ADVERTISEMENT

ಬೆಂಗಳೂರು | ಸಾಲ ತೀರಿಸಲು ಸ್ನೇಹಿತನ ಮನೆಗೆ ಕನ್ನ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 14:40 IST
Last Updated 24 ಸೆಪ್ಟೆಂಬರ್ 2025, 14:40 IST
   

ಬೆಂಗಳೂರು: ಸಾಲ ತೀರಿಸಲು ಬೇಕಿದ್ದ ಹಣಕ್ಕಾಗಿ ಸ್ನೇಹಿತನ ಮನೆಗೆ ಕನ್ನ ಹಾಕಿದ್ದ ಸಿವಿಲ್ ಎಂಜಿನಿಯರ್‌ನನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ

ಕಲಬುರಗಿ ಜಿಲ್ಲೆಯ ಮಂಜುನಾಥ್ (38) ಬಂಧಿತ ಆರೋಪಿ. ಆರೋಪಿಯಿಂದ ₹6 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಕೆ.ಆರ್.ಪುರದ ಅಯ್ಯಪ್ಪ ನಗರದಲ್ಲಿ ವಾಸವಾಗಿದ್ದ ಆರೋಪಿ, ಐಟಿಪಿಎಲ್ ಬಳಿಯ ಖಾಸಗಿ ಕಂಪನಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಬೇರೆ ಬೇರೆ ಕಾರಣಕ್ಕೆ ಸಾಲ ಮಾಡಿಕೊಂಡಿದ್ದ ಆರೋಪಿಯು ತನ್ನ ಸ್ನೇಹಿತ ನವೀನ್ ಎಂಬುವರ ಮನೆಗೆ ಕನ್ನ ಹಾಕಿದ್ದ ಎಂದು ಪೊಲೀಸರು ಹೇಳಿದರು.

ADVERTISEMENT

‘ಮಂಜುನಾಥ್ ಮತ್ತು ನವೀನ್, ಬಾಲ್ಯದಿಂದಲೂ ಸ್ನೇಹಿತರು. ಕೊಡಿಗೇಹಳ್ಳಿಯಲ್ಲಿರುವ ನವೀನ್‍ ಅವರ ಮನೆಗೆ ಆರೋಪಿ ಮಂಜುನಾಥ್ ಆಗಾಗ್ಗೆ ಹೋಗುತ್ತಿದ್ದ. ಸ್ನೇಹಿತನ ಮನೆಯಲ್ಲಿ ಸಾಕಷ್ಟು ಚಿನ್ನಾಭರಣ ಇರುವುದನ್ನು ಗಮನಿಸಿದ್ದ. ಆಭರಣ ಕದ್ದು ಸಾಲ ತೀರಿಸಲು ಆರೋಪಿ ಸಂಚು ರೂಪಿಸಿದ್ದ. ನವೀನ್ ಮತ್ತು ಅವರ ಪತ್ನಿ ಸುಷ್ಮಾ ಅವರು ಆಗಸ್ಟ್‌ 29ರಂದು ಮನೆಯಿಂದ ಹೊರ ಹೋಗುವುದನ್ನು ಗಮನಿಸಿದ್ದ ಆರೋಪಿ, ಅಂದೇ ಸಂಜೆ ಮನೆಯ ಬಾಗಿಲು ಒಡೆದು ಚಿನ್ನಾಭರಣ ಕಳ್ಳತನ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

ಸಿಸಿಟಿವಿ ಪರಿಶೀಲನೆ ವೇಳೆ ಕೃತ್ಯ ಬಯಲು:

‘ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಆರಂಭದಲ್ಲಿ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನವೀನ್‌ ಅವರ ಮನೆಯ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲಿಸಿದಾಗ, ಬೈಕ್‍ನ ನೋಂದಣಿ ಸಂಖ್ಯೆಯ ಸುಳಿವು ಸಿಕ್ಕಿತ್ತು. ಬೈಕ್‌ನ ನೋಂದಣಿ ಸಂಖ್ಯೆ ಯಾರದ್ದು ಎಂದು ಪರಿಶೀಲಿಸಿದಾಗ, ಮಂಜುನಾಥ್‍ ಆರೋಪಿ ಎಂದು ಪತ್ತೆ ಆಗಿತ್ತು. ಬಳಿಕ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಕದ್ದ ಆಭರಣಗಳನ್ನು ಆರೋಪಿ ಗಿರವಿ ಅಂಗಡಿಗೆ ಮಾರಾಟ ಮಾಡಿದ್ದ. ಉಳಿದ ಆಭರಣಗಳನ್ನು ಅಯ್ಯಪ್ಪ ನಗರದ ತನ್ನ ಮನೆಯಲ್ಲೇ ಇಟ್ಟುಕೊಂಡಿದ್ದ. ಸದ್ಯ ಬಂಧಿತನಿಂದ 58 ಗ್ರಾಂ ಆಭರಣ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.