
ಬೆಂಗಳೂರು: ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಲೇಔಟ್‍ನಲ್ಲಿ ಟೆಕಿ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವಿಚಾರಣೆ ವೇಳೆ ಆರೋಪಿ ಸತ್ಯ ಬಿಚ್ಚಿಟ್ಟಿದ್ದಾನೆ.
‘ಟಿಕಿ ನೆಲಸಿದ್ದ ಮನೆಯ ಪಕ್ಕದ ನಿವಾಸಿ, ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಅರಸುನಗರ ನಿವಾಸಿ ಕರ್ನಲ್ ಕುರೈ (18) ಎಂಬಾತನನ್ನು ರಾಮಮೂರ್ತಿನಗರ ಠಾಣೆಯ ಪೊಲೀಸರು ಬಂಧಿಸಿ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಆರಂಭದಲ್ಲಿ ಟೆಕಿಯ ಮೇಲೆ ದೌರ್ಜನ್ಯ ನಡೆಸಿಲ್ಲ ಎಂದು ಹೇಳಿದ್ದ. ವಿಚಾರಣೆ ಮುಂದುವರಿಸಿದಾಗ ಅತ್ಯಾಚಾರ ಮಾಡಲು ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ಹೇಳಿವೆ.
‘34 ವರ್ಷದ ಟೆಕಿಯನ್ನು ಆರೋಪಿ ಪ್ರೀತಿಸುತ್ತಿದ್ದ. ಪ್ರತಿನಿತ್ಯ ಮನೆಯ ಮಹಡಿ ಮೇಲೆ ಹೋಗಿ ಯುವತಿಯ ಚಲನ ವಲನ ಗಮನಿಸುತ್ತಿದ್ದ. ಅವರು ಕೆಲಸಕ್ಕೆ ಹೋಗುವಾಗಲೂ ಹಿಂಬಾಲಿಸುತ್ತಿದ್ದ ಯುವಕ, ಕೆಲಸ ಮುಗಿಸಿ ವಾಪಸ್ ಬರುವ ವೇಳೆ ಕಾದು ಕೂರುತ್ತಿದ್ದ’ ಎಂಬುದು ಗೊತ್ತಾಗಿದೆ.
ಜ.3ರ ರಾತ್ರಿ ಟೆಕಿಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಪ್ರಯತ್ನ ಪಟ್ಟಿದ್ದಾಗಿ ವಿಚಾರಣೆಯಲ್ಲಿ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ಹೇಳಿವೆ.
ದೌರ್ಜನ್ಯ ಎಸಗಲು ಮುಂದಾದ ಮೇಲೆ ಟೆಕಿ ಜೋರಾಗಿ ಕಿರುಚಿಕೊಂಡಿದ್ದರು. ಬಾಯಿಯನ್ನು ಗಟ್ಟಿಯಾಗಿ ಮುಚ್ಚಿದ್ದ ಆರೋಪಿ, ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ್ದ. ಆ ಬಳಿಕ ಟಿಶ್ಯು ಪೇಪರ್ ಹಾಸಿಗೆ ಮೇಲಿಟ್ಟು ಬೆಂಕಿ ಹಚ್ಚಿದ್ದ. ಬಾಲ್ಕನಿ ಡೋರ್ ಮೂಲಕವೇ ಜಿಗಿದು ಪರಾರಿಯಾಗಿದ್ದ. ಅಗ್ನಿ ಅವಘಡದಿಂದಾಗಿ ಟೆಕಿ ಮೃತಪಟ್ಟಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಿದ್ದ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಯುವತಿ ಸುಬ್ರಹ್ಮಣ್ಯ ಲೇಔಟ್‍ನ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಕೊಠಡಿಯಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಭಾವಿಸಲಾಗಿತ್ತು. ಮೃತ ಯುವತಿಯ ಸ್ನೇಹಿತ ಕೆ.ರೋಹಿತ್ ಅವರ ದೂರು ಆಧರಿಸಿ, ಪೊಲೀಸರು ತನಿಖೆ ಕೈಗೊಂಡಿದ್ದರು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆಯ ರಹಸ್ಯ ಬಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.