ADVERTISEMENT

ತುಮಕೂರು ರಸ್ತೆಯಲ್ಲಿ ಸಂಚಾರ ದಟ್ಟಣೆ | ಸಮಸ್ಯೆ ಶಾಶ್ವತ: ಪರಿಹಾರ ದೂರ

ಆದಿತ್ಯ ಕೆ.ಎ
Published 16 ಜನವರಿ 2026, 0:47 IST
Last Updated 16 ಜನವರಿ 2026, 0:47 IST
<div class="paragraphs"><p>ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ನಿತ್ಯವೂ ಕಂಡುಬರುವ ವಾಹನ ದಟ್ಟಣೆ&nbsp; </p></div>

ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್ ಬಳಿ ನಿತ್ಯವೂ ಕಂಡುಬರುವ ವಾಹನ ದಟ್ಟಣೆ 

   

– ಪ್ರಜಾವಾಣಿ ಚಿತ್ರಗಳು: ರಂಜು ಪಿ.

ಬೆಂಗಳೂರು: ತುಮಕೂರು ರಸ್ತೆಯ ಶಿವಕುಮಾರ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರ ಆರಂಭವಾಗಿ ಒಂದೂವರೆ ವರ್ಷ ಕಳೆದಿದ್ದರೂ ಬೆಂಗಳೂರು–ಪುಣೆ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ವಾಹನ ಚಾಲಕರಿಗೆ ಸಂಕಟ ಮಾತ್ರ ತಪ್ಪುತ್ತಿಲ್ಲ. ಅದರಲ್ಲೂ ವಾರಾಂತ್ಯ, ರಜಾ ದಿನಗಳು ಹಾಗೂ ದಟ್ಟಣೆ ಅವಧಿಯಾದ ಬೆಳಿಗ್ಗೆ– ಸಂಜೆ ಈ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ.

ADVERTISEMENT

‘ಹೆದ್ದಾರಿಯಲ್ಲಿ ಸಾಗುವ ವಾಹನ ಚಾಲಕರ ಸಮಸ್ಯೆಯನ್ನು ಬಗೆಹರಿಸುತ್ತೇವೆ. ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತೇವೆ’ ಎಂದು ಸಂಚಾರ ವಿಭಾಗದ ಪೊಲೀಸ್‌ ಅಧಿಕಾರಿಗಳು, ಕಳೆದ ವರ್ಷ ಆಶ್ವಾಸನೆ ನೀಡಿದ್ದರು. ಈ ಹೆದ್ದಾರಿಯಲ್ಲಿ ‘ಪ್ರಜಾವಾಣಿ’ ಪ್ರತಿನಿಧಿ ಸುತ್ತು ಹಾಕಿದಾಗ ಸಮಸ್ಯೆ ಶಾಶ್ವತವಾಗಿ ಉಳಿದಿರುವುದು ಕಂಡುಬಂತು.

ಈ ಮಾರ್ಗವು ಬೆಂಗಳೂರು ನಗರವನ್ನು ಸಂಪರ್ಕಿಸುವ ಪ್ರಮುಖ ಕೊಂಡಿ. ಮಹಾರಾಷ್ಟ್ರ, ಗೋವಾ ಹಾಗೂ ರಾಜ್ಯದ 21ಕ್ಕೂ ಹೆಚ್ಚು ಜಿಲ್ಲೆಗಳಿಗೆ ತೆರಳುವುದಕ್ಕೆ ಇದೇ ಮಾರ್ಗವನ್ನು ವಾಹನ ಚಾಲಕರು ಅವಲಂಬಿಸಬೇಕು. ದಿನದ 24 ಗಂಟೆಯೂ ಈ ಮಾರ್ಗದಲ್ಲಿ ವಾಹನ ಸಂಚಾರವಿದ್ದು, ಅದರಲ್ಲಿ 10 ತಾಸು ಹೆದ್ದಾರಿ ದಟ್ಟಣೆಯಿಂದ ಕೂಡಿರುತ್ತದೆ. ಕೆಲವು ಜಂಕ್ಷನ್‌ಗಳನ್ನು ದಾಟುವುದಕ್ಕೇ ವಾಹನ ಸವಾರರು ಪ್ರತಿನಿತ್ಯ ಪರದಾಡಬೇಕಾದ ಪರಿಸ್ಥಿತಿಯಿದೆ.

