
ಬೆಂಗಳೂರು: ಶಸ್ತ್ರಾಸ್ತ್ರ ಸ್ಥಳ ಪತ್ತೆ ರೇಡಾರ್, ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅವಶೇಷಗಳಡಿ ಸಿಲುಕಿರುವವರ ಪತ್ತೆ ಹಾಗೂ ರಕ್ಷಣೆ ಮಾಡುವ ರೋಬೊ ಡಾಗ್, ಶತ್ರು ರಾಷ್ಟ್ರಗಳ ಡ್ರೋನ್‌ಗಳ ಪತ್ತೆ ಮಾಡಿ ಲೇಸರ್ ಮೂಲಕ ಸುಟ್ಟು ಹಾಕುವ ಡ್ರೋನ್ ಪ್ರತಿರೋಧಕ ವ್ಯವಸ್ಥೆ...
ಇವು ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ವಸ್ತು ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೆಯಾಗಿವೆ.
ಭಾರತ, ಉತ್ತರ ಕೊರಿಯಾ, ಉರುಗ್ವೆ, ರಷ್ಯಾ, ಇಂಗ್ಲೆಂಡ್, ಇಸ್ರೇಲ್, ಫ್ರಾನ್ಸ್, ಬೆಲ್ಜಿಯಂ, ಫಿನ್‌ಲ್ಯಾಂಡ್, ಜರ್ಮನಿ, ಸಿಂಗಪುರ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದು, ತಂತ್ರಜ್ಞಾನ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಅನಾವರಣಗೊಳಿಸಲಾಗಿದೆ.
‘ಭವಿಷ್ಯೋದಯ’ ಘೋಷವಾಕ್ಯದಡಿ ನಡೆಯುತ್ತಿರುವ ಈ ಶೃಂಗದಲ್ಲಿ ಐಟಿ, ಬಿಟಿ, ಕೃಷಿ, ಆರೋಗ್ಯ, ಲಸಿಕೆ, ಸೈಬರ್ ಸೆಕ್ಯುರಿಟಿ, ವೈದ್ಯಕೀಯ ಮತ್ತು ಆರ್ಥಿಕ ತಂತ್ರಜ್ಞಾನಗಳಿಗೆ ಒತ್ತು ನೀಡಲಾಗಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ‘ವೆಪನ್ ಲೊಕೆಟಿಂಗ್ ರೇಡಾರ್’ (ಡಬ್ಲ್ಯುಎಲ್ ಆರ್) ಅಭಿವೃದ್ಧಿಪಡಿಸಿದೆ. ಇದು ಶಸ್ತ್ರಾಸ್ತ್ರ ಸ್ಥಳ ಪತ್ತೆ ಹೆಚ್ಚುವ ಸಾಮರ್ಥ್ಯ ಹೊಂದಿದೆ. ಶತ್ರು ರಾಷ್ಟ್ರಗಳು ಭೂ, ವಾಯು ಹಾಗೂ ಜಲ ಮಾರ್ಗಗಳ ಮೂಲಕ ರಾಕೆಟ್, ಬಾಂಬ್ ದಾಳಿ ನಡೆಸಿದ ಸಂದರ್ಭದಲ್ಲಿ ಅವರ ಸ್ಥಳಗಳನ್ನು ಪತ್ತೆ ಮಾಡಲಿದೆ. ಇದರಿಂದ ಶತ್ರುಗಳ ಮೇಲೆ ಪ್ರತಿದಾಳಿ ನಡೆಸಲು ಸಹಕಾರಿಯಾಗಲಿದೆ.
‘ದಾಳಿ ಮಾಡುವ ಡ್ರೋನ್ ಪತ್ತೆ ಮಾಡುವುದಕ್ಕೆ ರೇಡಾರ್, ಇಒ ಸೆನ್ಸರ್‌ಗಳನ್ನು ಬಳಸಲಾಗುತ್ತದೆ. ಬಹು ಅಪಾಯಗಳ ಗ್ರಹಿಕೆ ಮತ್ತು ಬಹುಸಂವೇದಿ ತಂತ್ರಜ್ಞಾನ ಹೊಂದಿದ್ದು, ಎಲ್ಲ ಬಗೆಯ ಶಸ್ತ್ರಾಸ್ತ್ರ ನಾಶ ಮಾಡುವ ಸಾಮರ್ಥ್ಯ, ಗುರಿಯನ್ನು ನಿಖರವಾಗಿ ಪತ್ತೆ ಹಚ್ಚಿ, ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲಿದೆ. ಶತ್ರು ದೇಶದ ಶಸ್ತ್ರಾಸ್ತ್ರಗಳನ್ನು ಗುರುತಿಸಿ, ಅವುಗಳ ಕಾರ್ಯಾಚರಣೆ ಸ್ಥಗಿತಗೊಳಿಸಬಲ್ಲ ಜಾಮಿಂಗ್ ವ್ಯವಸ್ಥೆ ಹೊಂದಿದೆ. ಶಸ್ತ್ರಾಸ್ತ್ರ ನಾಶ ಮಾಡುವ ಲೇಸರ್ ಆಧಾರಿತ ವ್ಯವಸ್ಥೆ ಸಹ ಇದೆ’ ಎಂದು ಡಿಆರ್‌ಡಿಒ ಅಧಿಕಾರಿ ವಿವರಿಸಿದರು.
