
ಮನೋಜ್ ಮತ್ತು ಆತನ ಪತ್ನಿ ಆರತಿ ಶರ್ಮಾ
ಬೆಂಗಳೂರು: ಮಿರರ್‌ಗೆ ತಾಗಿದ ವಿಚಾರಕ್ಕೆ 2 ಕಿಲೋ ಮೀಟರ್ ಹಿಂಬಾಲಿಸಿ, ಕಾರಿನಿಂದ ಬೈಕ್‌ಗೆ ಡಿಕ್ಕಿ ಹೊಡೆಸಿ ಸವಾರರೊಬ್ಬರನ್ನು ಕೊಲೆ ಮಾಡಿದ ದಂಪತಿಯನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರಕೆರೆಯಲ್ಲಿ ನೆಲಸಿದ್ದ ಮನೋಜ್ (32) ಮತ್ತು ಆತನ ಪತ್ನಿ ಆರತಿ ಶರ್ಮಾ (29) ಬಂಧಿತರು.
ಅ.25ರಂದು ತಡರಾತ್ರಿ ಕೆಂಬತ್ತಹಳ್ಳಿ ನಿವಾಸಿ ದರ್ಶನ್ (22) ಅವರನ್ನು ರಸ್ತೆ ಅಪಘಾತ ಎಸಗಿ ಕೊಲೆ ಮಾಡಿ ಪರಾರಿ ಆಗಿದ್ದರು. ಬೈಕ್‌ನ ಹಿಂದೆ ಕುಳಿತಿದ್ದ ದರ್ಶನ್ ಅವರ ಸ್ನೇಹಿತ ವರುಣ್‌ಗೆ ಸಣ್ಣಪುಟ್ಟ ಗಾಯವಾಗಿತ್ತು. ಕೆಂಬತ್ತಹಳ್ಳಿ ನಿವಾಸಿ ದರ್ಶನ್ ಮತ್ತು ಉತ್ತರಹಳ್ಳಿ ನಿವಾಸಿ ವರುಣ್ ಫುಡ್ ಡೆಲಿವರಿ ಹುಡುಗರಾಗಿ ಕೆಲಸ ಮಾಡುತ್ತಿದ್ದರು. ಅಂದು ರಾತ್ರಿ ಇಬ್ಬರು ಮನೆಗೆ ತೆರಳುವಾಗ ಘಟನೆ ನಡೆದಿತ್ತು.
ಮೃತ ಯುವಕನ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮನೋಜ್ ಮತ್ತು ಆರತಿ ಶರ್ಮಾ ತಮ್ಮ ಕಾರಿನಲ್ಲಿ ನಟರಾಜ ಲೇಔಟ್‌ಗೆ ತೆರಳುತ್ತಿದ್ದರು. ಅದೇ ಮಾರ್ಗದಲ್ಲಿ ದರ್ಶನ್ ಮತ್ತು ವರುಣ್ ಬೈಕ್‌ನಲ್ಲಿ ಬರುತ್ತಿದ್ದರು. ಆಗ ಕಾರಿನ ಮಿರರ್‌ಗೆ ಬೈಕ್ ತಾಗಿತ್ತು. ಆಗ ಕಾರಿನಿಂದ ಇಳಿದಿದ್ದ ದಂಪತಿ ಗಲಾಟೆ ಮಾಡಿದ್ದರು. ದರ್ಶನ್ ಅವರು ಕ್ಷಮೆ ಕೇಳಿ ಮುಂದಕ್ಕೆ ಹೋಗಿದ್ದರು. ಅಷ್ಟಕ್ಕೆ ಸುಮ್ಮನಾಗದ ದಂಪತಿ ಬೈಕ್ ಹಿಂಬಾಲಿಸಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳು ಸುಮಾರು 2 ಕಿಲೋ ಮೀಟರ್ ವರೆಗೂ ದರ್ಶನ್ ಮತ್ತು ವರುಣ್ ಅವರನ್ನು ಕಾರಿನಲ್ಲಿ ಹಿಂಬಾಲಿಸಿದ್ದರು. ಮಾರ್ಗ ಮಧ್ಯದಲ್ಲಿ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದರು. ಕೆಳಗೆ ಬಿದ್ದಿದ್ದ ದರ್ಶನ್ ಅವರ ತಲೆಗೆ ಗಂಭೀರವಾದ ಗಾಯವಾಗಿತ್ತು. ಬಳಿಕ ದಂಪತಿ ಕಾರನ್ನು ನಿಲುಗಡೆ ಮಾಡದೇ ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಕೃತ್ಯ ಸೆರೆ: ಘಟನಾ ಸ್ಥಳದ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದಾಗ ಉದ್ದೇಶಪೂರ್ವಕವಾಗಿಯೇ ರಸ್ತೆ ಅಪಘಾತ ಎಸಗಿರುವುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು.
