ಬೆಂಗಳೂರು: ಮೂರು ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಬಸ್ ಆದ್ಯತಾ ಪಥವನ್ನು ಮತ್ತೆ ತರಲು ಬಿಎಂಟಿಸಿ ಚಿಂತನೆ ನಡೆಸಿದೆ.
ನಗರದ ಕೆಲವು ಭಾಗಗಳಲ್ಲಿ ಹಿಂದೆ ಬಸ್‌ಗಳಿಗಾಗಿಯೇ ಪ್ರತ್ಯೇಕ ಮಾರ್ಗ ಮಾಡಲಾಗಿತ್ತು. ಇದರಿಂದ ಸಮಯ ಮತ್ತು ಇಂಧನ ಉಳಿತಾಯವಾಗುತ್ತಿತ್ತು. ಕೆ.ಆರ್.ಪುರ ಮತ್ತು ಕೇಂದ್ರ ರೇಷ್ಮೆ ಮಂಡಳಿ ಜಂಕ್ಷನ್ ನಡುವಿನ ಹೊರವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೊ ನೀಲಿ ಮಾರ್ಗದ ಕಾಮಗಾರಿಗಾಗಿ 2022ರಲ್ಲಿ ಬಸ್ ಆದ್ಯತಾ ಪಥ ಸ್ಥಗಿತಗೊಳಿಸಲಾಗಿತ್ತು. ಕ್ರಮೇಣ ಉಳಿದ ಭಾಗಗಳಲ್ಲಿಯೂ ಆದ್ಯತಾ ಪಥಕ್ಕೆ ಆದ್ಯತೆ ಇಲ್ಲವಾಗಿತ್ತು.
‘ಹೊರ ವರ್ತುಲ ರಸ್ತೆಯಲ್ಲಿ ಬಸ್ ಆದ್ಯತಾ ಪಥ ಹೇಗೆ ನಿರ್ವಹಿಸುವುದು ಎಂದು ಬಿಎಂಆರ್‌ಸಿಎಲ್, ಬಿಬಿಎಂಪಿ, ಡಲ್ಟ್, ಬೆಂಗಳೂರು ಸಂಚಾರ ಪೊಲೀಸ್ ಸೇರಿದಂತೆ ಸಂಬಂಧಪಟ್ಟ ವಿವಿಧ ಇಲಾಖೆ, ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗುವುದು. ಈ ಬಗ್ಗೆ ಈಗಾಗಲೇ ಪತ್ರ ವ್ಯವಹಾರ ನಡೆಸಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಆರ್. ರಾಮಚಂದ್ರನ್ ತಿಳಿಸಿದ್ದಾರೆ.
ಮೆಟ್ರೊ ಕಾಮಗಾರಿಗಳು ಮುಗಿಯುವ ಹೊತ್ತಿಗೆ ರಸ್ತೆಗಳು ಹಿಂದಿನ ರೀತಿಯಲ್ಲಿ ಇರುವುದಿಲ್ಲ. ಪರಿಸ್ಥಿತಿ ಬದಲಾಗಿರುತ್ತದೆ. ರಸ್ತೆಗಳನ್ನು ಪುನರ್‌ನಿರ್ಮಿಸಬೇಕಾಗುತ್ತದೆ. ಆಗ ಬಸ್ ಆದ್ಯತಾ ಪಥಕ್ಕೆ ಯೋಜನೆಯನ್ನು ಮರು ವಿನ್ಯಾಸಗೊಳಿಸಬೇಕಾಗಿದೆ ಎಂದು ಅವರು ವಿವರಿಸಿದ್ದಾರೆ.