ಮೇಲ್ಸೇತುವೆಯ 8ನೇ ಮೈಲಿಯ 102 ಹಾಗೂ 103ನೇ ಪಿಲ್ಲರ್‌ನಲ್ಲಿ ಕೇಬಲ್‌ಗಳು ಬಾಗಿದ್ದರಿಂದ 2021ರ ಡಿಸೆಂಬರ್‌ನಿಂದ ಭಾರಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ದೀರ್ಘ ಹೋರಾಟದ ಬಳಿಕ ಮೇಲ್ಸೇತುವೆಯ ಕೇಬಲ್‌ ಬದಲಾವಣೆ ಮಾಡಲಾಯಿತು. ಮೇಲ್ಸೇತುವೆ ಸುಭದ್ರಗೊಳಿಸಿದ ನಂತರ 2024ರ ಜುಲೈನಿಂದ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಸಂಚಾರ ವಿಭಾಗದ ಪೊಲೀಸರು ಹಸಿರು ನಿಶಾನೆ ತೋರಿದ್ದರು. ಮೇಲ್ಸೇತುವೆಯಲ್ಲಿ ಬಸ್, ಟ್ರಕ್‌ಗಳೂ ಸಾಗುತ್ತಿದ್ದರೂ ದಟ್ಟಣೆಯ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಕೆಲವೊಮ್ಮೆ ಮೇಲ್ಸೇತುವೆಯಲ್ಲಿ ವಾಹನಗಳು ಕೆಟ್ಟು ನಿಂತರೆ ಅಂತಹ ವಾಹನಗಳನ್ನು ತೆರವು ಮಾಡುವುದಕ್ಕೆ ತಾಸುಗಟ್ಟಲೇ ಹಿಡಿಯುತ್ತದೆ. ಆಗಲೂ ದಟ್ಟಣೆ ಎದುರಾಗುತ್ತಿದೆ ಎಂದು ಸಂಚಾರ ಪೊಲೀಸರು ಹೇಳಿದರು.    

‘ಈ ಮಾರ್ಗದಲ್ಲಿ ಗೊರಗುಂಟೆಪಾಳ್ಯ ಪ್ರಮುಖ ಜಂಕ್ಷನ್‌. ಹಾಸನ, ತುಮಕೂರು, ಮಂಗಳೂರು, ಉಡುಪಿ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಚಿತ್ರದುರ್ಗ ಹಾಗೂ ಕೆ.ಆರ್.ಪುರ, ದೇವನಹಳ್ಳಿ, ಹೈದರಾಬಾದ್‌ ಕಡೆಯಿಂದ ಪ್ರತಿನಿತ್ಯ ಬರುವ ಸಾವಿರಾರು ವಾಹನಗಳು ಈ ಜಂಕ್ಷನ್‌ನಲ್ಲಿ ಸಿಲುಕಿಕೊಳ್ಳುತ್ತಿವೆ. ಜಂಕ್ಷನ್‌ ದಾಟುವುದು ಸವಾಲಾಗಿದೆ’ ಎಂದು ವಾಹನ ಚಾಲಕ ಮೋಹನ್‌ ಅಳಲು ತೋಡಿಕೊಳ್ಳುತ್ತಾರೆ.

‘ಊರು, ಕೆಲಸದ ಸ್ಥಳಗಳಿಗೆ ತೆರಳುವುದಕ್ಕೆ ಗೊರಗುಂಟೆಪಾಳ್ಯ ಜಂಕ್ಷನ್‌ಗೆ ಪ್ರತಿನಿತ್ಯ ಸಾವಿರಾರು ಜನರು ಬರುತ್ತಾರೆ. ಶಾಲಾ– ಕಾಲೇಜು ವಿದ್ಯಾರ್ಥಿಗಳ ದಂಡೇ ಇರುತ್ತದೆ. ಸಿಗ್ನಲ್‌ ಬಿಡುತ್ತಿದ್ದಂತೆಯೇ ವೇಗವಾಗಿ ನುಗ್ಗುವ ವಾಹನಗಳ ಮಧ್ಯೆ ಪಾದಚಾರಿಗಳು ಹೆದ್ದಾರಿ ದಾಟುವ ಸಾಹಸ ಮಾಡುತ್ತಿದ್ದಾರೆ. ಸ್ಕೈವಾಕ್ ಇಲ್ಲದಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ’ ಎಂದು ಪಾದಚಾರಿಗಳು ಅಳಲು ತೋಡಿಕೊಂಡರು.

