ADVERTISEMENT

ಮೂಲ ಯಾವುದಯ್ಯಾ ಮಾಲಿನ್ಯಕ್ಕೆ?

ಪ್ರತಿ ಬೀದಿಯ ವಾತಾವರಣ ಎಷ್ಟು ಕಲುಷಿತ –ವಿವರ ಒದಗಿಸಲಿದೆ ‘ಆ್ಯಂಬೀ * 100 ಕಡೆ ಸೆನ್ಸರ್‌ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 2:51 IST
Last Updated 21 ನವೆಂಬರ್ 2019, 2:51 IST
ಜೈದೀಪ್‌ ಸಿಂಗ್‌
ಜೈದೀಪ್‌ ಸಿಂಗ್‌   

ಬೆಂಗಳೂರು: ವಾಯುಮಾಲಿನ್ಯ ಹೆಚ್ಚುತ್ತಿದೆ ಎಂಬುದು ಗೊತ್ತಿರುವ ವಿಷಯವೆ. ಆದರೆ, ಈ ವಾಯುಮಾಲಿನ್ಯದ ಮೂಲ ಯಾವುದು ಎಂಬುದನ್ನು ನಿಖರವಾಗಿ ತಿಳಿಯಲು ಸಾಧ್ಯವೇ?

‘ಕೃತಕ ಬುದ್ಧಿಮತ್ತೆ’ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ತಂತ್ರಜ್ಞಾನ ಬಳಸಿ ವಾಯು ಮಾಲಿನ್ಯದ ಮೂಲವನ್ನು ಗುರುತಿಸುವ ಕಾರ್ಯದಲ್ಲಿ ನಗರದ ನವೋದ್ಯಮ ಸಂಸ್ಥೆ ‘ಆ್ಯಂಬೀ’ ತೊಡಗಿಕೊಂಡಿದೆ.

‘ಉಪಗ್ರಹದ ಮೂಲಕ ಲಭ್ಯವಾಗುವ ಡೇಟಾ, ಸಾರ್ವಜನಿಕ ವಾಗಿ ಲಭ್ಯವಿರುವ ಡೇಟಾಗಳ ಜೊತೆಗೆ ನಾವೇ ಸಂಗ್ರಹಿಸುವ ಉಷ್ಣಾಂಶ, ತೇವಾಂಶ ಮುಂತಾದ ವಿವರಗಳನ್ನು ಕೃತಕ ಬುದ್ಧಿಮತ್ತೆಯ ಕ್ರಮಾವಳಿ ಯಲ್ಲಿ (ಅಲ್ಗಾರಿದಂ) ಅಳವಡಿಸು ತ್ತೇವೆ. ಇದರ ವಿಶ್ಲೇಷಣೆಯಿಂದ ವಾಯು ಮಾಲಿನ್ಯದ ನಿಖರ ವಿವರ ತಿಳಿಯಬಹುದು’ ಎನ್ನುತ್ತಾರೆ ಆ್ಯಂಬೀ ಸಂಸ್ಥೆಯ ಸಹಸಂಸ್ಥಾಪಕ ಜೈದೀಪ್‌ ಸಿಂಗ್‌.

ADVERTISEMENT

ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ದತ್ತಾಂಶ ಕಲೆ ಹಾಕಲು ಬೆಂಗಳೂರಿನಲ್ಲಿ ಈ ವರ್ಷದ ಅಂತ್ಯದ ಒಳಗೆ 100 ಸೆನ್ಸರ್‌ಗಳನ್ನು ಅಳವಡಿಸಲಿದ್ದೇವೆ. ಪ್ರತಿ ಪಿನ್‌ಕೋಡ್‌ ವ್ಯಾಪ್ತಿಯ ಪ್ರದೇಶದ ಮಾಹಿತಿ ಕಲೆ ಹಾಕಲಿದ್ದೇವೆ. ಆರು ತಿಂಗಳಲ್ಲಿ ನಗರದ ಪ್ರತಿ ಬೀದಿಯ ವಾಯುಮಾಲಿನ್ಯ ವಿವರ ಸಿಗಲಿದೆ. ಈ ಮಾಹಿತಿ ಶೇ 90 ರಷ್ಟು ನಿಖರವಾಗಿರಲಿದೆ’ ಎಂದು ಮಾಹಿತಿ ನೀಡಿದರು.

