ADVERTISEMENT

ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯ: ಯುವತಿಗೆ ಇರಿದ ಸಾಫ್ಟ್‌ವೇರ್ ಉದ್ಯೋಗಿ ಸೆರೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 15:42 IST
Last Updated 19 ಸೆಪ್ಟೆಂಬರ್ 2025, 15:42 IST
   

ಬೆಂಗಳೂರು: ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿ ಯುವತಿಗೆ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ‌‌‌‌‌

ಆಂಧ್ರಪ್ರದೇಶದ ಸಾಯಿಬಾಬು ಚೆನ್ನೂರು ಬಂಧಿತ ಆರೋಪಿ.‌

ಪಶ್ಚಿಮ ಬಂಗಾಳದ 24 ವರ್ಷದ ಯುವತಿ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ದೂರುದಾರೆ ಯುವತಿ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ಗೊತ್ತಾಗಿದೆ.

ಪೊಲೀಸರು ಯುವತಿಯ ಹೇಳಿಕೆ ದಾಖಲಿಸಿಕೊಂಡು ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 109(1), 308(2), 75, 74, 329(4)ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಸೆ.16ರ (ಮಂಗಳವಾರ) ಮುಂಜಾನೆ ಆರೋಪಿ ವೈಟ್‌ಫೀಲ್ಡ್ ಠಾಣೆ ವ್ಯಾಪ್ತಿಯ ಪೇಯಿಂಗ್ ಗೆಸ್ಟ್‌ವೊಂದಕ್ಕೆ ನುಗ್ಗಿ ಯುವತಿಗೆ ಕಿರುಕುಳ ನೀಡಿದ್ದ ಎಂಬುದಾಗಿ ದೂರು ನೀಡಲಾಗಿದೆ.

ಸಂತ್ರಸ್ತೆ ನಗರದ ಬ್ಯಾಂಕ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಪಿ.ಜಿಯಲ್ಲಿ ನೆಲಸಿದ್ದಾರೆ. ಕೆಲವು ದಿನಗಳ ಹಿಂದೆ ಯುವತಿಗೆ ಆರೋಪಿ ಪರಿಚಯವಾಗಿದ್ದ. ಮಂಗಳವಾರ ಯುವತಿಯ ರೂಮ್‌ಗೆ ಹೋಗಿದ್ದ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದ. ಆಕೆ ವಿರೋಧಿಸಿದಾಗ ಚಾಕುವಿನಿಂದ ಆಕೆಯ ಬೆನ್ನಿಗೆ ಇರಿದಿದ್ದ. ಬಳಿಕ ಯುವತಿಯ ಖಾಸಗಿ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಆರೋಪಿ, ₹‌70 ಸಾವಿರ ನೀಡುವಂತೆ ಬೇಡಿಕೆಯಿಟ್ಟಿದ್ದ. ಅಷ್ಟು ಹಣ ಇಲ್ಲ ಎಂದಾಗ ಆಕೆಯ ಮೊಬೈಲ್ ಫೋನ್ ಪಡೆದುಕೊಂಡು ₹14 ಸಾವಿರ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಸ್ನೇಹಿತನಿಗೆ ಕರೆ ಮಾಡಿದ್ದ ಯುವತಿ: ‘ಆರೋಪಿ ಸ್ಥಳದಿಂದ ಹೋದ ಬಳಿಕ ಸ್ನೇಹಿತನಿಗೆ ಕರೆ ಮಾಡಿದ್ದ ಯುವತಿ ಘಟನೆಯ ಮಾಹಿತಿ ನೀಡಿದ್ದಳು. ಸ್ನೇಹಿತನ ನೆರವಿನಿಂದ ಯುವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂದು ಮೂಲಗಳು ಹೇಳಿವೆ. ವೈಟ್‌ಫೀಲ್ಡ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.