ADVERTISEMENT

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರ ಕೊರತೆ

ಸಂಶೋಧನಾ ಚಟುವಟಿಕೆಗಳು ಸ್ಥಗಿತ

ಎ.ಎಂ.ಸುರೇಶ
Published 22 ಜುಲೈ 2025, 23:18 IST
Last Updated 22 ಜುಲೈ 2025, 23:18 IST
<div class="paragraphs"><p>ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಪ್ರಕೃತಿ ಬಿಡಿಸಿದ ಚಿತ್ತಾರಗಳು</p></div>

ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಪ್ರಕೃತಿ ಬಿಡಿಸಿದ ಚಿತ್ತಾರಗಳು

   

ಬೆಂಗಳೂರು: ಅಧ್ಯಾಪಕರ ಹುದ್ದೆಗಳು ಅಧಿಕ ಸಂಖ್ಯೆಯಲ್ಲಿ ಖಾಲಿ ಇರುವುದರಿಂದ ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಪಿಎಚ್‌.ಡಿವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಇದ್ದು, ಸಂಶೋಧನಾ ಚಟುವಟಿಕೆಗಳು, ವಿಸ್ತರಣಾ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ.

2017ರಲ್ಲಿ ಬೆಂಗಳೂರುವಿಶ್ವವಿದ್ಯಾಲಯವನ್ನು ವಿಭಜಿಸಿ, ಬೆಂಗಳೂರು ನಗರ ಮತ್ತು ಉತ್ತರ
ವಿಶ್ವವಿದ್ಯಾಲಯ ಸ್ಥಾಪಿಸಲಾಯಿತು. ಇದಾಗಿ ಎಂಟು ವರ್ಷವಾದರೂ ಖಾಲಿ ಇರುವ ಬೋಧಕ, ಬೋಧಕೇತರ ಹುದ್ದೆಗಳನ್ನು ತುಂಬಿಲ್ಲ. ಇದರಿಂದಾಗಿ ಬೋಧನಾ ಚಟುವಟಿಕೆಗಳು, ಸಂಶೋಧನೆಗೆ ತೊಂದರೆಯಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ಅಳಲು ತೋಡಿಕೊಂಡರು.

ADVERTISEMENT

ವಿಶ್ವವಿದ್ಯಾಲಯಕ್ಕೆ ಒಟ್ಟು 161 ಬೋಧಕ ಹಾಗೂ 123 ಬೋಧಕೇತರ ಹುದ್ದೆಗಳು ಮಂಜೂರಾಗಿವೆ. ಆದರೆ, ಸದ್ಯ 11 ಮಂದಿ ಬೋಧಕ ಮತ್ತು ಆರು ಮಂದಿ ಬೋಧಕೇತರ ಸಿಬ್ಬಂದಿ ಇದ್ದಾರೆ. ಭೌತವಿಜ್ಞಾನ, ಗಣಕ ವಿಜ್ಞಾನ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ರಾಜ್ಯಶಾಸ್ತ್ರ, ಕನ್ನಡ, ಸಮಾಜ ಕಾರ್ಯ ವಿಭಾಗದಲ್ಲಿ ಒಬ್ಬರೂ ಕಾಯಂ ಅಧ್ಯಾಪಕರಿಲ್ಲ, ಇಂಗ್ಲಿಷ್‌ ವಿಭಾಗದಲ್ಲಿ ಒಬ್ಬರೇ ಕಾಯಂ ಅಧ್ಯಾಪಕರಿದ್ದಾರೆ.