ನೈಸರ್ಗಿಕ ವಿಕೋಪ ಸಂದರ್ಭದಲ್ಲಿ ಅವಶೇಷಗಳಡಿ ಸಿಲುಕಿರುವವರನ್ನು ಪತ್ತೆಹಚ್ಚಲು ಹಾಗೂ ರಕ್ಷಣೆ ಮಾಡುವ ಸಲುವಾಗಿ ‘ರೋಬೊ ಡಾಗ್’ ಅನ್ನು ಸ್ಟ್ರೈಡ್ಸ್ ರೊಬೋಟಿಕ್ಸ್ ಸಂಸ್ಥೆ ಅಭಿವೃದ್ಧಿ ಪಡಿಸಿದೆ.
‘ಕೈಗಾರಿಕೆಗಳಲ್ಲಿ ಅನಿಲ ಸೋರಿಕೆ ಉಂಟಾದಾಗ ಮನುಷ್ಯರು ತೆರಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಕಾರ್ಯಾಚರಣೆಗೆ ಈ ರೋಬೊ ಬಳಸಲಾಗುತ್ತದೆ. ಇದಕ್ಕೆ ಕ್ಯಾಮೆರಾ ಅಳವಡಿಸಿದ್ದು, ಘಟನಾ ಸ್ಥಳದ ಮಾಹಿತಿಯನ್ನು ಚಿತ್ರ ಸಮೇತ ರವಾನಿಸುತ್ತದೆ. ಇದರ ಆಧಾರದ ಮೇಲೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಬಹುದು. ಅದೇ ರೀತಿ ಭೂಕಂಪದ ಸಂದರ್ಭದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿರುವವರನ್ನು ರಕ್ಷಣೆ ಮಾಡಲು ಸಹಕಾರಿಯಾಗಲಿದೆ. ಒಂದೂವರೆ ವರ್ಷದಲ್ಲಿ ಮಾರುಕಟ್ಟೆಗೆ ಬರಲಿದೆ’ ಎಂದು ಸಂಸ್ಥೆಯ ಸಿಇಒ ಆದಿತ್ಯ ತಿಳಿಸಿದರು.
ಅತ್ಯಾಧುನಿಕ ಡ್ರೋನ್ ‘ಕೃಷಿಕ 2ಐ ’
ಜನರಲ್ ಏರೋನಾಟಿಕ್ಸ್ ಸಂಸ್ಥೆ ಸಹಯೋಗದೊಂದಿಗೆ ಐಟಿಐ ಸಂಸ್ಥೆಯು ಕೃಷಿ ಚಟುವಟಿಕೆಗಳಿಗೆ ಬಳಸುವ ಅತ್ಯಾಧುನಿಕ ಡ್ರೋನ್ ‘ಕೃಷಿಕ 2ಐ’ ಅನ್ನು ಅಭಿವೃದ್ಧಿಪಡಿಸಿದೆ. ಸ್ಪ್ರೇ ಟ್ಯಾಂಕ್ ಸಾಮರ್ಥ್ಯ ಹತ್ತು ಲೀಟರ್ ಇದ್ದು ನೀರು ಕೀಟನಾಶಕ ಸಿಂಪಡಣೆ ಬೀಜ ಬಿತ್ತನೆಗೆ ಬಳಸಬಹುದು. ಒಮ್ಮೆ ಬ್ಯಾಟರಿ ಚಾರ್ಚ್ ಮಾಡಿದರೆ 27 ನಿಮಿಷದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಕೀಟನಾಶಕ ಸಿಂಪಡಣೆ ಮಾಡುವ ಸಾಮರ್ಥ್ಯ ಹೊಂದಿದೆ.
‘ರೈತರ ಅನುಕೂಲಕ್ಕಾಗಿ ಕೃಷಿಕ 2ಐ ಡ್ರೋನ್ ಅಭಿವೃದ್ಧಿ ಪಡಿಸಲಾಗಿದೆ. ಇದರ ಬೆಲೆ ₹5.5 ಲಕ್ಷ. ಸಬ್ಸಿಡಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ಐಟಿಐ ಸಂಸ್ಥೆಯ ಅಧಿಕಾರಿ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.