ಬೆಂಗಳೂರು: ಒಂದು ಬಾರಿ ಪರಿಹಾರ (ಒಟಿಎಸ್) ಯೋಜನೆ ಬುಧವಾರ (ಜುಲೈ 31) ಮುಕ್ತಾಯವಾಗುತ್ತಿದ್ದರೂ, ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನೂ 2.87 ಲಕ್ಷ ಆಸ್ತಿಗಳಿಂದ ತೆರಿಗೆ ಹಿಂಬಾಕಿ ಉಳಿದಿದೆ. ತೆರಿಗೆ ಪುನರ್‌ನಿಗದಿ ಮಾಡಿದ ಆಸ್ತಿಗಳೂ ಸೇರಿದಂತೆ ಒಟ್ಟು ₹831 ಕೋಟಿ ಆಸ್ತಿ ತೆರಿಗೆ ಪಾವತಿಯಾಗಬೇಕಿದೆ.
ಎರಡು ವರ್ಷಕ್ಕಿಂತಲೂ ಹಿಂದಿನಿಂದ ಬಾಕಿ ಉಳಿಸಿಕೊಂಡಿದ್ದ ಆಸ್ತಿ ತೆರಿಗೆ ಸಂಗ್ರಹಿಸಲು ‘ವಸೂಲಿ ಅಭಿಯಾನ’ ಆರಂಭಿಸಲಾಗಿತ್ತು. ಹಲವು ಬಾರಿ ನೋಟಿಸ್ ನೀಡಿದರೂ ನಿರೀಕ್ಷಿತ ಮಟ್ಟದಲ್ಲಿ ತೆರಿಗೆ ಸಂಗ್ರಹವಾಗಿಲ್ಲ.
ನಗರದ ವ್ಯಾಪ್ತಿಯಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಆಸ್ತಿಗಳ ಮಾಲೀಕರಿಗೆ ತೆರಿಗೆ ಬಾಕಿ ಪಾವತಿ ಮಾಡಲು ಮಾರ್ಚ್‌ನಲ್ಲೇ ಬೇಡಿಕೆ ಪತ್ರ ನೀಡಲಾಗಿತ್ತು. ಬಡ್ಡಿ ಹಾಗೂ ದಂಡಕ್ಕೆ ವಿನಾಯಿತಿ ನೀಡಿ ಒಂದು ಬಾರಿ ಪರಿಹಾರ (ಒಟಿಎಸ್) ಅವಕಾಶ ನೀಡಿದ್ದರೂ ಆಸ್ತಿ ಮಾಲೀಕರು ತೆರಿಗೆ ಪಾವತಿಸಲು ಆಸಕ್ತಿ ತೋರಿಲ್ಲ.
ಕಟ್ಟಡದ ವಾಸ್ತವ ವಿಸ್ತೀರ್ಣ ಅಥವಾ ವಲಯದ ಆಯ್ಕೆಯಲ್ಲಿ ತಪ್ಪಾಗಿ, ಆಸ್ತಿ ತೆರಿಗೆಯನ್ನು ಕಡಿಮೆ ಪಾವತಿಸುತ್ತಿದ್ದ ನಾಲ್ಕು ಲಕ್ಷಕ್ಕೂ ಅಧಿಕ ಆಸ್ತಿಗಳ ಮಾಲೀಕರಿಗೆ ತೆರಿಗೆಯನ್ನು ಪುನರ್‌ನಿಗದಿ ಮಾಡಿ ಪಾಲಿಕೆ ವತಿಯಿಂದ ‘ಬೇಡಿಕೆ ಪತ್ರ’ ನೀಡಲಾಗಿತ್ತು. ಹಿಂದಿನ ವರ್ಷಗಳ ತೆರಿಗೆಗೆ ಬಡ್ಡಿ ಹಾಗೂ ದಂಡವನ್ನು ಮನ್ನಾ ಮಾಡಿ, ಆಸ್ತಿ ತೆರಿಗೆಯನ್ನು ಮಾತ್ರ ಪಾವತಿಸಲು ಒಟಿಎಸ್ ವ್ಯವಸ್ಥೆಯನ್ನು ಸರ್ಕಾರ ಜಾರಿಗೆ ತಂದಿತ್ತು. ಜುಲೈ 31ರವರೆಗೆ ಈ ವ್ಯವಸ್ಥೆ ಜಾರಿಯಲ್ಲಿರಲಿದ್ದು, ನಂತರ ಎಲ್ಲ ರೀತಿಯ ಬಡ್ಡಿ ಹಾಗೂ ದಂಡ ಪಾವತಿಸಬೇಕಾಗುತ್ತದೆ.
