ಭರತ್ ಭೂಷಣ್
ಬೆಂಗಳೂರು: ಕಾಶ್ಮೀರದ ಪಹಲ್ಗಾಮ್ ಪಟ್ಟಣದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಬೆಂಗಳೂರಿನ ಸುಂದರನಗರದ ಗೋಕುಲ ಬಡಾವಣೆಯ ನಿವಾಸಿ, ಸಾಫ್ಟ್‌ವೇರ್ ಎಂಜಿನಿಯರ್ ಭರತ್ ಭೂಷಣ್ (41) ಎಂಬುವರು ಮೃತಪಟ್ಟಿದ್ದಾರೆ.
ಭರತ್ ಅವರು ಪತ್ನಿ ಸುಜಾತ ಹಾಗೂ ಮೂರು ವರ್ಷದ ಪುತ್ರನ ಜೊತೆಗೆ ಕಾಶ್ಮೀರದ ಪ್ರವಾಸಕ್ಕೆ ತೆರಳಿದ್ದರು. ಸುಜಾತ ಹಾಗೂ ಮೂರು ವರ್ಷದ ಮಗು ಪಾರಾಗಿದ್ದಾರೆ.
ಭರತ್ ಭೂಷಣ್ ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಭದ್ರಪ್ಪ ಲೇಔಟ್‌ನಲ್ಲಿ ಡಯಾಗ್ನೋಸ್ಟಿಕ್ ಕೇಂದ್ರವನ್ನು ನಡೆಸುತ್ತಿದ್ದರು. ನಿವೃತ್ತ ಡಿಡಿಪಿಐ ಚನ್ನವೀರಪ್ಪ - ಶೈಲಕುಮಾರಿ ಅವರ ಪುತ್ರ.
ಭರತ್ ಭೂಷಣ್ ಅವರು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಅವರ ತಂಗಿಯ ಗಂಡನ ಸ್ನೇಹಿತ ಎಂದು ಗೊತ್ತಾಗಿದೆ. ಕೋಳಿವಾಡ ಕುಟುಂಬವು ಭರತ್ ಭೂಷಣ್‍ರ ಮೃತದೇಹವನ್ನು ತರಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದೆ.
ಭರತ್ ಭೂಷಣ್ ಅವರು ತಮ್ಮ ಕುಟುಂಬದ ಜತೆಗೆ ನಾಲ್ಕು ದಿನಗಳ ಹಿಂದೆ ಪಹಲ್ಗಾಮ್‌ನ ಪ್ರವಾಸಕ್ಕೆ ಹೋಗಿದ್ದರು.
ಸುಜಾತ ಮತ್ತು ಮಗ ಸುರಕ್ಷಿತವಾಗಿದ್ದಾರೆ. ಘಟನೆ ಬಳಿಕ ಸುಜಾತ ಅವರೊಂದಿಗೆ ಮಾತನಾಡಿದ್ದೇನೆ. ಸ್ಥಳೀಯ ಆಡಳಿತದೊಂದಿಗೂ ಚರ್ಚಿಸಿದ್ದೇನೆ. ಸುಜಾತ ಮತ್ತು ದಾಳಿಪೀಡಿತ ಪ್ರದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ಸಾಧ್ಯವಾದಷ್ಟು ಬೇಗನೆ ಬೆಂಗಳೂರಿಗೆ ಸ್ಥಳಾಂತರಿಸಲಾಗುತ್ತದೆ ಎಂದು ಬಿಜೆಪಿ ಸಂಸದ ತೇಜಸ್ವಿಸೂರ್ಯ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.