೂ ಮನುಷ್ಯರನ್ನು ರಕ್ಷಿಸಲು ಹೋಗಿ ವಾಹನಗಳು ಅಪಘಾತಕ್ಕೀಡಾಗಿವೆ. ದ್ವೇಷ ಹಣ ಮತ್ತುಆಸ್ತಿಗಾಗಿಯೂ ಅಪಘಾತ ಮಾಡಿ ವ್ಯಕ್ತಿಯನ್ನು ಸಾಯಿಸಲಾಗುತ್ತದೆ’ ಎಂದು ಮೂಲ ಸೌಕರ್ಯ ತಜ್ಞ ಪ್ರೊ.ಎಂ.ಎನ್.ಶ್ರೀಹರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಅಪಘಾತದ ಸ್ಥಳದಲ್ಲಿ ದೊರೆತ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸಿ ತಜ್ಞರ ಜತೆ ಸಮಾಲೋಚನೆ ನಡೆಸಬೇಕು. ಘಟನೆ ಸಂದರ್ಭದಲ್ಲಿ ಪೊಲೀಸರಿಗೆ ಹೇಳಿಕೆ ನೀಡುವ ಸಾಕ್ಷಿ ವಿಚಾರಣೆ ಸಂದರ್ಭದಲ್ಲಿ ಪ್ರತಿಕೂಲ ಸಾಕ್ಷ್ಯ ನುಡಿಯುತ್ತಾರೆ. ಹಾಗಾಗಿ ಗಂಭೀರ ಅಪಘಾತ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುವುದು ಕಡಿಮೆ ಆಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.