ADVERTISEMENT

ಬೆಂಗಳೂರು | ಪ್ರತ್ಯೇಕ ಅಪಘಾತ: ಇಬ್ಬರ ಸಾವು

ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣಾ ವಾಪ್ತಿಯಲ್ಲಿ ಸರಣಿ ಅಪಘಾತ

​ಪ್ರಜಾವಾಣಿ ವಾರ್ತೆ
Published 2 ಮೇ 2025, 15:48 IST
Last Updated 2 ಮೇ 2025, 15:48 IST
<div class="paragraphs"><p>ಅಪಘಾತ</p></div>

ಅಪಘಾತ

   

–ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಚಿಕ್ಕಜಾಲ ಹಾಗೂ ವಿಲ್ಸನ್‌ ಗಾರ್ಡನ್‌ ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ADVERTISEMENT

ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ಆಂಬುಲೆನ್ಸ್‌, ಆಟೊ ರಿಕ್ಷಾ ಹಾಗೂ ಸ್ಕೂಟರ್‌ ಮಧ್ಯೆ ಸರಣಿ ಅಪಘಾತ ಸಂಭವಿಸಿ, ಪಾದಚಾರಿ ನಾಗರಾಜ್‌ (57) ಎಂಬುವರು ಮೃತಪಟ್ಟಿದ್ದಾರೆ.

ಈ ಅಪಘಾತದಲ್ಲಿ ರಾಘವೇಂದ್ರ ಕಾಲೊನಿಯ ನಿವಾಸಿ ಸಿ.ರಮೇಶ್, ಮಾಚೋಹಳ್ಳಿಯ ಶಿವರಾಂ ಸ್ವಾಮಿ, ಕೆ.ಕೆ.ಪುರದ ಸೋಮಸುಂದರಂ, ಕೆ.ಎಸ್‌. ಗಾರ್ಡನ್‌ ನಿವಾಸಿ ಪ್ರವೀಣ್‌ ಕುಮಾರ್‌ ಹಾಗೂ ಬ್ರಹ್ಮಾನಂದ ಕುಮಾರ್, ಮೂಕಾಂಬಿಕ ನಗರದ ಪವನ್‌ ಅವರು ಗಾಯಗೊಂಡಿದ್ದಾರೆ.

ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಶಾಂತಿನಗರದ ಬಿಎಂಟಿಸಿ ಬಸ್‌ ನಿಲ್ದಾಣದ ಕಡೆಯಿಂದ ವೇಗವಾಗಿ ಬಂದ ಆಂಬುಲೆನ್ಸ್‌ವೊಂದು ಆಟೊ ಹಾಗೂ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ನಂತರ, ರಸ್ತೆಯ ಬದಿಯಲ್ಲಿ ಹಣ್ಣು ವ್ಯಾಪಾರ ಮಾಡುತ್ತಿದ್ದವರಿಗೂ ಗುದ್ದಿದೆ. ಇದರಿಂದ ಪಾದಚಾರಿಗಳು ಹಾಗೂ ಹಣ್ಣಿನ ವ್ಯಾಪಾರಿಗಳು ಗಾಯಗೊಂಡಿದ್ದಾರೆ ಎಂದು ಸಂಚಾರ ಪೊಲೀಸರು ತಿಳಿಸಿದರು.

ಘಟನೆಯಲ್ಲಿ ಹಣ್ಣಿನ ಗಾಡಿಗಳು, ಆಟೊ ಹಾಗೂ ಸ್ಕೂಟರ್‌ ಜಖಂಗೊಂಡಿದೆ.

ಆಂಬುಲೆನ್ಸ್ ಚಾಲಕ ವಶಕ್ಕೆ: ಘಟನೆ ನಡೆದ ಬಳಿಕ ಸ್ಥಳಕ್ಕೆ ಬಂದ ವಿಲ್ಸನ್‌ ಗಾರ್ಡನ್‌ ಸಂಚಾರ ಠಾಣೆಯ ಪೊಲೀಸರು, ಆಂಬುಲೆನ್ಸ್‌ ಚಾಲಕ ಚಿರಂಜೀವಿ ಎಂಬಾತನನ್ನು ವಶಕ್ಕೆ ಪಡೆದುಕೊಂಡರು. ಇದಕ್ಕೂ ಮೊದಲು ಆಂಬುಲೆನ್ಸ್ ಚಾಲಕನಿಗೆ ಸಾರ್ವಜನಿಕರು ಥಳಿಸಿದ್ದರು.

‘ಚಾಲಕ ಮದ್ಯ ಸೇವಿಸಿ ಆಂಬುಲೆನ್ಸ್‌ ಚಾಲನೆ ಮಾಡುತ್ತಿದ್ದ ಎಂದು ಸಾರ್ವಜನಿಕರು ಹೇಳಿದ್ದಾರೆ. ಆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂಬುದು ಕಂಡುಬಂದಿದೆ’ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಚಿಕ್ಕಜಾಲ ಸಂಚಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್‌ ಡಿಕ್ಕಿಯಾಗಿ ತೀವ್ರವಾಗಿ ಗಾಯಗೊಂಡಿದ್ದ ಮಹಾರಾಷ್ಟ್ರದ ವರ್ಷಾ ಹಾವನೂರು(70) ಮೃತಪಟ್ಟಿದ್ದಾರೆ.

ವರ್ಷಾ ಅವರು ಮಹಾರಾಷ್ಟ್ರದಲ್ಲಿ ನೆಲಸಿದ್ದರು. ನಗರದ ಎಂವಿಐಟಿ ಬಳಿಯ ಮಹಾವೀರ ಅಪಾರ್ಟ್‌ಮೆಂಟ್‌ನಲ್ಲಿ ನೆಲಸಿರುವ ಮಗಳ ಮನೆಗೆ 15 ದಿನಗಳ ಹಿಂದೆ ಬಂದಿದ್ದರು. ಗುರುವಾರ ಸಂಜೆ 6.45ರ ಸುಮಾರಿಗೆ ಮನೆಕೆಲಸದಾಕೆಯ ಜತೆಗೆ ಹೊರಗೆ ತಿರುಗಾಡಿಕೊಂಡು ಬರಲು ತೆರಳಿದ್ದರು. ಬೆಂಗಳೂರು–ಬಳ್ಳಾರಿ ರಸ್ತೆಯ ಎಂವಿಐಟಿ ಜಂಕ್ಷನ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಅತಿವೇಗವಾಗಿ ಬಂದ ಬೈಕ್‌ ವರ್ಷಾ ಅವರಿಗೆ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.