ಎರಡು ವರ್ಷಗಳ ಹಿಂದೆ ಈ ಜಂಕ್ಷನ್‌ನಲ್ಲಿ ಸ್ಕೈವಾಕ್‌ ನಿರ್ಮಿಸಲು ಬಿಬಿಎಂಪಿ ಹಾಗೂ ಸಂಚಾರ ವಿಭಾಗದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದರು. ಆದರೆ, ಕೆಲಸ ನನೆಗುದಿಗೆ ಬಿದ್ದಿದೆ. ಬಸ್‌ ತಂಗುದಾಣ ಸಹ ಇಲ್ಲ. ಕೆಎಲ್‌ಇ ದಂತ ವೈದ್ಯಕೀಯ ಕಾಲೇಜು ಎದುರು ಬಸ್ ತಂಗುದಾಣ ಇದ್ದರೂ ಅಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಿಲ್ಲ. ಜಂಕ್ಷನ್‌ನಲ್ಲಿ ಇರುವ ಚಂದ್ರಮೌಳೇಶ್ವರ, ಶಿವಗಣಪತಿ ದೇಗುಲದ ಎದುರೇ ನೂರಾರು ಪ್ರಯಾಣಿಕರು ನಿಂತಿರುತ್ತಾರೆ. ಪ್ರಯಾಣಿಕರು ಯಾವ ಕ್ಷಣದಲ್ಲಿ ರಸ್ತೆ ದಾಟುತ್ತಾರೋ ಎನ್ನುವ ಭಯ ಚಾಲಕರನ್ನು ಕಾಡುತ್ತಲೇ ಇರುತ್ತದೆ.

ಯಶವಂತಪುರದ ಗೋವರ್ಧನ ಚಿತ್ರಮಂದಿರದ ಎದುರು ರಾತ್ರಿ ಎಂಟರ ಬಳಿಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ರಸ್ತೆಯ ಮಧ್ಯೆದಲ್ಲಿಯೇ ಖಾಸಗಿ ಬಸ್‌ಗಳು ಪೈಪೋಟಿಗೆ ಇಳಿಯುತ್ತವೆ. ಅದು ಮತ್ತೊಂದು ರೀತಿಯ ಸಮಸ್ಯೆ ತಂದೊಡ್ಡುತ್ತಿದೆ.

ಹೆದ್ದಾರಿ ಬದಿಯಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ನಿಲುಗಡೆ ಮಾಡಲಾಗುತ್ತಿದ್ದು ಇದು ಸಹ ವಾಹನ ದಟ್ಟಣೆಗೆ ಕಾರಣವಾಗಿದೆ      – ಪ್ರಜಾವಾಣಿ ಚಿತ್ರ: ರಂಜು ಪಿ.

ಆರು ವರ್ಷದಿಂದ ಕಗ್ಗಂಟು: ಅಲ್ಲಿಂದ ಮುಂದಕ್ಕೆ ಸಾಗಿದರೆ ಜಾಲಹಳ್ಳಿ ಕ್ರಾಸ್‌ನಲ್ಲಿ ಕೆಳಸೇತುವೆ ಕಾಮಗಾರಿ ಆರಂಭ ಆಗದಿರುವುದು ನಿತ್ಯ ಸಂಚರಿಸುವ ಪಾದಚಾರಿಗಳು, ಚಾಲಕರಿಗೆ ನೋವು ಉಂಟು ಮಾಡಿದೆ. ಗಂಗಮ್ಮನ ಗುಡಿ ಕಡೆಯಿಂದ ಬರುವ ವಾಹನಗಳು, ಪೀಣ್ಯ ಅಥವಾ ಹುಬ್ಬಳ್ಳಿ ಕಡೆಗೆ ಸರಾಗವಾಗಿ ಸಾಗುವುದಕ್ಕೆ ಸಾಧ್ಯವಾಗುತ್ತಿಲ್ಲ. ನಾಲ್ಕು ಕಡೆಯಿಂದ ವೇಗವಾಗಿ ವಾಹನಗಳು ಬರುತ್ತವೆ. ರಸ್ತೆ ದಾಟಲು ಪಾದಚಾರಿಗಳು ಗಡಿಬಿಡಿಯಲ್ಲಿ ಸಾಗಿ ಅಪಾಯಕ್ಕೆ ಸಿಲುಕಿಕೊಳ್ಳುತ್ತಿದ್ದಾರೆ.

