ADVERTISEMENT

ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಪಿಎಂ ಮೋದಿ ಕೊಟ್ಟಿದ್ದ ಗಡುವು ಮುಕ್ತಾಯ!

40 ತಿಂಗಳ ಗಡುವು ನೀಡಿದ್ದ ‍ಪ್ರಧಾನಿ * ಇನ್ನೂ ನಡೆಯಬೇಕಿದೆ ಶೇ 90ರಷ್ಟು ಕಾಮಗಾರಿ

ಬಾಲಕೃಷ್ಣ ಪಿ.ಎಚ್‌
Published 21 ಅಕ್ಟೋಬರ್ 2025, 3:02 IST
Last Updated 21 ಅಕ್ಟೋಬರ್ 2025, 3:02 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯನ್ನು (ಬಿಎಸ್‌ಆರ್‌ಪಿ) 40 ತಿಂಗಳಲ್ಲಿ ಪೂರ್ಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಗಡುವು ಭಾನುವಾರ ಕೊನೆಗೊಂಡಿದೆ. ಇಲ್ಲಿಯವರೆಗೆ ಶೇ 10ರಷ್ಟು ಕಾಮಗಾರಿ ನಡೆದಿದ್ದು, ಇನ್ನೂ 40 ತಿಂಗಳು ಕಳೆದರೂ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಐದು ವರ್ಷಗಳ ಹಿಂದೆ, ಅಂದರೆ 2020ರ ಅಕ್ಟೋಬರ್‌ 21ರಂದು ಬಿಎಸ್‌ಆರ್‌ಪಿಗೆ ಅಂತಿಮ ಅನುಮೋದನೆ ನೀಡಲಾಗಿತ್ತು. ಆದರೆ, ಕಾಮಗಾರಿ ಆರಂಭವಾಗುವುದು ಸುಮಾರು 2 ವರ್ಷ ವಿಳಂಬವಾಗಿತ್ತು. 2022ರ ಜೂನ್‌ 20ರಂದು ಪ್ರಧಾನಿ ನರೇಂದ್ರಮೋದಿ ಅವರು ಶಂಕುಸ್ಥಾಪನೆ ಮಾಡಿ, 40 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಘೋಷಿಸಿದ್ದರು. 

ಯೋಜನೆ ಅನುಷ್ಠಾನಗೊಳಿಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಎಂಟರ್‌ಪ್ರೈಸರ್ಸ್‌ (ಕೆ- ರೈಡ್)  ಸಂಸ್ಥೆಯನ್ನು ಹುಟ್ಟುಹಾಕಲಾಗಿತ್ತು. 

ADVERTISEMENT

ಬಳಿಕ ಕಾಮಗಾರಿ ಪ್ರಕ್ರಿಯೆಗಳು ಆರಂಭಗೊಂಡರೂ ಮಧ್ಯೆ ಬೇರೆ ಬೇರೆ ವಿಘ್ನಗಳು ಕಾಮಗಾರಿಯು ವೇಗವಾಗಿ ಸಾಗದಂತೆ ತಡೆದವು. ಒಟ್ಟು 148 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್‌ಗಳ ಈ ಯೋಜನೆಯಲ್ಲಿ ಮೆಜೆಸ್ಟಿಕ್‌ನಿಂದ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣ ಸಂಪರ್ಕಿಸುವ ಕಾರಿಡಾರ್‌–1 ಬಹಳ ಮಹತ್ವದ, ಜನರಿಗೆ ಹೆಚ್ಚು ಉಪಯೋಗವಾಗುವ ಕಾರಿಡಾರ್‌ ಆಗಿತ್ತು. ಆದರೆ, ಬಿಎಂಆರ್‌ಸಿಎಲ್‌ನ ಪತ್ರಕ್ಕೆ ಮನ್ನಣೆ ನೀಡಿದ ಸರ್ಕಾರಗಳು ಕಾರಿಡಾರ್‌–1 ಬದಲು, 2ರ ಕಾಮಗಾರಿ ಮೊದಲು ಆರಂಭಿಸುವಂತೆ ಸೂಚಿಸಿದ್ದವು.

