ADVERTISEMENT

ಬೆಂಗಳೂರು | ಅಪಘಾತ: ಮದುವೆ ಸಂಭ್ರಮದಲ್ಲಿದ್ದ ಯುವತಿ ಕುಟುಂಬಕ್ಕೆ ಆಘಾತ

ತಂದೆ, ಪುತ್ರಿ ಸ್ಥಳದಲ್ಲೇ ಸಾವು, ಆಸ್ಪತ್ರೆಗೆ ಹೊರಟಿದ್ದ ದಂಪತಿ ಪಾರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 15:27 IST
Last Updated 13 ಸೆಪ್ಟೆಂಬರ್ 2025, 15:27 IST
ಅಪಘಾತದಲ್ಲಿ ಮೃತಪಟ್ಟ ಯೇಸು ಹಾಗೂ ಅವರ ಪುತ್ರಿ ಜೆನ್ನಿಫರ್‌ 
ಅಪಘಾತದಲ್ಲಿ ಮೃತಪಟ್ಟ ಯೇಸು ಹಾಗೂ ಅವರ ಪುತ್ರಿ ಜೆನ್ನಿಫರ್‌    

ಬೆಂಗಳೂರು: ಹಾಸನದ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶೋತ್ಸವದ ಮೆರವಣಿಗೆಯತ್ತ ಕ್ಯಾಂಟರ್‌ ನುಗ್ಗಿ ಸಂಭವಿಸಿದ್ದ ಅಪಘಾತದ ಮಾದರಿಯಲ್ಲೇ ನಗರದ ಸುಮನಹಳ್ಳಿ ಜಂಕ್ಷನ್‌ನಲ್ಲಿ ಶನಿವಾರ ಬೆಳಿಗ್ಗೆ ನಿಯಂತ್ರಣ ತಪ್ಪಿದ ಟ್ರಕ್‌ವೊಂದು ಆಟೊ, ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ತಂದೆ ಹಾಗೂ ಪುತ್ರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಕ್ಕಗೊಲ್ಲರಹಟ್ಟಿಯ ನಿವಾಸಿ ಡಿ.ಯೇಸು(44) ಹಾಗೂ ಅವರ ಮಗಳು ಜೆನ್ನಿಫರ್‌ (24) ಮೃತಪಟ್ಟವರು. ಘಟನೆಯಲ್ಲಿ ಬೈಕ್‌ ಸವಾರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ದಂಪತಿ ಹಾಗೂ ಅವರ ಮೂರು ವರ್ಷದ ಮಗು ಅಪಾಯದಿಂದ ಪಾರಾಗಿದ್ದಾರೆ.

ಯೇಸು ಅವರು ಆಟೊ ಚಾಲಕರಾಗಿದ್ದರು. ಜೆನ್ನಿಫರ್‌ ‌ಅವರಿಗೆ ವಿವಾಹ ನಿಶ್ಚಯವಾಗಿತ್ತು. ಮುಂದಿನ ತಿಂಗಳು ಮದುವೆ ಕಾರ್ಯಕ್ರಮ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. 

ADVERTISEMENT

ಚರ್ಚ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ತಂದೆ ಹಾಗೂ ಮಗಳು ಶನಿವಾರ ಬೆಳಿಗ್ಗೆ ಆಟೊದಲ್ಲಿ ತೆರಳುತ್ತಿದ್ದರು. ಸುಮನಹಳ್ಳಿ ಜಂಕ್ಷನ್‌ನ ಮುಖ್ಯರಸ್ತೆಯಲ್ಲಿ ಬೆಳಿಗ್ಗೆ 7.45ರ ಸುಮಾರಿಗೆ ಆಟೊ ಸಾಗುವಾಗ ಕಾಮಾಕ್ಷಿಪಾಳ್ಯ – ಮಾಗಡಿ ರಸ್ತೆಯ ಕೈಗಾರಿಕಾ ಪ್ರದೇಶದಿಂದ ಬಂದ ಟ್ರಕ್‌ವೊಂದು ಇಳಿಜಾರಿನಲ್ಲಿ ನಿಯಂತ್ರಣ ತಪ್ಪಿ ಮೊದಲು ಬೈಕ್‌ಗೆ ಡಿಕ್ಕಿಯಾಗಿದೆ. ನಂತರ ಆಟೊ, ಕಾರು ಹಾಗೂ ಮತ್ತೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪಾದಚಾರಿ ಮಾರ್ಗದಲ್ಲಿದ್ದ ತಡೆಗೋಡೆಗೆ ಗುದ್ದಿತ್ತು. ಟ್ರಕ್‌ ಡಿಕ್ಕಿಯ ರಭಸಕ್ಕೆ ಆಟೊ ಎರಡು ಭಾಗವಾಗಿ ಟ್ರಕ್ ಕೆಳಗೆ ಸಿಲುಕಿಕೊಂಡಿತ್ತು. ಇದನ್ನು ಗಮನಿಸಿದ್ದ ಸ್ಥಳೀಯರು ಹಾಗೂ ಇತರೆ ವಾಹನ ಸವಾರರು ಆಟೊದಲ್ಲಿದ್ದ ತಂದೆ ಹಾಗೂ ಮಗಳ ರಕ್ಷಣೆಗೆ ಮುಂದಾದರು. ಅಷ್ಟರಲ್ಲಿ ಅವರು ಮೃತಪಟ್ಟಿದ್ದರು. ಘಟನೆಯಲ್ಲಿ ಮತ್ತೊಬ್ಬ ಬೈಕ್ ಸವಾರನ ಕಾಲಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗಾಲ್ಯಾಂಡ್‌ನವರಾದ ಟ್ರಕ್ ಚಾಲಕ ಪರಾರಿ ಆಗಿದ್ದಾರೆ. ಆತನ ಪತ್ತೆಗೆ ಶೋಧ ನಡೆಸಲಾಗುತ್ತಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ವಾಹನದ ಬ್ರೇಕ್‌ ವಿಫಲವಾಗಿತ್ತೇ ಅಥವಾ ಚಾಲಕ ಬ್ರೇಕ್‌ ಒತ್ತದೇ ಆ್ಯಕ್ಸಿಲೇಟರ್ ಒತ್ತಿದ್ದರಿಂದ ಅಪಘಾತ ಸಂಭವಿಸಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ದಂಪತಿ –ಮಗು ಪಾರು:

ಕಾರಿನಲ್ಲಿ ವಿಜಯ್ ಅವರು ತಮ್ಮ ಮೂರು ವರ್ಷದ ಪುತ್ರ ಹಾಗೂ ಪತ್ನಿ ಜೊತೆಗೆ ಆಸ್ಪತ್ರೆಗೆ ತೆರಳುತ್ತಿದ್ದರು. ಟ್ರಕ್ ಡಿಕ್ಕಿಯಾದ ರಭಸಕ್ಕೆ ಇವರ ಕಾರಿನ ಮುಂಭಾಗ ನಜ್ಜುಗುಜ್ಜಾಗಿದ್ದು, ಮೂವರೂ ಪಾರಾಗಿದ್ದಾರೆ.

‘ಪೂಜಾ ಕಲ್ಯಾಣ ಮಂಟಪ ರಸ್ತೆಯಿಂದ ವೇಗವಾಗಿ ಬಂದ ಟ್ರಕ್ ನಮ್ಮ ಕಣ್ಣೆದುರೇ ಆಟೊಗೆ ಡಿಕ್ಕಿ ಹೊಡೆಯಿತು. ನಂತರ ನಮ್ಮ ಕಾರಿಗೆ ಡಿಕ್ಕಿಯಾಯಿತು. ತಕ್ಷಣವೇ ಎಡಬದಿಗೆ ಕಾರು ತೆಗೆದುಕೊಂಡು ಪಾರಾದೆವು’ ಎಂದು ವಿಜಯ್‌ ತಿಳಿಸಿದರು.

ಘಟನಾ ಸ್ಥಳಕ್ಕೆ ಪಶ್ಚಿಮ ಸಂಚಾರ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದ ದೃಶ್ಯ 

ಬುಕಿಂಗ್‌ ರದ್ದು ಪಡಿಸಿದ್ದ ಚಾಲಕ:

ಕಾರ್ಖಾನೆಯೊಂದರಲ್ಲಿ ತಯಾರಿಸಿದ್ದ ಉತ್ಪನ್ನಗಳನ್ನು ನಗರದಿಂದ ಚೆನ್ನೈಗೆ ಕೊಂಡೊಯ್ಯಲು ಆನ್‌ಲೈನ್‌ನಲ್ಲಿ ಟ್ರಕ್ ಬುಕ್ ಮಾಡಲಾಗಿತ್ತು. ಶನಿವಾರ ಮುಂಜಾನೆ ಟ್ರಕ್ ಕಾರ್ಖಾನೆ ಆವರಣಕ್ಕೆ ಬಂದಿತ್ತು. ಚೆನ್ನೈನಿಂದ ಇನ್ನೂ 20 ಕಿ.ಮೀ ದೂರಕ್ಕೆ ಹೋಗಬೇಕು ಎಂದು ಕಾರ್ಖಾನೆ ಮಾಲೀಕರು ಹೇಳಿದ್ದರು. ಟ್ರಕ್ ಚಾಲಕ ಹೆಚ್ಚುವರಿ ಹಣ ಕೊಡುವಂತೆ ಕೇಳಿದ್ದ. ಮಾಲೀಕರು ಒಪ್ಪಿರಲಿಲ್ಲ. ಚಾಲಕ ಬುಕಿಂಗ್‌ ರದ್ದು ಪಡಿಸಿ ವಾಪಸ್‌ ತೆರಳುತ್ತಿದ್ದ. ಆಗ ಈ ಘಟನೆ ನಡೆದಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.