ಜಾಲಹಳ್ಳಿಯ ಎಸ್‌.ಎಂ.ರಸ್ತೆಯಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ (ಜಾಲಹಳ್ಳಿ ಕ್ರಾಸ್‌) ಸಂಪರ್ಕ ಕಲ್ಪಿಸುವ ಕೆಳಸೇತುವೆ ಕಾಮಗಾರಿಗೆ 2019ರಲ್ಲೇ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಹಿಂದಿನ ಬಿಬಿಎಂಪಿ) ಯೋಜನೆ ರೂಪಿಸಿತ್ತು. ಕಾಮಗಾರಿಗೆ ₹57 ಕೋಟಿ ನಿಗದಿಪಡಿಸಿ ಟೆಂಡರ್‌ ಸಹ ಆಹ್ವಾನಿಸಲಾಗಿತ್ತು. 2022ರಲ್ಲಿ ಒಂದು ಬದಿಯ ಕಟ್ಟಡಗಳನ್ನು ತೆರವು ಮಾಡಲಾಗಿತ್ತು. ಆದರೆ, ಅಂಗಡಿ ಮಾಲೀಕರು ಹೆಚ್ಚಿನ ಪರಿಹಾರ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದು, ಕಾಮಗಾರಿ ಆರಂಭಿಸಲು ಸಾಧ್ಯವಾಗಿಲ್ಲ. ಬೃಹತ್‌ ಜಂಕ್ಷನ್ ಸಮಸ್ಯೆಗಳ ಸರಮಾಲೆಯನ್ನೇ ಹೊದ್ದುಕೊಂಡಿದೆ. 

ಇನ್ನು ನೆಲಮಂಗಲ ಜಂಕ್ಷನ್‌ನಲ್ಲೂ ಸಂಜೆ 4ರಿಂದ ರಾತ್ರಿ 8ರವರೆಗೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಜಂಕ್ಷನ್‌ ದಾಟಲು ಅರ್ಧ ತಾಸು ಬೇಕಾಗಿದೆ. ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ ಎಂದು ವಾಹನ ಚಾಲಕರು ನೋವು ತೋಡಿಕೊಂಡರು.

ಗೊರಗುಂಟೆಪಾಳ್ಯದಲ್ಲಿ ಎರಡು ಜಂಕ್ಷನ್‌ ದಾಟಲು ದಟ್ಟಣೆ ಅವಧಿಯಲ್ಲಿ ಅರ್ಧ ತಾಸು ಬೇಕಾಗುತ್ತಿದೆ
– ಲೋಕೇಶ್ ಕ್ಯಾಬ್‌ ಚಾಲಕ ರಾಜರಾಜೇಶ್ವರಿ ನಗರ
ತುಮಕೂರು ಹಾಸನ ಕೆ.ಆರ್.ಪುರದ ಕಡೆಯಿಂದ ಬಂದು ಗೊರಗುಂಟೆಪಾಳ್ಯದಲ್ಲಿ ಬಸ್ ಇಳಿದರೆ ಹೆದ್ದಾರಿ ದಾಟುವುದಕ್ಕೆ ಸಾಹಸ ಪಡಬೇಕು. ಸ್ಕೈವಾಕ್‌ ಇಲ್ಲದಿರುವ ಪರಿಣಾಮ ಪಾದಚಾರಿಗಳ ಜೀವಕ್ಕೂ ಅಪಾಯ ಉಂಟಾಗುತ್ತಿದೆ
–ಶಿವು ಆಟೊ ಚಾಲಕ ಕಮಲಾನಗರ