ವಾಹನಗಳು ಹೊರಸೂಸಿದ ಹೊಗೆ, ಕೈಗಾರಿಕೆಯಿಂದ ವಾತಾವರಣಕ್ಕೆ ಬಿಡುಗಡೆಯಾದ ಹೊಗೆ, ಕಸವನ್ನು ಸುಟ್ಟ ಹೊಗೆ, ಕಟ್ಟಡ ನಿರ್ಮಾಣದಿಂದ ಅಥವಾ ಕೆಡವಿದ್ದರಿಂದ ಉಂಟಾದ ದೂಳು... ಹೀಗೆ ಯಾವ ಕಾರಣದಿಂದ ಮಾಲಿನ್ಯ ಪ್ರಮಾಣ ಹೆಚ್ಚಿದೆ ಎಂಬುದನ್ನು ನಿಖರವಾಗಿ ತಿಳಿಯಬಹುದು.

‘ಮಾಲಿನ್ಯಕಾರಕಗಳ ಮೂಲದ ಪಾಲಿನ (ಸೋರ್ಸ್‌ ಅಪೋರ್ಷನ್‌ಮೆಂಟ್‌) ಆಧಾರದಲ್ಲಿ ನಾವು ಯಾವ ಕಾರಣದಿಂದಾಗಿ ವಾಯುಮಾಲಿನ್ಯ ಉಂಟಾಗಿದೆ ಎಂಬುದನ್ನು ನಿಖರವಾಗಿ ಪತ್ತೆ ಹಚ್ಚಬಲ್ಲೆವು. ನಾವು ಅಳವಡಿಸಿರುವ ಸೆನ್ಸರ್‌ಗಳ ಮೂಲಕ ದಿನದ 24 ಗಂಟೆಯೂ ಕಲೆ ಹಾಕಿದ ಪಾರ್ಟಿಕಲ್‌ ಮ್ಯಾಟರ್‌ (ಪಿ.ಎಂ)–2.5, ಪಿ.ಎಂ–1, ಕಾರ್ಬನ್‌ ಡಯಾಕ್ಸೈಡ್‌, ಸಲ್ಫರ್‌ ಡಯಾಕ್ಸೈಡ್‌ ನೈಟ್ರಸ್‌ ಆಕ್ಸೈಡ್‌, ಉಷ್ಣಾಂಶ ಹಾಗೂ ತೇವಾಂಶದ ಮಾಹಿತಿ ಹಾಗೂ ಕೃತಕ ಬುದ್ಧಿ ಮತ್ತೆ ನಮ್ಮ ನೆರವಿಗೆ ಬರುತ್ತದೆ. ಕಾರಣ ತಿಳಿಯುವುದರಿಂದ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವುದು ಸುಲಭವಾಗಲಿದೆ’ ಎಂದು ಸಿಂಗ್‌ ಹೇಳಿದರು.

ಕೆಲವು ಕೈಗಾರಿಕೆಗಳು ನಿಗದಿತ ಪ್ರಮಾಣದಲ್ಲಿ ಮಾಲಿನ್ಯಕಾರಕಗಳನ್ನು ಹೊಗೆಯ ರೂಪದಲ್ಲಿ ವಾತಾವರಣಕ್ಕೆ ಬಿಡುಗಡೆ ಮಾಡಿದರೂ ಅದನ್ನು ಪತ್ತೆ ಹಚ್ಚಲು ಅಥವಾ ಸಾಬೀತುಪಡಿಸಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೂ ಸಾಧ್ಯವಾಗುತ್ತಿಲ್ಲ. ಈ ಕೊರತೆಯನ್ನೂ ನೀಗುವ ತಂತ್ರಜ್ಞಾನವನ್ನು ಆ್ಯಂಬೀ ಅಭಿವೃದ್ಧಿಪಡಿಸಿದೆ.

