ADVERTISEMENT

ಬೆಂಗಳೂರು | ರಸ್ತೆ ಗುಂಡಿ ಮುಚ್ಚಿ ಸುಗಮ ಸಂಚಾರಕ್ಕೆ ಆದ್ಯತೆ ನೀಡಿ: ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 16:14 IST
Last Updated 22 ಸೆಪ್ಟೆಂಬರ್ 2025, 16:14 IST
ಮೂಡಲಪಾಳ್ಯ ಆರೋಗ್ಯ ಕೇಂದ್ರದಲ್ಲಿ ರಾಜೇಂದ್ರ ಕೆ.ವಿ. ಅವರು ಪರಿಶೀಲನೆ ನಡೆಸಿದರು
ಮೂಡಲಪಾಳ್ಯ ಆರೋಗ್ಯ ಕೇಂದ್ರದಲ್ಲಿ ರಾಜೇಂದ್ರ ಕೆ.ವಿ. ಅವರು ಪರಿಶೀಲನೆ ನಡೆಸಿದರು   

ಬೆಂಗಳೂರು: ಪಶ್ಚಿಮ ನಗರ ಪಾಲಿಕೆಯ ಆಯುಕ್ತ ರಾಜೇಂದ್ರ ಕೆ.ವಿ. ಅವರು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದ ಮೂಡಲಪಾಳ್ಯ ವಾರ್ಡ್‌ನ ವಿವಿಧ ಸ್ಥಳಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.  

ವಾರ್ಡ್ ರಸ್ತೆ ಪರಿಶೀಲಿಸಿದ ಆಯುಕ್ತರು, ‘ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಪಾದಚಾರಿ ಮಾರ್ಗದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಒತ್ತುವರಿಯಾದ ಪಾದಚಾರಿ ಮಾರ್ಗವನ್ನು ಗುರುತಿಸಿ, ತೆರವುಗೊಳಿಸಬೇಕು. ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

‘ವಾರ್ಡ್ ವ್ಯಾಪ್ತಿಯಲ್ಲಿ ನೀರು ನಿಂತು ನಾಗರಿಕರಿಗೆ ಯಾವುದೇ ರೀತಿಯ ಸಮಸ್ಯೆಗಳಾಗದಂತೆ, ಅಂತಹ ಸ್ಥಳಗಳನ್ನು ಗುರುತಿಸಿ ತಾತ್ಕಾಲಿಕವಾಗಿ ಕ್ರಮ ಕೈಗೊಂಡು, ಶಾಶ್ವತ ಪರಿಹಾರಕ್ಕಾಗಿ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ನಂತರ ಮೂಡಲಪಾಳ್ಯದ ನಗರ ಪ್ರಾಥಮಿಕ ಆರೋಗ್ಯ ಕೇಂದಕ್ಕೆ ಭೇಟಿ ನೀಡಿದ ರಾಜೇಂದ್ರ ಅವರು ‘ಆಸ್ಪತ್ರೆಯ ಸ್ವಚ್ಛತೆ, ವೈದ್ಯಕೀಯ ಉಪಕರಣಗಳ ಲಭ್ಯತೆ, ಸಾರ್ವಜನಿಕರಿಗೆ ನೀಡುವ ಸೇವೆಯ ಗುಣಮಟ್ಟವನ್ನು ಪರಿಶೀಲಿಸಿದರು. ಅಲ್ಲದೆ, ಅಗತ್ಯ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ಕಾರ್ಯಾಗಾರ: ಪಶ್ಚಿಮ ನಗರ ಪಾಲಿಕೆಗೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಆಯೋಗ ನಡೆಸುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುವ ಮಾಸ್ಟರ್‌ ಟ್ರೈನರ್‌ಗಳಿಗೆ ಮಲ್ಲೇಶ್ವರದ ಐಪಿಪಿ ಸಭಾಂಗಣದಲ್ಲಿ ರಾಜೇಂದ್ರ ಅವರ ಅಧ್ಯಕ್ಷತೆಯಲ್ಲಿ ಕಾರ್ಯಾಗಾರ ನಡೆಯಿತು. 

