ಬೆಂಗಳೂರು: ಪಣತ್ತೂರು, ಬಳಗೆರೆ, ವಿಬ್ ಗಯಾರ್ ಶಾಲೆ, ಗೇರ್ ಸ್ಕೂಲ್, ಜಯಂತಿನಗರ ಹಾಗೂ ಅರಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕೂಡಲೇ ದುರಸ್ತಿಗೊಳಿಸಬೇಕು. ರಾಷ್ಟ್ರ ಮಟ್ಟದಲ್ಲಿ ಮುಜುಗರ ಅನುಭವಿಸುವಂತಾಗಿದ್ದು, ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 15 ದಿನಗಳ ಗಡುವು ನೀಡಿದ್ದಾರೆ ಎಂದು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ತಿಳಿಸಿದರು.
ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಎಂಜಿನಿಯರ್‌ಗಳು, ಬೆಸ್ಕಾಂ, ಕೆಪಿಟಿಸಿಎಲ್, ಬೆಂಗಳೂರು ಜಲಮಂಡಳಿ, ಗೇಲ್, ರೈಲ್ವೆ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಮನ್ವಯ ಸಭೆಯಲ್ಲಿ ಅವರು ಮಾತನಾಡಿದರು.
ಕಾಡುಬೀಸನಹಳ್ಳಿ ಆರ್ಚ್‌ನಿಂದ ಪಣತ್ತೂರು ರೈಲ್ವೆ ಕೆಳಸೇತುವೆವರೆಗೆ ಒಂದು ಕಿ.ಮೀ. ರಸ್ತೆಯಲ್ಲಿ ಜಲ ಮಂಡಳಿಯು ಒಳ ಚರಂಡಿ ಕೊಳವೆಗಳನ್ನು ಜೋಡಿಸುವ ಕಾಮಗಾರಿ ಕೈಗೊಂಡಿದ್ದು, ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾರ್ಯ ಬಾಕಿ ಇದೆ. ಹಾಗಾಗಿ ಎರಡು ದಿನಗಳಲ್ಲಿ ರಸ್ತೆ ಸೇರಿ ಎಲ್ಲ ದುರಸ್ತಿ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಳಗೆರೆ ರಸ್ತೆ: ಬಳಗೆರೆ ರಸ್ತೆಯಲ್ಲಿ ಕೆಪಿಟಿಸಿಎಲ್ ವತಿಯಿಂದ ನಾಲ್ಕು ಕಿ.ಮೀ. ರಸ್ತೆ ಅಗೆದು ಹಾಗೆಯೇ ಬಿಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದಲ್ಲಿಯೇ ಈ ರಸ್ತೆಯನ್ನು ಸರಿಪಡಿಸಬೇಕು ಎಂದರು.
1.5 ಕಿ.ಮೀ ಉದ್ದದ ರಸ್ತೆಯಲ್ಲಿ ಜಲಮಂಡಳಿಯಿಂದ ಕೊಳವೆ ಜೋಡಿಸುವ ಕಾಮಗಾರಿ ಪೂರ್ಣಗೊಂಡಿದೆ. ಅಗೆದಿರುವ ರಸ್ತೆಯನ್ನು ಎರಡು ದಿನಗಳಲ್ಲಿ ದುರಸ್ತಿಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗೇರ್ ಸ್ಕೂಲ್ ರಸ್ತೆಯಲ್ಲಿ 4.5 ಕಿ.ಮೀ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 1.5 ಕಿ.ಮೀ ಉದ್ದದ ರಸ್ತೆಯ ಕಾಮಗಾರಿಯನ್ನು ಮೂರು ದಿನಗಳಲ್ಲಿ ಪೂರ್ಣಗೊಳಿಸಬೇಕು.
ಅಗರ ಕೆರೆಯ ರಸ್ತೆಯಲ್ಲಿ ಒಳಚರಂಡಿ ಕೊಳವೆ ಅಳವಡಿಸುವ ಕಾರ್ಯ ನಡೆಯುತ್ತಿದ್ದು, ಜಲಮಂಡಳಿ ಹಾಗೂ ನಗರ ಪಾಲಿಕೆ ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳಿಗೆ ಕೂಡಲೇ ರಸ್ತೆ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.
ಪೊಲೀಸ್ ಇಲಾಖೆಯ ಸಂಚಾರ ವಿಭಾಗ ಬಿಡುಗಡೆಗೊಳಿಸಿರುವ ಅಸ್ತ್ರಂ ಆ್ಯಪ್‌ನಲ್ಲಿ ಹಾಗೂ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‌ನಲ್ಲಿ ರಸ್ತೆ ಗುಂಡಿ ಮುಚ್ಚುವ ದೂರುಗಳಿಗೆ ಸ್ಪಂದಿಸಬೇಕು. ಆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು.
‘ನೋಡಲ್ ಅಧಿಕಾರಿಗಳಿಗೆ ಜವಾಬ್ದಾರಿ’
ಪೂರ್ವ ನಗರ ಪಾಲಿಕೆಯಲ್ಲಿ ಎಂಟು ಎಂಜಿನಿಯರಿಂಗ್ ವಿಭಾಗಗಳಿದ್ದು, ಇನ್ನು ಮುಂದೆ ಕಾರ್ಯಪಾಲಕ ಎಂಜಿನಿಯರ್‌ಗಳೇ ವಿಭಾಗ ಮಟ್ಟದ ನೋಡಲ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಡಿ.ಎಸ್. ರಮೇಶ್ ಸೂಚಿಸಿದರು.
‘ಕೆಪಿಟಿಸಿಎಲ್, ಬೆಂಗಳೂರು ಜಲಮಂಡಳಿ, ಗೇಲ್, ರೈಲ್ವೆ ಹಾಗೂ ಪೋಲಿಸ್ ಇಲಾಖೆಗಳಲ್ಲೂ ನಗರ ಪಾಲಿಕೆ ವಿಭಾಗವಾರು ಕಾರ್ಯಪಾಲಕ ಎಂಜಿನಿಯರ್ ಹಾಗೂ ಎಸಿಪಿ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಿಕೊಂಡು ಜವಾಬ್ದಾರಿ ವಹಿಸಿ, ರಸ್ತೆ ಕಾಮಗಾರಿ, ಪಾದಚಾರಿ ಒತ್ತುವರಿ ತೆರವು ಕಾರ್ಯಾಚರಣೆ, ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆಯಲ್ಲಿ ನಗರ ಪಾಲಿಕೆಯೊಂದಿಗೆ ಸಂಬಂಧಪಟ್ಟ ವಿವಿಧ ಇಲಾಖೆಗಳು ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.