ಸಂಚಾರ ವಿಭಾಗಕ್ಕಿಲ್ಲ ವಿಶೇಷ ಕಮಿಷನರ್‌

ಸಂಚಾರ ವಿಭಾಗಕ್ಕೆ 2023ರಲ್ಲಿ ಹೊಸದಾಗಿ ವಿಶೇಷ ಕಮಿಷನರ್‌ ಹುದ್ದೆ ಸೃಜಿಸಲಾಗಿತ್ತು. ಎಂ.ಎ.ಸಲೀಂ ಅವರು ಆ ವಿಭಾಗದಲ್ಲಿ ಮೊದಲ ವಿಶೇಷ ಕಮಿಷನರ್ (ಈಗಿನ ರಾಜ್ಯ ಪೊಲೀಸ್ ಮಹಾನಿರ್ದೇಶಕ) ಆಗಿ ಕೆಲಸ ಮಾಡಿದ್ದರು. ಹಲವು ಸುಧಾರಣಾ ಕ್ರಮಗಳನ್ನೂ ಜಾರಿಗೆ ತಂದಿದ್ದರು. ಅವರು ವರ್ಗಾವಣೆಯಾದ ನಂತರ ವಿಶೇಷ ಕಮಿಷನರ್ ನೇಮಕವೇ ಆಗಿಲ್ಲ. ‘ನಗರದಲ್ಲಿ ಒಂದೂವರೆ ಕೋಟಿಗೂ ಹೆಚ್ಚಿನ ವಾಹನಗಳಿವೆ. ವಾಹನ ದಟ್ಟಣೆ ಸಮಸ್ಯೆ ಪ್ರತಿನಿತ್ಯ ಉಲ್ಬಣಿಸುತ್ತಿದ್ದು ಸಂಚಾರ ವಿಭಾಗಕ್ಕೆ ವಿಶೇಷ ಕಮಿಷನರ್ ನೇಮಿಸಬೇಕು’ ಎಂಬ ಆಗ್ರಹವಿದೆ.

ಎಲ್ಲೆಲ್ಲಿ ಅಪಾಯ?

ಕೆಎಸ್ಆರ್‌ಟಿಸಿ ಹಾಗೂ ಸಂಚಾರ ಪೊಲೀಸರು ಗುರುತಿಸಿರುವ ಅಪಘಾತ ಸಂಭವಿಸುವ ಸ್ಥಳಗಳು (ಬೆಂಗಳೂರು– ತುಮಕೂರು– ಹಾಸನ ಮಾರ್ಗ)

  • ಸುಜಾತಾ ಸಿಗ್ನಲ್‌

  • ಓಕಳಿಪುರ ಜಂಕ್ಷನ್‌

  • ನವರಂಗ್‌ ವೃತ್ತ

  • ಯಶವಂತಪುರ/ ಆರ್‌ಎಂಸಿ ಯಾರ್ಡ್‌ ರಸ್ತೆ

  • ಗೊರಗುಂಟೆಪಾಳ್ಯ ಜಂಕ್ಷನ್‌

  • ಎಸ್‌ಆರ್‌ಎಸ್‌ ಜಂಕ್ಷನ್‌

  • ಪೀಣ್ಯ ಜಂಕ್ಷನ್‌

  • ಜಾಲಹಳ್ಳಿ ಕ್ರಾಸ್‌

  • 8ನೇ ಮೈಲಿ

  • ಮಾದನಾಯಕನಹಳ್ಳಿ

  • ಅರಿಶಿನಕುಂಟೆ

  • ಕುಣಿಗಲ್ ಬೈಪಾಸ್‌

  • ಟಿ.ಬೇಗೂರು ತ್ಯಾಮಗೊಂಡ್ಲು ಕ್ರಾಸ್‌

ಹೆದ್ದಾರಿ ಬದಿಯಲ್ಲಿ ಟ್ರಕ್‌...

ದಟ್ಟಣೆ ಅವಧಿಯಾದ ಬೆಳಿಗ್ಗೆ 7ರಿಂದ 11ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 11ರವರೆಗೆ ಸರಕು ಸಾಗಣೆ ವಾಹನಗಳಿಗೆ ನಗರದ ಒಳಕ್ಕೆ ಪ್ರವೇಶ ಇಲ್ಲ. ಹೀಗಾಗಿ ದೂರದ ಜಿಲ್ಲೆಗಳಿಂದ ನಗರದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಬರುವ ಟ್ರಕ್‌ಗಳು ಹೆದ್ದಾರಿ ಬದಿಯಲ್ಲಿ ನಿಂತಿರುತ್ತವೆ (ಟೋಲ್‌ ಗೇಟ್‌ ಬಳಿ). ವೇಗವಾಗಿ ಬರುವ ಕಾರುಗಳು ದ್ವಿಚಕ್ರ ವಾಹನಗಳು ಸರಕು ಸಾಗಣೆ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿರುವ ಘಟನೆಗಳು ಆಗಾಗ್ಗೆ ಸಂಭವಿಸುತ್ತಲೇ ಇರುತ್ತವೆ.   

ಸರಕು ಸಾಗಣೆ ವಾಹನ ನಿಲುಗಡೆಗೆ ನೈಸ್ ರಸ್ತೆಯ ಬದಿಯಲ್ಲಿ ಖಾಲಿ ಪ್ರದೇಶ ನೀಡುವಂತೆ ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದರೂ ಇದಕ್ಕೆ ಮನ್ನಣೆ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.