ಬೆಂಗಳೂರು: ವಿದೇಶಿ ಯುವಕನ ಜತೆ ಮದುವೆಗೆ ಸಿದ್ದವಾಗಿದ್ದ ಪ್ರೇಯಸಿಗೆ ವಿಷ ನೀಡಿ ಕೊಲೆ ಮಾಡಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಎಚ್‌ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಡಿಸೆಂಬರ್ 31ರಂದು ಕುಂದಲಹಳ್ಳಿಯ ದೀಪಂ ನಿವಾಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಉಜ್ಮಾ ಖಾನ್ (45) ಕೊಲೆ ಆರೋಪಕ್ಕೆ ಸಂಬಂಧಿಸಿದಂತೆ ಆಕೆಯ ಪ್ರಿಯಕರ ಇಮ್ದಾದ್ ಬಾಷಾ (53) ಅವರನ್ನು ಬಂಧಿಸಲಾಗಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಡಾ.ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.
‘ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಇಮ್ದಾದ್ ಬಾಷಾ ಹಾಗೂ ಸಂಬಂಧಿ ಉಜ್ಮಾ ಖಾನ್ ಆತ್ಮೀಯ ಸ್ನೇಹಿತರು. ಇಬ್ಬರಿಗೂ ಮದುವೆ ಮಾಡಲು ಹಿರಿಯರು ನಿರ್ಧರಿಸಿದ್ದರು. ಆದರೆ, ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಹಾಗಾಗಿ ಆರೋಪಿ ಮುಂಬೈಗೆ ತೆರಳಿ ಯುವತಿಯೊಬ್ಬಳನ್ನು ಮದುವೆಯಾಗಿದ್ದ. ಆದರೆ, ಕೌಟುಂಬಿಕ ಕಾರಣಗಳಿಂದ ಪತ್ನಿಗೆ ಕೆಲ ವರ್ಷಗಳ ಹಿಂದೆ ವಿಚ್ಛೇದನ ನೀಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಉಜ್ಮಾಖಾನ್ ಸಹ ಬೇರೊಬ್ಬನ ಯುವಕನ ಜತೆ ವಿವಾಹವಾಗಿದ್ದರು. ಇವರು ಕೂಡ 2017ರಲ್ಲಿ ಪತಿಗೆ ವಿಚ್ಚೇದನ ನೀಡಿದ್ದರು. ಹಾಗಾಗಿ ಇವರ ಪೋಷಕರು, ಆಸ್ಟ್ರಿಯಾದಲ್ಲಿ ನೆಲಸಿರುವ ಪಾಕಿಸ್ತಾನ ಮೂಲದ ಆರ್ಶದ್ ಜತೆ ಮದುವೆ ಮಾಡಲು ನಿರ್ಧರಿಸಿದ್ದರು. ಮೊದಲೇ ಉಜ್ಮಾಳ ಮೊಬೈಲ್ ಫೋನ್ ಕ್ಲೋನಿಂಗ್ ಮಾಡಿಕೊಂಡಿದ್ದ ಇಮ್ದಾದ್‌ಗೆ ಈ ವಿಚಾರ ಗೊತ್ತಾಗಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.
ಉಜ್ಮಾ ಎಚ್ಬಿಆರ್ ಲೇಔಟ್‌ನಲ್ಲಿ ಫ್ಲ್ಯಾಟ್‌ನಲ್ಲಿ ಒಬ್ಬರೇ ವಾಸವಿದ್ದರು. ಬೆಂಗಳೂರಿಗೆ ಮರಳಿದ್ದ ಇಮ್ದಾದ್, ಕುಂದಲಹಳ್ಳಿಯ ದೀಪಂ ನಿವಾಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸಲಾರಂಭಿಸಿದ್ದ. ಉಜ್ಮಾ ಸಹ ಆಗಾಗ ಇಮ್ದಾದ್ ಮನೆಗೆ ಬಂದು ಹೋಗುತ್ತಿದ್ದರು’ ಎಂದು ಹೇಳಿದ್ದಾರೆ.
ಡಿಸೆಂಬರ್ 31 ರಂದು ಮಧ್ಯಾಹ್ನ 12 ಗಂಟೆಗೆ 'ಎರಡನೇ ಮದುವೆಗೆ ನನ್ನ ಮೊದಲ ಪತ್ನಿ ಅಡ್ಡ ಬರುತ್ತಿದ್ದಾಳೆ, ಹೀಗಾಗಿ ನಾವಿಬ್ವರೂ ಆತ್ಮಹತ್ಯೆಗೆ ಶರಣಾಗುತ್ತಿದ್ದೇವೆ' ಎಂದು ಸಂಬಂಧಿಕರಿಗೆ ಇಮ್ದಾದ್ ಮೆಸೇಜ್ ಕಳಿಸಿದ್ದರು. ತಕ್ಷಣ ಆತನ ಸಂಬಂಧಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮಧ್ಯಾಹ್ನ 1 ಗಂಟೆಗೆ ಎಚ್ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಉಜ್ಮಾ ಖಾನ್ ಮೃತಪಟ್ಟಿದ್ದರು. ಅಸ್ವಸ್ಥನಾಗಿದ್ದ ಇಮ್ದಾದ್‌ನನ್ನು ತಕ್ಷಣ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು.
ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಪರಿಶೀಲಿಸಿದಾಗ ಉಜ್ಮಾ ಖಾನ್ ಮೃತಪಟ್ಟು ಅದಾಗಲೇ 10 ರಿಂದ 12 ಗಂಟೆ ಆಗಿದೆ ಎಂಬುದು ಗೊತ್ತಾಯಿತು. ಅಲ್ಲದೆ, ಆಕೆಯ ಮೊಬೈಲ್ ಫೋನ್‌ನಲ್ಲಿದ್ದ ಕೆಲ ಚಾಟ್ ಹಿಸ್ಟರಿ ಸಹ ಡಿಲೀಟ್ ಮಾಡಲಾಗಿತ್ತು. ಅನುಮಾನಗೊಂಡ ಪೊಲೀಸರು ಇಮ್ದಾದ್‌ನನ್ನು ವಿಚಾರಣೆಗೊಳಪಡಿಸಿದಾಗ ಕೊಲೆ ಮಾಡಿರುವುದು ಗೊತ್ತಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಮ್ದಾದ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉಜ್ಮಾ ಅವರ ಸಾವಿಗೆ ನಿಖರ ಕಾರಣವೇನು ಎಂಬುದು ಮರಣೋತ್ತರ ಪರೀಕ್ಷೆ ವರದಿ ಕೈಸೇರಿದ ಬಳಿಕ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ಸಹೋದರ ಹಿಮಾಯತ್ ಖಾನ್ ಅವರ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.