ADVERTISEMENT

ಬೆಂಗಳೂರು: ‌ಗೂಂಡಾ ಕಾಯ್ದೆಯಡಿ ರೌಡಿ ಕಪ್ಪೆ ಬಂಧನ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 15:59 IST
Last Updated 5 ಡಿಸೆಂಬರ್ 2024, 15:59 IST
<div class="paragraphs"><p>ಬಂಧನ </p></div>

ಬಂಧನ

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿ, ರೌಡಿಶೀಟರ್ ಮುನಿಕೃಷ್ಣ(32) ಎಂಬಾತನನ್ನು ಈಶಾನ್ಯ ವಿಭಾಗದ ಅಮೃತಹಳ್ಳಿ ಠಾಣೆ ಪೊಲೀಸರು ಗೂಂಡಾ ಕಾಯ್ದೆಡಿ ಬಂಧಿಸಿದ್ದಾರೆ. 

ADVERTISEMENT

2012ರಿಂದಲೂ ಮುನಿಕೃಷ್ಣ ಅಲಿಯಾಸ್‌ ಕಪ್ಪೆ ಕೊಲೆ ಯತ್ನ, ಹಲ್ಲೆ, ಅಪಹರಣ, ಪೊಲೀಸ್‌ ಅಧಿಕಾರಿಗಳ ಮೇಲೆ ಹಲ್ಲೆ, ಮಹಿಳೆಯರ ಮೇಲೆ ದೌರ್ಜನ್ಯ ಸೇರಿ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿ ಆಗಿದ್ದ.

‘ಈತನ ರೌಡಿ ಚಟುವಟಿಕೆ ನಿಯಂತ್ರಿಸಲು ಅಮೃತಹಳ್ಳಿ ಪೊಲೀಸ್‌ ಠಾಣೆ ಪೊಲೀಸರ ವರದಿ ಆಧರಿಸಿ, ಈಶಾನ್ಯ ವಿಭಾಗದ ಡಿಸಿಪಿಯವರು 2023ರಲ್ಲಿ ಮುನಿಕೃಷ್ಣನನ್ನು ನಗರ ವ್ಯಾಪ್ತಿಯಿಂದ ದಾವಣಗೆರೆ ಜಿಲ್ಲೆಗೆ ಒಂದು ವರ್ಷದ ಅವಧಿಗೆ ಗಡೀಪಾರು ಮಾಡಿದ್ದರು. ಗಡೀಪಾರು ಅವಧಿ ಮುಕ್ತಾಯವಾದ ಮೇಲೆ ನಗರಕ್ಕೆ ವಾಪಸ್‌ ಬಂದಿದ್ದ ಮುನಿಕೃಷ್ಣ, ಮತ್ತೆ ಹಲ್ಲೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿ ಆಗಿ ತಲೆಮರೆಸಿಕೊಂಡಿದ್ದ’ ಎಂದು ಪೊಲೀಸರು ಹೇಳಿದರು.

‘ಗೂಂಡಾ ಕಾಯ್ದೆ ಅಡಿ ಮುನಿಕೃಷ್ಣನನ್ನು ಬಂಧನದಲ್ಲಿ ಇಡಲು ಡಿಸಿಪಿ ಅವರು ಆದೇಶ ಹೊರಡಿಸಿದ್ದರು. ವಿವಿಧೆಡೆ ಶೋಧ ನಡೆಸಿ ರೌಡಿಶೀಟರ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಇದುವರೆಗೂ ಪೋಕ್ಸೊ ಕಾಯ್ದೆಯಡಿ ಹಾಗೂ ಹಲ್ಲೆ, ಜೀವ ಬೆದರಿಕೆ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.