ಕೆ.ಆರ್.ಪುರ ಮತ್ತು ಕೇಂದ್ರ ರೇಷ್ಮೆ ಮಂಡಳಿ ನಡುವಿನ 17 ಕಿ.ಮೀ. ರಸ್ತೆಯಲ್ಲಿ ಆದ್ಯತಾ ಪಥಕ್ಕೆ ಗಮನ ನೀಡಲಾಗುವುದು. ಐದು ವರ್ಷಗಳ ಹಿಂದಿನ ಸಮೀಕ್ಷೆಯ ದತ್ತಾಂಶಗಳನ್ನು ಇಟ್ಟುಕೊಂಡು ಯೋಜನೆ ರೂಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ಮತ್ತೊಮ್ಮೆ ಸಮೀಕ್ಷೆ, ಅಧ್ಯಯನ ನಡೆಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಸಂಸ್ಥೆಯ 300ಕ್ಕೂ ಅಧಿಕ ಬಸ್‌ಗಳು ಹೊರವರ್ತುಲ ರಸ್ತೆಯಲ್ಲಿ ಸಂಚರಿಸುತ್ತಿವೆ. ಹಿಂದೆ ಆದ್ಯತಾ ಪಥ ಇದ್ದಾಗ ಈ ಮಾರ್ಗದಲ್ಲಿ ಪ್ರಯಾಣದ ಅವಧಿ ಕನಿಷ್ಠ 15 ನಿಮಿಷಗಳಷ್ಟು ಕಡಿಮೆಯಾಗುತ್ತಿತ್ತು. ಇಂಧನ ಬಳಕೆಯೂ ಕಡಿಮೆ ಇತ್ತು. ಆದ್ಯತಾ ಪಥ ಮತ್ತೆ ಆರಂಭಗೊಂಡರೆ ಬಸ್‌ಗಳು ಬೇಗ ಸಂಚರಿಸಲು ಅನುಕೂಲವಾಗುತ್ತದೆ. ವಾಹನದಟ್ಟಣೆಯ ರಸ್ತೆಯಲ್ಲಿ ಸಿಲುಕುವ ಪ್ರಮೇಯ ತಪ್ಪಲಿದೆ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ (ಕಾರ್ಯಾಚರಣೆ) ಜಿ.ಟಿ. ಪ್ರಭಾಕರ್ ರೆಡ್ಡಿ ಹೇಳಿದರು.
ಹೊರವರ್ತುಲ ರಸ್ತೆಯಲ್ಲಿ ವಾಹನದಟ್ಟಣೆ ಕಡಿಮೆಯಾಗಬೇಕಿದ್ದರೆ ಐಟಿ ಪಾರ್ಕ್‌ಗಳ ಉದ್ಯೋಗಿಗಳು ಬಿಎಂಟಿಸಿ ಬಸ್‌ನಂಥ ಸಾರ್ವಜನಿಕ ಸಾರಿಗೆ ಕಡೆಗೆ ಮುಖ ಮಾಡಬೇಕು ಎಂದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದರು.
ವಿಮಾನ ನಿಲ್ದಾಣಕ್ಕೆ ಉತ್ತಮ ವೋಲ್ವೊ ಬಸ್‌ಗಳು ಸಂಚರಿಸುತ್ತಿವೆ. ಟೆಕ್ ಪಾರ್ಕ್‌ಗಳ ಕಡೆಗೂ ಇಂಥದ್ದೇ ಬಸ್‌ಗಳನ್ನು ನಿಯೋಜಿಸಬೇಕು. ಖಾಸಗಿ ವಾಹನಗಳಲ್ಲಿ ಸಂಚರಿಸುತ್ತಿರುವ ಟೆಕ್ ಪಾರ್ಕ್‌ಗಳ ಉದ್ಯೋಗಿಗಳಲ್ಲಿ ಶೇ 20ರಷ್ಟು ಜನರು ಬಸ್‌ಗಳಲ್ಲಿ ಸಂಚರಿಸಿದರೆ ವಾಹನದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ ಎಂದು ತಿಳಿಸಿದರು.
‘ಬಸ್ ಆದ್ಯತಾ ಪಥ ಮತ್ತೆ ನಿರ್ಮಾಣವಾಗುವ ಬಗ್ಗೆ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಆದರೆ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸಾರ್ವಜನಿಕ ಸಾರಿಗೆಯನ್ನು ಜನರು ಹೆಚ್ಚು ಬಳಸುವಂತಾಗಲು ಆದ್ಯತಾ ಪಥ ಮುಖ್ಯ’ ಎಂದು ಪೂರ್ವ ವಿಭಾಗದ ಸಂಚಾರ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಈ ಬಗ್ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.