
ಬೆಂಗಳೂರು: ಪ್ರತ್ಯೇಕ ಪ್ರಕರಣದಲ್ಲಿ ಕಾರ್ಮಿಕ ಸೇರಿ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಿರಿನಗರ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ಕೌಟುಂಬಿಕ ಕಲಹದ ಕಾರಣಕ್ಕೆ ಗಗನ್ ರಾವ್ (31) ಎಂಬುವವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಾಸಗಿ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದ ಗಗನ್ ರಾವ್, ಮೇಘನಾ ಎಂಬುವರನ್ನು 11 ತಿಂಗಳ ಹಿಂದೆ ಮದುವೆಯಾಗಿದ್ದರು. ದಂಪತಿ ಹೊಸಕೆರೆಹಳ್ಳಿಯಲ್ಲಿ ವಾಸವಾಗಿದ್ದರು. ದಂಪತಿ ನಡುವೆ ನಿತ್ಯ ಜಗಳವಾಗುತ್ತಿತ್ತು. ಇದರಿಂದ ಮನನೊಂದಿದ್ದ ಗಗನ್ ರಾವ್, ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಭಾನುವಾರವೂ ಇಬ್ಬರ ನಡುವೆ ಜಗಳವಾಗಿತ್ತು. ಇದರಿಂದ ಬೇಸರಗೊಂಡು ನೇಣು ಹಾಕಿಕೊಂಡಿದ್ದಾರೆ. ಘಟನೆ ವೇಳೆ ಮೇಘನಾ ಮನೆಯಲ್ಲೇ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಸೊಸೆ ಮೇಘನಾ, ಮದುವೆಯ ನಂತರವೂ ಬೇರೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರಕ್ಕೆ ಮಗ, ಮೇಘನಾ ಜತೆ ಜಗಳವಾಡುತ್ತಿದ್ದ. ಪ್ರಿಯಕರನ ಜತೆ ಸೇರಿಕೊಂಡು ಕಿರುಕುಳ ನೀಡುತ್ತಿದ್ದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ಗಗನ್ ರಾವ್ ತಂದೆ ಲಕ್ಷ್ಮಣ್ ರಾವ್ ಪೊಲೀಸರಿಗೆ ದೂರು ನೀಡಿದ್ದಾರೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಮೇಘನಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.
ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆ: ಮೈಸೂರು ರಸ್ತೆಯ ನಾಯಂಡಹಳ್ಳಿ ಮೇಲ್ಸೇತುವೆಯಿಂದ ಕೂಲಿ ಕಾರ್ಮಿಕರೊಬ್ಬರು ಕೆಳಗೆ ಜಿಗಿದು ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಪ್ರಸಂಜಿತ್ ದಾಸ್ (29) ಮೃತ ಕಾರ್ಮಿಕ. ಹೂಡಿ ಬಳಿ ವಾಸವಾಗಿದ್ದ ಅವರು ಗಾರೆ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತ ಮಿಥುನ್ ಜತೆ ಪ್ರಸಂಜಿತ್ ದಾಸ್ ಆಟೊದಲ್ಲಿ ಹೂಡಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ನಾಯಂಡಹಳ್ಳಿ ಮೇಲ್ಸೇತುವೆಯಲ್ಲಿ ಆಟೊ ನಿಲ್ಲಿಸುವಂತೆ ಹೇಳಿದರು. ಚಾಲಕ ಆಟೊ ನಿಲ್ಲಿಸುತ್ತಿದ್ದಂತೆ ಪ್ರಸಂಜಿತ್ ದಾಸ್, ವಾಹನದಿಂದ ಕೆಳಗಿಳಿದು ಏಕಾಏಕಿ ಮೇಲ್ಸೇತುವೆಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮಿಥುನ್‍ನ ವಿಚಾರಣೆ ನಡೆಸಿದ್ದು, ಕೌಟುಂಬಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಪಶ್ಚಿಮ ಬಂಗಾಳದಲ್ಲಿ ನೆಲಸಿರುವ ಕುಟುಂಬ ಸದಸ್ಯರ ವಿಚಾರಣೆ ಬಳಿಕ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.