‘ನಾವು ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನ ಈ ವಿಚಾರದಲ್ಲೂ ಪ್ರಯೋಜನಕ್ಕೆ ಬರಲಿದೆ. ಆದರೆ, ನಿರ್ದಿಷ್ಟ ಕೈಗಾರಿಕೆಯ ಸಮೀಪದಲ್ಲೇ ಸೆನ್ಸರ್‌ಗಳನ್ನು ಅಳವಡಿಸಲು ಸಂಬಂಧಪಟ್ಟ ಪ್ರಾಧಿಕಾರ ಅವಕಾಶ ಕಲ್ಪಿಸಿಕೊಡಬೇಕು’ ಎಂದು ಸಿಂಗ್ ತಿಳಿಸಿದರು.

ಭಾರಿ ಕೈಗಾರಿಕೆಗಳಿರುವ ಅನೇಕ ಕಡೆ ಸ್ಥಳೀಯ ನಿವಾಸಿಗಳು ನಿರ್ದಿಷ್ಟ ಪ್ರಮಾಣದ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಉದಾಹರಣೆಗೆ, ಕಚ್ಛಾತೈಲಗಳ ರಿಫೈನರಿಗಳಲ್ಲಿ ಕಾರ್ಯನಿರ್ವಹಿಸುವವರಲ್ಲಿ ಕ್ಯಾನ್ಸರ್‌ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಆದರೆ, ಇದನ್ನು ಸಾಬೀತುಪಡಿಸುವಂತಹ ಪುರಾವೆಗಳಿಲ್ಲ.

‘ಇಂತಹ ಕಾಯಿಲೆಗಳಿಗೆ ವಾಯುಮಾಲಿನ್ಯ ಕಾರಣವಾಗಿದ್ದರೆ, ಅದನ್ನು ನಿರೂಪಿಸಲು ಅಗತ್ಯವಿರುವ ತಂತ್ರಜ್ಞಾನ ನಮ್ಮಲ್ಲಿದೆ. ಇದರ ಪತ್ತೆಗೆ ಬೇಕಾದ ದತ್ತಾಂಶಗಳನ್ನು ನಾವು ಒದಗಿಸಬಲ್ಲೆವು. ಅದನ್ನು ಹಾಗೂ ಸ್ಥಳೀಯರ ಆರೋಗ್ಯಕ್ಕೆ ಸಂಬಂಧಿಸಿದ ವಿವರಗಳನ್ನು ತಾಳೆ ಮಾಡಬೇಕಾಗುತ್ತದೆ. ಈ ಕಾರ್ಯವನ್ನು ವೈದ್ಯಕೀಯ ಕ್ಷೇತ್ರದ ಸಿಬ್ಬಂದಿಯ ನೆರವೂ ಅಗತ್ಯ’ ಎಂದು ಸಿಂಗ್‌ ತಿಳಿಸಿದರು.

14 ದಿನಗಳ ಮಾಲಿನ್ಯ ಮುನ್ಸೂಚನೆ

‘ಮುಂದಿನ 14 ದಿನಗಳಲ್ಲಿ ಮಾಲಿನ್ಯದ ಪ್ರಮಾಣ ಎಷ್ಟು ಇರಲಿದೆ ಎಂಬ ಮುನ್ಸೂಚನೆಯನ್ನೂ ನೀಡಬಹುದು. ಇದನ್ನು ಕಂಡುಕೊಳ್ಳಲು ನಮಗೆ ಕನಿಷ್ಠ 90 ದಿನಗಳ ದತ್ತಾಂಶದ ಅಗತ್ಯವಿದೆ. ಮುನ್ನೆಚ್ಚರಿಕೆ ವಹಿಸಲು ಈ ಮಾಹಿತಿ ನೆರವಾಗಲಿದೆ’ ಎಂದು ಜೈದೀಪ್‌ ಸಿಂಗ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.