ಏಪ್ರಿಲ್ 1ರಂತೆ 3.95 ಲಕ್ಷ ಆಸ್ತಿಗಳಿಗೆ ಬೇಡಿಕೆ ಪತ್ರ ನೀಡಲಾಗಿತ್ತು. ಇದರ ಮೊತ್ತ ₹733.71 ಕೋಟಿಯಾಗಿತ್ತು. ಜುಲೈ 29ರವರೆಗೆ ಸುಮಾರು ಒಂದು ಲಕ್ಷ ಆಸ್ತಿಗಳ ಮಾಲೀಕರು ಮಾತ್ರ ಬೇಡಿಕೆ ಪತ್ರಕ್ಕೆ ಅನುಗುಣವಾಗಿ ತೆರಿಗೆಯನ್ನು ಪಾವತಿಸಿದ್ದಾರೆ. ಇನ್ನೂ, 2.87 ಲಕ್ಷ ಆಸ್ತಿಗಳಿಂದ ₹548.94 ಕೋಟಿ ಬಾಕಿ ಉಳಿದಿದೆ.
ಆಸ್ತಿ ತೆರಿಗೆಯನ್ನು ತಪ್ಪಾಗಿ ಪಾವತಿಸುತ್ತಿರುವ 16,904 ಆಸ್ತಿಗಳಿಗೆ ತೆರಿಗೆ ಪುನರ್‌ನಿಗದಿ ಮಾಡಿ ‘ಬೇಡಿಕೆ ಪತ್ರ’ ನೀಡಲಾಗಿದೆ. ಈ ಆಸ್ತಿಗಳಿಂದ ₹282.59 ಕೋಟಿ ಬಾಕಿ ಉಳಿದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
ಆಸ್ತಿ ಜಪ್ತಿ: ‘ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಮಾಲೀಕರಿಗೆ ಒಟಿಎಸ್ ವ್ಯವಸ್ಥೆಯಡಿ ಸಾಕಷ್ಟು ಸಮಯ ನೀಡಲಾಗಿತ್ತು. ಆದರೂ ಪಾವತಿ ಮಾಡಿಲ್ಲ. ಹೀಗಾಗಿ, ಆಸ್ತಿಯನ್ನು ವಶಕ್ಕೆ ಪಡೆಯಲು, ಉಪ ನೋಂದಣಾಧಿಕಾರಿ ಕಚೇರಿಗಳಿಗೆ ಮಾಹಿತಿ ಕಳುಹಿಸಿ ‘ಅಟ್ಯಾಚ್’ (ಋಣಭಾರ) ಮಾಡಿಕೊಳ್ಳುವ ಪ್ರಕ್ರಿಯೆ ನಡೆಸಲಾಗುವುದು’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರು ಮಾಹಿತಿ ನೀಡಿದರು.
ಆಸ್ತಿ ತೆರಿಗೆ ಬಾಕಿ ಎಲ್ಲೆಲ್ಲಿ ಎಷ್ಟು?
(2024ರ ಜುಲೈ 29ರಂತೆ) ವಲಯ; ಆಸ್ತಿಗಳು; ಬಾಕಿ
ಬೊಮ್ಮನಹಳ್ಳಿ; 45381; ₹71.10 ಕೋಟಿ
ದಾಸರಹಳ್ಳಿ; 13176; ₹18.71 ಕೋಟಿ
ಪೂರ್ವ; 39400; ₹76.52 ಕೋಟಿ
ಮಹದೇವಪುರ; 60485; ₹124.23 ಕೋಟಿ
ರಾಜರಾಜೇಶ್ವರಿನಗರ; 44570; ₹43.27 ಕೋಟಿ
ದಕ್ಷಿಣ; 27157; ₹84.11 ಕೋಟಿ
ಪಶ್ಚಿಮ; 27870; ₹89.20 ಕೋಟಿ
ಯಲಹಂಕ; 29867; ₹41.81 ಕೋಟಿ
ಒಟ್ಟು; 287906; ₹548.94 ಕೋಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.