ಬಿಡಿ ಭಾಗಗಳನ್ನು ಕೊಂಡೊಯ್ದಿದ್ದ ದಂಪತಿ: ರಸ್ತೆ ಅಪಘಾತ ಎಸಗಿ ದರ್ಶನ್ ಅವರನ್ನು ಕೊಲೆ ಮಾಡಿದ್ದ ದಂಪತಿ, ಒಂದೂವರೆ ಕಿಲೋ ಮೀಟರ್ ದೂರಕ್ಕೆ ಕಾರಿನಲ್ಲಿ ಹೋಗಿದ್ದರು. ಬಳಿಕ ಅದೇ ಮಾರ್ಗದಲ್ಲಿ ವಾಪಸ್ ಬಂದಿದ್ದರು. ಸ್ವಲ್ಪ ದೂರದಲ್ಲಿ ಕಾರು ನಿಲುಗಡೆ ಮಾಡಿದ್ದರು. ಯಾರಿಗೂ ಗೊತ್ತಾಗಬಾರದೆಂದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಘಟನಾ ಸ್ಥಳಕ್ಕೆ ನಡೆದುಕೊಂಡು ಬಂದು ಸ್ಥಳದಲ್ಲಿ ಬಿದ್ದಿದ್ದ ಕಾರಿನ ಬಿಡಿಭಾಗಗಳನ್ನು ಕೊಂಡೊಯ್ದಿದ್ದರು. ಈ ದೃಶ್ಯ ಸಹ ಸಮೀಪದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು ಎಂದು ಸಂಚಾರ ಪೊಲೀಸರು ಹೇಳಿದರು.
ಉದ್ದೇಶಪೂರ್ವಕವಾಗಿಯೇ ದಂಪತಿ ರಸ್ತೆ ಅಪಘಾತ ಎಸಗಿ ಯುವಕನ ಕೊಲೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ– ಲೋಕೇಶ್ ಜಗಲಸಾರ ದಕ್ಷಿಣ ವಿಭಾಗದ ಡಿಸಿಪಿ
ಅಪಘಾತ ಎನ್ನುವ ಕಾರಣಕ್ಕೆ ಆರಂಭದಲ್ಲಿ ಜೆ.ಪಿ.ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಕೊಲೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಪುಟ್ಟೇನಹಳ್ಳಿ ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಕೇರಳದ ಮನೋಜ್ ಮತ್ತು ಜಮ್ಮು–ಕಾಶ್ಮೀರದ ಆರತಿ ಶರ್ಮಾ ಅವರು ಕೆಲಸ ಅರಸಿ ಎಂಟು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು. ಮನೋಜ್ ಮಾರ್ಷಲ್ ಆರ್ಟ್ಸ್ ಮತ್ತು ಕಲಾರಿಪಯಟ್ಟು ತರಬೇತುದಾರನಾಗಿ ಕೆಲಸ ಮಾಡುತ್ತಿದ್ದರು. ಆರತಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ಐದು ವರ್ಷದ ಹಿಂದೆ ಮದುವೆ ಆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.