ADVERTISEMENT

ಸ್ಮಾರ್ಟ್‌ ಸಿಟಿ: ಅಧಿಕಾರ ಹಸ್ತಾಂತರಕ್ಕೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2021, 20:15 IST
Last Updated 20 ಆಗಸ್ಟ್ 2021, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಬೆಂಗಳೂರು: ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್‌ ಹುದ್ದೆಯನ್ನು ಬಿಟ್ಟುಕೊಡಲು ಬಿ.ಎಸ್‌.ಪ್ರಹ್ಲಾದ್‌ ಹಿಂದೇಟು ಹಾಕಿರುವುದು ಅಧಿಕಾರಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬಿಬಿಎಂಪಿಯ ರಾಜಕಾಲುವೆ ವಿಭಾಗ, ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್‌ ಆಗಿರುವ ಪ್ರಹ್ಲಾದ್‌ ಅವರಿಗೆ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್‌ ಹೊಣೆಯನ್ನು ಜೂನ್‌ನಲ್ಲಿ ವಹಿಸಲಾಗಿತ್ತು. ಸ್ಥಳ ನಿರೀಕ್ಷಣೆಯಲ್ಲಿದ್ದ ವಿನಾಯಕ ಜಿ.ಸುಗೂರ್‌ ಅವರನ್ನು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ನ ಮುಖ್ಯ ಎಂಜಿನಿಯರ್‌ ಹುದ್ದೆಗೆ ವರ್ಗಾಯಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿ ಮೂರು ದಿನಗಳು ಕಳೆದಿವೆ. ಆದರೆ,ಪ್ರಹ್ಲಾದ್‌ ಅವರು ಅಧಿಕಾರ ಹಸ್ತಾಂತರಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ದೂರಿದರು.

’ಅಧಿಕಾರ ವಹಿಸಿಕೊಳ್ಳಲು ಸುಗೂರು ಅವರು ಎರಡು ಸಲ ಕಚೇರಿಗೆ ಹೋಗಿದ್ದರು. ಅಧಿಕಾರ ವಹಿಸಿಕೊಳ್ಳುವಂತೆ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಸಹ ಸೂಚಿಸಿದ್ದರು. ಆದರೆ, ಪ್ರಹ್ಲಾದ್‌ ಅವರುಮೂರು ದಿನ ಬಿಟ್ಟು ಅಧಿಕಾರ ಹಸ್ತಾಂತರಿಸುವುದಾಗಿ ಮೌಖಿಕವಾಗಿ
ಹೇಳಿದ್ದಾರೆ. ವರ್ಗಾವಣೆ ರದ್ದುಪಡಿಸಲು ಈ ರೀತಿ ಮಾಡುತ್ತಿದ್ದಾರೆ‘ ಎಂದು ಮೂಲಗಳು ಹೇಳಿವೆ.

ADVERTISEMENT

’ಸ್ಮಾರ್ಟ್‌ ಸಿಟಿ ಯೋಜನೆಗೆ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್‌ಗಳನ್ನೇ ನೇಮಕ ಮಾಡ
ಲಾಗುತ್ತಿದೆ. ಕೆಸಿಆರ್‌ ನಿಯಮದಲ್ಲೂ ಈ ಬಗ್ಗೆ ಉಲ್ಲೇಖ ಇದೆ. ಈ ನಿಯಮ ಉಲ್ಲಂಘಿಸಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪತ್ರದ ಆಧಾರದಲ್ಲಿ ‍‍ಪ್ರಹ್ಲಾದ್‌ ಅವರನ್ನು ನೇಮಿಸಲಾಗಿತ್ತು. ಈ ಬಗ್ಗೆ ಆಕ್ಷೇಪವೂ ವ್ಯಕ್ತವಾಗಿತ್ತು. ಒಬ್ಬರೇ ಅಧಿಕಾರಿಗೆ ಮೂರು ಹುದ್ದೆಗಳನ್ನು ನೀಡುವುದು ಎಷ್ಟರ ಮಟ್ಟಿಗೆ ಸರಿ‘ ಎಂದು ಮುಖ್ಯ ಎಂಜಿನಿಯರ್‌ ಒಬ್ಬರು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯೆಗೆ ಪ್ರಹ್ಲಾದ್‌ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.