ಬೆಂಗಳೂರು: ಆರ್‌ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಆಶ್ರಯನಗರದಲ್ಲಿ ಒಳಚರಂಡಿಗೆ ಇಳಿದು ಅಸ್ವಸ್ಥಗೊಂಡಿದ್ದ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.
ಪುಟ್ಟ (32) ಮೃತಪಟ್ಟವರು. ಅವರ ಜತೆಗೆ ಒಳಚರಂಡಿಗೆ ಇಳಿದಿದ್ದ ಅಂಥೋಣಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಆಶ್ರಯನಗರದ ಇಂದಿರಾ ಕ್ಯಾಂಟೀನ್ ಬಳಿಯ ಒಳಚರಂಡಿ ಶುಚಿಗೊಳಿಸಲು ಭಾನುವಾರ ಸಂಜೆ ಪುಟ್ಟ ಹಾಗೂ ಅಂಥೋಣಿ ಇಳಿದಿದ್ದರು. ಶುಚಿಗೊಳಿಸುವ ವೇಳೆ ಇಬ್ಬರೂ ಉಸಿರುಗಟ್ಟಿ ಅಸ್ವಸ್ಥರಾಗಿದ್ದರು. ಇಬ್ಬರನ್ನೂ ಹೊರಕ್ಕೆ ಕರೆತಂದು ಮಜ್ಜಿಗೆ ಹಾಗೂ ನೀರು ಕುಡಿಸಿ ಮನೆಗೆ ಕಳುಹಿಸಲಾಗಿತ್ತು. ಆದರೆ, ರಾತ್ರಿ ಮನೆಯಲ್ಲಿ ಮಲಗಿದ್ದ ಸ್ಥಳದಲ್ಲೇ ಪುಟ್ಟ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಆರ್‌ಎಂಸಿ ಯಾರ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
‘ಪುಟ್ಟ ಅವರು ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಯಾರೂ ದೂರು ನೀಡಿಲ್ಲ. ದೂರು ನೀಡಿದ ಬಳಿಕ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಒಳಚರಂಡಿಯನ್ನು ಮನುಷ್ಯರನ್ನು ಬಳಸಿ, ಸ್ವಚ್ಛಗೊಳಿಸಲು ನಿರ್ಬಂಧವಿದೆ. ಇದನ್ನು ಉಲ್ಲಂಘಿಸಿರುವುದು ಕಂಡು ಬಂದರೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಹಣದ ಆಮಿಷವೊಡ್ಡಿ ಇಬ್ಬರನ್ನೂ ಒಳಚರಂಡಿಗೆ ಇಳಿಸಿರುವ ಶಂಕೆಯಿದ್ದು, ತನಿಖೆ ನಡೆಸಲಾಗುತ್ತಿದೆ. ಸದ್ಯ ಪುಟ್ಟನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ನೇಮಗೌಡ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.