ADVERTISEMENT

ಬೆಂಗಳೂರು: ಮೂರು ಅಂತಸ್ತಿನ ಕಟ್ಟಡ ಕುಸಿತ

ಅವೆನ್ಯೂ ರಸ್ತೆ ನಿವಾಸಿಗಳಲ್ಲಿ ಮನೆಮಾಡಿದ ಆತಂಕ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2022, 21:30 IST
Last Updated 6 ಆಗಸ್ಟ್ 2022, 21:30 IST
ಅವೆನ್ಯೂ ರಸ್ತೆಯಲ್ಲಿ ಶನಿವಾರ ನಸುಕಿನಲ್ಲಿ ಕುಸಿದು ಬಿದ್ದಿದ್ದ ಕಟ್ಟಡದ ಅವಶೇಷಗಳನ್ನು ಜೆಸಿಬಿ ಯಂತ್ರದಿಂದ ತೆರವು ಮಾಡಲಾಯಿತು     – ಪ್ರಜಾವಾಣಿ ಚಿತ್ರ
ಅವೆನ್ಯೂ ರಸ್ತೆಯಲ್ಲಿ ಶನಿವಾರ ನಸುಕಿನಲ್ಲಿ ಕುಸಿದು ಬಿದ್ದಿದ್ದ ಕಟ್ಟಡದ ಅವಶೇಷಗಳನ್ನು ಜೆಸಿಬಿ ಯಂತ್ರದಿಂದ ತೆರವು ಮಾಡಲಾಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಕೆಲದಿನಗಳಿಂದ ಬಿಡುವು ಕೊಡುತ್ತಲೇ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿದೆ.

ಅವೆನ್ಯೂ ರಸ್ತೆಯಲ್ಲಿ ಶಿಥಿಲಗೊಂಡಿದ್ದ ಮೂರು ಅಂತಸ್ತಿನ ಕಟ್ಟಡ ನಿರಂತರ ಮಳೆಯಿಂದಾಗಿ ಶನಿವಾರ ನಸುಕಿನಲ್ಲಿ ಕುಸಿದುಬಿದ್ದಿದ್ದು, ಅವಶೇಷಗಳ ತೆರವುಗೊಳಿಸುವ ಕೆಲಸ ಆರಂಭವಾಗಿದೆ.

‘ಬೆಳ್ಳಿ ಬಸವ ದೇವಸ್ಥಾನದ ಬಳಿ ಕಟ್ಟಡವಿತ್ತು. ಇದರ ಮಾಲೀಕರು ಭಂಡಾರಿ ಕುಟುಂಬದವರೆಂದು ಗೊತ್ತಾಗಿದೆ. ಘಟನೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ’ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಹಲವು ತಿಂಗಳ ಹಿಂದೆಯೇ ಕಟ್ಟಡ ಶಿಥಿಲಗೊಂಡಿತ್ತು. ಕಟ್ಟಡದಲ್ಲಿ ವಾಸವಿದ್ದ ಕುಟುಂಬದವರು ಬೇರೆಡೆ ಸ್ಥಳಾಂತರಗೊಂಡಿದ್ದರು. ಆದರೆ, ಕಟ್ಟಡದ ಕೆಳ ಮಹಡಿಯಲ್ಲಿದ್ದ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗಿತ್ತು.’

‘ಶುಕ್ರವಾರ ರಾತ್ರಿಯೇ ಮಾಲೀಕರು ತಮ್ಮ ಅಂಗಡಿ ಬಂದ್ ಮಾಡಿಕೊಂಡು ಹೋಗಿದ್ದರು. ನಸುಕಿನಲ್ಲಿ ಕಟ್ಟಡ ಕುಸಿದಿದ್ದರಿಂದ, ಅಂಗಡಿಯಲ್ಲಿದ್ದ ವಸ್ತುಗಳು ಅವಶೇಷಗಳಡಿ ಸಿಲುಕಿದ್ದವು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸಿದರು’ ಎಂದು ಹೇಳಿದರು.

ಅಕ್ಕ–ಪಕ್ಕದ ನಿವಾಸಿಗಳಿಗೆ ಆತಂಕ: ‘ಕುಸಿದ ಕಟ್ಟಡದಿಂದಾಗಿ ಅಕ್ಕ–ಪಕ್ಕದ ಮನೆಯ ತಳಪಾಯಕ್ಕೆ ಧಕ್ಕೆ ಆಗುವ ಸ್ಥಿತಿ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಅವಶೇಷವನ್ನು ಸ್ಥಳಾಂತರಿಸಿ ಮನೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು’ ಎಂದು ನಿವಾಸಿಗಳು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.