
ಎಐ ಚಿತ್ರ
ಬೆಂಗಳೂರು: ಸಂಜಯನಗರದ ಕೃಷ್ಣಪ್ಪ ಲೇಔಟ್‍ನಲ್ಲಿ ಮಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೇಪಾಳದ ಮನಿಷಾ (29) ಅವರು ನಾಲ್ಕು ವರ್ಷದ ಮಗಳು ಸೃಷ್ಟಿಯನ್ನು ಕೊಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುರುವಾರ ರಾತ್ರಿ ಕೃತ್ಯ ನಡೆದಿದೆ.
ಪತಿ ಮತ್ತು ಮಗಳ ಜತೆ ಎಂಟು ತಿಂಗಳ ಹಿಂದೆಯಷ್ಟೇ ನಗರಕ್ಕೆ ಬಂದಿದ್ದ ಮನಿಷಾ ಅವರು ಕೃಷ್ಣಪ್ಪ ಲೇಔಟ್‍ನಲ್ಲಿ ಬಾಡಿಗೆ ಮನೆ ಪಡೆದು ನೆಲಸಿದ್ದರು. ದಂಪತಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
‘ಪತ್ನಿಯೊಂದಿಗೆ ಜಗಳವಾಡಿಕೊಂಡು ಗೋವಿಂದ ಬಹದ್ದೂರ್ ವಾಪಸ್ ನೇಪಾಳಕ್ಕೆ ಹೋಗಿದ್ದ. ಮನಿಷಾ ಅವರು ಪತಿಗೆ ಕರೆ ಮಾಡಿ ವಾಪಸ್ ಬರುವಂತೆ ಕೇಳಿಕೊಂಡಿದ್ದರು. ಆದರೂ, ಆತ ವಾಪಸ್ ಬಂದಿರಲಿಲ್ಲ. ಇದರಿಂದ ಒಂಟಿಯಾಗಿದ್ದ ಮನಿಷಾ ಅವರು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದರು. ಮಗಳನ್ನು ಸಾಕಲು ಪರದಾಡುತ್ತಿದ್ದರು. ಗುರುವಾರ ರಾತ್ರಿ ಸಹ ಪತಿಗೆ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಕರೆದಿದ್ದರು. ಅದಕ್ಕೆ ಆತ ಒಪ್ಪಿರಲಿಲ್ಲ. ನಿಂದನೆ ಮಾಡಿದ್ದ’ ಎಂದು ಪೊಲೀಸರು ಹೇಳಿದರು.
‘ಪತಿಯ ವರ್ತನೆಯಿಂದ ಬೇಸರಗೊಂಡಿದ್ದ ಮನಿಷಾ ಅವರು ಪುತ್ರಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದರು. ಬಳಿಕ, ಅವರೂ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಗುರುವಾರ ರಾತ್ರಿ ಮನೆ ಎದುರಿನ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದರು. ಸ್ಥಳಕ್ಕೆ ಬಂದ ಸಂಜಯನಗರ ಠಾಣೆ ಪೊಲೀಸರು, ಬಾಗಿಲು ಒಡೆದು ನೋಡಿದಾಗ ತಾಯಿ ಸಜೀವ ದಹನವಾಗಿರುವುದು ಗೊತ್ತಾಯಿತು. ಪುತ್ರಿ ಸೃಷ್ಟಿ ಗಂಭೀರವಾಗಿ ಗಾಯಗೊಂಡಿದ್ದಳು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾಳೆ’ ಎಂದು ಪೊಲೀಸರು ಹೇಳಿದರು.
ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸಂಬಂಧಿಕರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಸಂಜಯನಗರ ಠಾಣೆಯಲ್ಲಿ ಕೊಲೆ ಮತ್ತು ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.