‘ಬನಶಂಕರಿ ದೇವಸ್ಥಾನ: ಸ್ವಚ್ಛತೆಗೆ ಆದ್ಯತೆ ನೀಡಿ’

ಬೆಂಗಳೂರು: ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರು ಸೋಮವಾರ ಬನಶಂಕರಿ ದೇವಸ್ಥಾನ ಹಾಗೂ ಸಾರಕ್ಕಿ ಮಾರುಕಟ್ಟೆ ಸುತ್ತ ಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.   ಬನಶಂಕರಿ ದೇವಸ್ಥಾನದ ಹಾಗೂ ಸಾರಕ್ಕಿ ಮಾರುಕಟ್ಟೆಯ ಪ್ರದೇಶಗಳಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ಅವರು ದೇವಸ್ಥಾನ ಹಾಗೂ ಮಾರುಕಟ್ಟೆಯ ಅಕ್ಕ–ಪಕ್ಕದ ಪ್ರದೇಶಗಳಲ್ಲಿ ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬನಶಂಕರಿ ದೇವಸ್ಥಾನದಿಂದ ಸಾರಕ್ಕಿ ಮಾರುಕಟ್ಟೆವರೆಗಿನ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು ಕೂಡಲೇ ತೆರವುಗೊಳಿಸಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶಿಸಿದರು.  ಪಾಲಿಕೆಯ ವತಿಯಿಂದ ನೀಡಿರುವ ಬೀದಿ ಬದಿ ವ್ಯಾಪಾರಿಗಳ ಗುರುತಿನ ಚೀಟಿ ಹೊಂದಿಲ್ಲದವರನ್ನು ಆ ಪ್ರದೇಶದಿಂದ ತೆರವುಗೊಳಿಸಬೇಕು ಎಂದು ಸೂಚಿಸಿದರು.

‘ರಸ್ತೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ’

ಬೆಂಗಳೂರು: ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನೀಲ್‌ ಕುಮಾರ್ ಅವರು ಸೋಮವಾರ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.  ನಾಗವಾರದಿಂದ ಥಣಿಸಂದ್ರ ಮಾರ್ಗವಾಗಿ ಬಳ್ಳಾರಿ ಮುಖ್ಯರಸ್ತೆ ಬೆಳ್ಳಹಳ್ಳಿ ಮೂಲಕ ಬಾಗಲೂರು ಮುಖ್ಯರಸ್ತೆಯಲ್ಲಿರುವ ರೇವಾ ಸರ್ಕಲ್‌ವರೆಗಿನ 9.7 ಕಿ.ಮೀ ರಸ್ತೆ ಹಾಗೂ ಬಾಗಲೂರು ಮುಖ್ಯರಸ್ತೆಯ ರೇವಾ ಸರ್ಕಲ್‌ನಿಂದ ರಾಷ್ಟ್ರೀಯ ಹೆದ್ದಾರಿ–7 (ಬಾಗಲೂರು ಕ್ರಾಸ್‌ನವರೆಗೆ) ಸುಮಾರು 2.5 ಕಿ.ಮೀ ಹಾಗೂ ಕೋಗಿಲು ಗ್ರಾಮದಿಂದ ಅಗ್ರಹಾರ ಸಂಪಿಗೆಹಳ್ಳಿ ಮಾರ್ಗವಾಗಿ ಎಂಸಿಇಸಿಎಚ್‌ಎಸ್‌ ಬಡಾವಣೆಗೆ ಸಂಪರ್ಕ ಕಲ್ಪಿಸುವ 3.5 ಕಿ.ಮೀ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಭಾಗದಲ್ಲಿ ಒತ್ತುವರಿಯಾದ ಪಾದಚಾರಿ ಮಾರ್ಗವನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.  ಥಣಿಸಂದ್ರದ ಪೌರಕಾರ್ಮಿಕರ ಮಸ್ಟರಿಂಗ್ ಸ್ಥಳಕ್ಕೆ ಭೇಟಿ ನೀಡಿದ ಸುನೀಲ್‌ ಅವರು ಪೌರಕಾರ್ಮಿಕರ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಬಯೋಮೆಟ್ರಿಕ್ ಯಂತ್ರದಲ್ಲಿ 13 ಮಂದಿ ಗೈರುಹಾಜರಾಗಿರುವುದನ್ನು ಗಮನಿಸಿದರು. ಆದರೆ ‌ಹಾಜರಾತಿ ಪುಸ್ತಕದಲ್ಲಿ ಮೂವರ ಹೆಸರು ಮಾತ್ರ ಗೈರುಹಾಜರಿ ಎಂದು ದಾಖಲಾಗಿರುವುದು ಪತ್ತೆಯಾಗಿದೆ. ಪೌರಕಾರ್ಮಿಕರು ನಿಗದಿತ ಸಮಯದಲ್ಲಿ ಮಸ್ಟರಿಂಗ್‌ ಪ್ರಕ್ರಿಯೆ ಪೂರ್ಣಗೊಳಿಸಬೇಕು ಹಾಜರಾತಿ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದು ಮೇಲ್ವಿಚಾರಕರಿಗೆ ಎಚ್ಚರಿಕೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.