ಬೆಂಗಳೂರು: ನಗರದ ಹೆಗ್ಗುರುತುಗಳಲ್ಲಿ ಒಂದಾಗಿರುವ ‘ಸೆಲೆಕ್ಟ್ ಬುಕ್ ಶಾಪ್’ ಮಾಲೀಕ ಕೆ.ಕೆ.ಎಸ್. ಮೂರ್ತಿ (94) ಅವರು ಸೋಮವಾರ ನಿಧನರಾಗಿದ್ದಾರೆ.
ಅವರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ, ಮಳಿಗೆಯ ಸಹ ಮಾಲೀಕರೂ ಆಗಿರುವ ಪುತ್ರ ಕೆ. ಸಂಜಯ್ ಇದ್ದಾರೆ. ಅಂತ್ಯಸಂಸ್ಕಾರ ಮಂಗಳವಾರ ನಡೆಯಿತು.
1945ರಲ್ಲಿ ಮೂರ್ತಿ ಅವರ ತಂದೆ ಕೆಬಿಕೆ ರಾವ್ ಸೆಲೆಕ್ಟ್ ಬುಕ್ ಶಾಪ್ ಅನ್ನು ಪ್ರಾರಂಭಿಸಿದ್ದರು. ಮ್ಯೂಸಿಯಂ ರಸ್ತೆಯ ಶೆಡ್ ಒಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಮಳಿಗೆ, 1984ರಲ್ಲಿ ಬ್ರಿಗೇಡ್ ರಸ್ತೆಗೆ ಸ್ಥಳಾಂತರವಾಗಿತ್ತು. ವೃತ್ತಿಯಲ್ಲಿ ಏರೋನಾಟಿಕಲ್ ಎಂಜಿನಿಯರ್ ಆಗಿದ್ದ ಮೂರ್ತಿ ಅವರು, ಮಳಿಗೆ ಸ್ಥಳಾಂತರವಾದ ಬಳಿಕ ವೃತ್ತಿ ತೊರೆದು ಅಂಗಡಿ ಜವಾಬ್ದಾರಿ ವಹಿಸಿಕೊಂಡಿದ್ದರು.
ಮಳಿಗೆಯು ಹಳೆಯ, ಅಪರೂಪದ ಪುಸ್ತಕಗಳಿಗೆ ಹೆಸರುವಾಸಿಯಾಗಿದೆ. ಇದನ್ನು ನಿರ್ವಹಿಸುತ್ತಿದ್ದ ಕೆಕೆಎಸ್ ಮೂರ್ತಿ ಅವರು ನಗರದ ಸಾಂಸ್ಕೃತಿಕ ರಂಗದ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.