ADVERTISEMENT

ಆರ್‌.ಆರ್‌. ನಗರ ಜಂಕ್ಷನ್‌: ಮೇಲ್ಸೇತುವೆ ಕಾಮಗಾರಿ ಆರಂಭ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2022, 19:48 IST
Last Updated 18 ಸೆಪ್ಟೆಂಬರ್ 2022, 19:48 IST
ನಕ್ಷೆ
ನಕ್ಷೆ   

ಬೆಂಗಳೂರು: ಮೈಸೂರು ರಸ್ತೆಯ ರಾಜರಾಜೇಶ್ವರಿನಗರ ಜಂಕ್ಷನ್‌ನಲ್ಲಿ ಸಿಗ್ನಲ್‌ರಹಿತ ಮುಕ್ತ ಸಂಚಾರಕ್ಕೆ ₹71.45 ಕೋಟಿ ವೆಚ್ಚದ ಮೇಲ್ಸೇತುವೆ ಕಾಮಗಾರಿ ಆರಂಭವಾಗಿದೆ.

ನಾಯಂಡಹಳ್ಳಿಯಿಂದ ಆರ್‌.ಆರ್. ನಗರಕ್ಕೆ ಎರಡು ಕಡೆಗಳಿಂದ ಪ್ರತ್ಯೇಕ ಮಾರ್ಗಗಳು ನಿರ್ಮಾಣವಾಗಲಿವೆ. ಈ ಪೈಕಿ ಒಂದು ಮಾರ್ಗ ರ್‍ಯಾಂಪ್‌–ಮೇಲ್ಸೇತುವೆಯಾಗಲಿದೆ. ಆರ್‌.ಆರ್‌. ನಗರದಿಂದ ಜ್ಞಾನಭಾರತಿ ದ್ವಾರಕ್ಕೆ ದ್ವಿಮುಖ ಮೇಲ್ಸೇತುವೆ ನಿರ್ಮಾಣವಾಗಲಿದೆ.

ವೃಷಭಾವತಿ ನದಿ ಕಣಿವೆಯ ಅಗಲವನ್ನು ಈ ಭಾಗದಲ್ಲಿ 21.6 ಮೀಟರ್‌ಗೆ ವಿಸ್ತರಿಸಿ, ಅದರ ಮೇಲೆ ಪಿಲ್ಲರ್‌ ಅಳವಡಿಸಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗುತ್ತದೆ. ರಾಜರಾಜೇಶ್ವರಿ
ನಗರದ ಆರ್ಚ್‌ ಅನ್ನು ಹಾಗೆಯೇ ಉಳಿಸಿಕೊಳ್ಳುವ ಯೋಜನೆ ಇದೆ. ಈ ಯೋಜನೆಗೆ ಬಿಬಿಎಂಪಿ ‘ಸಿಗ್ನಲ್‌ಫ್ರೀ ರೋಟರಿ’ ಎಂದು ಹೆಸರಿಸಿದೆ.

ADVERTISEMENT

‘ಸಚಿವ ಮುನಿರತ್ನ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಜುಲೈ 5ರಿಂದ ಕಾಮಗಾರಿ ಆರಂಭವಾಗಿದೆ. ರಾಜಕಾಲುವೆ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಇದೀಗ ಮುಖ್ಯವಾಗಿ ರ್‍ಯಾಂಪ್‌ ಹಾಗೂ ಮೇಲ್ಸೇತುವೆ ಕೆಲಸವೂ ಆರಂಭವಾಗಿವೆ’ ಎಂದು ಬಿಬಿಎಂಪಿ ರಸ್ತೆ ಮೂಲಸೌಕರ್ಯದ ಮೇಲ್ವಿಚಾರಣೆ ಹೊಂದಿರುವ ಪ್ರಧಾನ ಎಂಜಿನಿಯರ್‌ ಪ್ರಹ್ಲಾದ್ ಮಾಹಿತಿ ನೀಡಿದರು.

‘ಈ ಮೇಲ್ಸೇತುವೆ ಕಾಮಗಾರಿ ನಿರ್ಮಿಸುವುದರಿಂದ ಇಲ್ಲಿ ಸೃಷ್ಟಿಯಾಗುತ್ತಿದ್ದ ವಾಹನದಟ್ಟಣೆಗೆ ಪರಿಹಾರ ಸಿಗುತ್ತದೆ. ಆದರೆ, ಜ್ಞಾನಭಾರತಿ ದ್ವಾರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ. ಇದರ ಬಗ್ಗೆ ಯಾರೂ ಯೋಚಿಸಿಲ್ಲ’ ಎಂದು ಆರ್.ಆರ್‌. ನಗರದ ಜಗದೀಶ್‌ ದೂರಿದರು.

‘ಕಾಮಗಾರಿ ನಡೆಸುವ ಸಂದರ್ಭದಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ರಸ್ತೆಗಳನ್ನು ನಿರ್ವಹಣೆ ಮಾಡಬೇಕು’ ಎಂದು ಪ್ರಸಾದ್‌ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.