ಅದರಂತೆ ಚಿಕ್ಕಬಾಣಾವರದಿಂದ ಬೆನ್ನಿಗಾನಹಳ್ಳಿ ಸಂಪರ್ಕಿಸುವ ಕಾರಿಡಾರ್‌–2ರ ಕಾಮಗಾರಿ ಆರಂಭಿಸಲಾಗಿತ್ತು. ಇದ್ದಿದ್ದರಲ್ಲಿ ಇದೊಂದೇ ಕಾಮಗಾರಿ ಪ್ರಗತಿಯಲ್ಲಿತ್ತು. ಶೇ 30ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಇನ್ನೊಂದು ವರ್ಷದ ಒಳಗೆ ಚಿಕ್ಕಬಾಣಾವರದಿಂದ ಯಶವಂತಪುರದವರೆಗೆ ರೈಲು ಸಂಚಾರ ಆರಂಭಿಸುವ ಗುರಿಯನ್ನು ಕೆ–ರೈಡ್‌ ಇಟ್ಟುಕೊಂಡಿತ್ತು. ಈ ಮಧ್ಯೆ ಎಲ್‌ ಆ್ಯಂಡ್ ಟಿ ಕಂಪನಿ ಗುತ್ತಿಗೆಯಿಂದ ಹೊರ ನಡೆದ ಕಾರಣ ಕಾಮಗಾರಿ ಸ್ಥಗಿತಗೊಂಡಿದೆ. ಇದಾಗಿ ಏಳು ತಿಂಗಳು ಕಳೆದರೂ ಕಾಮಗಾರಿಗೆ ಮರುಚಾಲನೆ ದೊರೆತಿಲ್ಲ.

ಕಾರಿಡಾರ್‌–1ರ ಅಷ್ಟೇ ಅಲ್ಲದೆ, ಕೆಂಗೇರಿ–ವೈಟ್‌ಫೀಲ್ಡ್ ಸಂಪರ್ಕದ ಕಾರಿಡಾರ್‌–3ರಲ್ಲಿ ಕೂಡ ಯಾವುದೇ ಪ್ರಗತಿ ಕಂಡಿಲ್ಲ. ಹೀಲಲಿಗೆ–ರಾಜಾನುಕುಂಟೆ ಸಂಪರ್ಕದ ಕಾರಿಡಾರ್‌–4ರ ಕಾಮಗಾರಿ ಟೆಂಡರ್‌ ಪ್ರಕ್ರಿಯೆ ಮುಗಿದು, ಜಮೀನು ಹಸ್ತಾಂತರ ಪ್ರಕ್ರಿಯೆ ನಡೆದಿದೆ. 

‘ಚಿಕ್ಕಬಾಣಾವರದಿಂದ ಯಶವಂತಪುರದವರೆಗಿನ ನಿಲ್ದಾಣಗಳ ಕಾಮಗಾರಿ ನಡೆಯುತ್ತಿದೆ. ಹಳಿ ಕಾಮಗಾರಿ ನಡೆಸಬೇಕಾಗಿರುವವರು ಗುತ್ತಿಗೆಯಿಂದ ಹೊರಹೋಗುತ್ತಿರುವುದಾಗಿ ತಿಳಿಸಿ ಕೋರ್ಟ್‌ಗೆ ಹೋಗಿದ್ದಾರೆ. ಮರು ಟೆಂಡರ್‌ ಕರೆಯಲು ಒಪ್ಪಿಗೆ ಸಿಕ್ಕಿದೆ. ಟೆಂಡರ್‌ ಕರೆಯಬೇಕಿದೆ. ಕಾಮಗಾರಿ ಯಾವಾಗ ಮುಗಿಯಲಿದೆ ಎಂದು ಹೇಳಲು ಸದ್ಯಕ್ಕೆ ಸಾಧ್ಯವಿಲ್ಲ’ ಎಂದು ಕೆ–ರೈಡ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಬಿಎಸ್‌ಆರ್‌ಪಿ ಕಾಮಗಾರಿ ಸಾಗುತ್ತಿರುವ ಗತಿ ನೋಡಿದರೆ ದಶಕ ಕಳೆದರೂ ಪೂರ್ಣಗೊಳ್ಳುವ ಸಾಧ್ಯತೆ ಇಲ್ಲ. ಕಾಮಗಾರಿ ಕುಂಟುತ್ತಿರುವುದಲ್ಲ, ತೆವಳುತ್ತಿರುವುದನ್ನು ನೋಡಿದರೆ, ನನ್ನ ಜೀವಿತಾವಧಿಯಲ್ಲಿ ಉಪನಗರ ರೈಲು ಸಂಚರಿಸುವುದನ್ನು ನೋಡಲು ಆಗುವುದಿಲ್ಲ’ ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ಬೇಸರ ವ್ಯಕ್ತಪಡಿಸಿದರು.

