ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ವೇಳೆ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಸೇರಿದಂತೆ ಹಲವು ಪೊಲೀಸರು ಗಾಯಗೊಂಡಿದ್ದಾರೆ.
ಬುಧವಾರ ಮಧ್ಯಾಹ್ನ ಕ್ರೀಡಾಂಗಣದ ಗೇಟ್ ನಂಬರ್ 19ರ ಬಳಿ ಸೈದುಲು ಅಡಾವತ್ ಅವರು ಕರ್ತವ್ಯ ನಿರ್ವಹಿಸುತ್ತಿದ್ದರು. ಆಗ ಏಕಾಏಕಿ ಅಭಿಮಾನಿಗಳ ಗುಂಪು ನುಗ್ಗಿದ್ದು, ಹೆಚ್ಚಿನ ಸಿಬ್ಬಂದಿ ಇರದ ಕಾರಣ ಡಿಸಿಪಿ ಅವರೇ ಲಾಠಿ ಹಿಡಿದು, ಸಾಧ್ಯವಾದಷ್ಟು ಗುಂಪು ಚದುರಿಸಿದ್ದಾರೆ. ಆದರೂ ಜನದಟ್ಟಣೆಯ ನಡುವೆ ಸಿಲುಕಿಕೊಂಡ ಅವರು ಗಾಯಗೊಂಡರು. ಸದ್ಯ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ತಳ್ಳಾಟ, ನೂಕಾಟ ಹೆಚ್ಚಾದ ಕಾರಣ ಪೊಲೀಸರು ಕೆಳಗೆ ಬಿದ್ದು ಗಾಯಗೊಂಡರು. ಕೆಲವರು ಸಮೀಪದ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ.
‘ಸೈದುಲು ಅಡಾವತ್ ಅವರು ಚೇತರಿಸಿಕೊಳ್ಳುತ್ತಿದ್ದು, ಶೀಘ್ರವೇ ಮನೆಗೆ ತೆರಳಲಿದ್ದಾರೆ’ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.