ಬಿಎಸ್‌ಆರ್‌ಪಿ ನಕ್ಷೆ

ಜನಪ್ರತಿನಿಧಿಗಳ ನಿರ್ಲಕ್ಷ್ಯ

‘ಬೆಂಗಳೂರು ಉಪನಗರ ರೈಲು ಯೋಜನೆ ನನೆಗುದಿಗೆ ಬೀಳಲು ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ. ಪ್ರಚಾರಕ್ಕಾಗಿ ಗಿಮಿಕ್‌ ಮಾಡುವ ಬದಲು ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡಿದ್ದರೆ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ’ ಎಂದು ಸಿಟಿಜನ್ಸ್‌ ಫಾರ್ ಸಿಟಿಜನ್ಸ್‌ ಸಂಸ್ಥಾಪಕ ರಾಜಕುಮಾರ್‌ ದುಗಾರ್ ದೂರಿದರು. ‘ಬಿಎಸ್‌ಆರ್‌ಪಿ ಯೋಜನೆ ಬಂದಾಗ ನಾವೇ ತಂದಿದ್ದು ಎಂದು ಹೇಳಿಕೊಂಡು ತಿರುಗಿದ್ದ ಇಬ್ಬರು ಸಂಸದರು ಆ ನಂತರ ಎಷ್ಟು ಬಾರಿ ಪ್ರಗತಿ ಪರಿಶೀಲಿಸಿದ್ದಾರೆ? ಬೆಂಗಳೂರು ಗ್ರಾಮಾಂತರ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಎಸ್‌ಆರ್‌ಪಿ ಹಾದು ಹೋಗುತ್ತದೆ ಎಂಬುದನ್ನೇ ಮರೆತುಬಿಟ್ಟಿದ್ದಾರೆ’ ಎಂದು ಟೀಕಿಸಿದರು. ಪ್ರಧಾನಿಯವರ ಮಾತು ಉಳಿಸುವ ಜವಾಬ್ದಾರಿ ಈ ಐವರು ಸಂಸದರದ್ದಾಗಿತ್ತು. ಅವರು ಜವಾಬ್ದಾರಿಯನ್ನು ನಿರ್ವಹಿಸಲಿಲ್ಲ. ಇನ್ನು ರಾಜ್ಯಕ್ಕೆ ಬಂದರೆ ಮೂಲಸೌಕರ್ಯ ಇಲಾಖೆಯ ಅಡಿ ಈ ಯೋಜನೆ ಬರುತ್ತದೆ. ಆ ಇಲಾಖೆಯ ಸಚಿವರು ಕ್ರಿಯಾಶೀಲರು ಎಂದು ಹೆಸರಿದ್ದರೂ ಬಿಎಸ್‌ಆರ್‌ಪಿ ಬಗ್ಗೆ ಮುತುವರ್ಜಿ ವಹಿಸಿಲ್ಲ. ಎರಡೂವರೆ ವರ್ಷಗಳಲ್ಲಿ ಐದು ಬಾರಿ ಪ್ರಗತಿ ಪರಿಶೀಲಿಸಿದ್ದರೆ ಹೆಚ್ಚು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.