ಬೋಧಕರ ವಿಭಾಗದಲ್ಲಿ 217 ಅತಿಥಿ ಉಪನ್ಯಾಸಕರು ಮತ್ತು ಬೋಧಕೇತರ ವಿಭಾಗದಲ್ಲಿ 74 ಮಂದಿ ಗುತ್ತಿಗೆ ನೌಕರರು ಇದ್ದಾರೆ. ವಿಶ್ವವಿದ್ಯಾಲಯದ ಬಹುತೇಕ ಚಟುವಟಿಕೆಗಳು ಇವರ ಮೇಲೆ ಅವಲಂಬನೆ ಆಗಿವೆ. ಆದರೆ, ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಲು ಅತಿಥಿ ಉಪನ್ಯಾಸಕರಿಗೆ ಅವಕಾಶವಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರ ಕೊರತೆ ಇದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧ್ಯಾಪಕರೊಬ್ಬರು ತಿಳಿಸಿದರು.

ಕಳೆದ ವರ್ಷ ವಾಣಿಜ್ಯ ವಿಭಾಗದಲ್ಲಿ ಪಿಎಚ್‌.ಡಿಗಾಗಿ 150 ಅರ್ಜಿಗಳು ಬಂದಿದ್ದವು. ಆದರೆ, 23 ವಿದ್ಯಾರ್ಥಿಗಳಿಗೆ ಅಷ್ಟೇ ಅವಕಾಶ ಇತ್ತು. ಉಳಿದ ವಿಭಾಗಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಸರ್ಕಾರಿ ಕಲಾ ಕಾಲೇಜು, ಮೌಂಟ್‌ ಕಾರ್ಮೆಲ್‌ ಕಾಲೇಜು ಸೇರಿದಂತೆ 25 ಸಂಶೋಧನಾ ಕೇಂದ್ರ
ಗಳನ್ನು ಗುರುತಿಸಲಾಗಿದೆ. ಅಲ್ಲೂ ಬೋಧಕರ ಕೊರತೆ ಇದೆ. ಅಲ್ಲದೆ ಆ ಕೇಂದ್ರಗಳಿಗೆ ಹೋಗಲು ಕೆಲವರಿಗೆ ಇಷ್ಟವಿಲ್ಲ. ಕ್ಯಾಂಪಸ್‌ನಲ್ಲೇ ಸೀಟು ಬೇಕು ಎನ್ನುತ್ತಾರೆ. ಆದರೆ, ಇಲ್ಲಿ ಬೋಧಕರೇ ಇಲ್ಲದಿರುವುದರಿಂದ ಮಾರ್ಗದರ್ಶಕರನ್ನು ಎಲ್ಲಿಂದ ತರುವುದು ಎಂದು ಪ್ರಶ್ನಿಸಿದರು.

ನ್ಯಾಕ್‌ ಮಾನ್ಯತೆ ಇಲ್ಲ: ‘ಉಪನ್ಯಾಸಕರ ಹುದ್ದೆಗಳು ಖಾಲಿ ಇರುವ ಕಾರಣ ನ್ಯಾಕ್‌ನ ಮಾನ್ಯತೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ನ್ಯಾಕ್‌ನ ಮಾನ್ಯತೆ ಇಲ್ಲದ ಕಾರಣ ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ (ಯುಜಿಸಿ) ಯಾವುದೇ ಅನುದಾನ, ಪ್ರಾಜೆಕ್ಟ್‌ಗಳು ವಿಶ್ವವಿದ್ಯಾಲಯಕ್ಕೆ ಬರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ಅತಿಥಿ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಸೇವೆಯಿಂದ ಬಿಡುಗಡೆ ಮಾಡಿ, ಮುಂದಿನ ವರ್ಷ ಹೊಸದಾಗಿ ನೇಮಕ ಮಾಡಿಕೊಳ್ಳ ಲಾಗುತ್ತದೆ. ಹೀಗಾಗಿ ಯುಜಿಸಿಯಿಂದ ಮಂಜೂರಾಗುವ ಯಾವುದೇ ಪ್ರಾಜೆಕ್ಟ್‌ಗಳ ಪ್ರಮುಖ ಜವಾಬ್ದಾರಿ ಅವರಿಗೆ ವಹಿಸುವಂತಿಲ್ಲ. ಯುಜಿಸಿ ಮಾರ್ಗಸೂಚಿ ಪ್ರಕಾರ ಅವರು ಮಾರ್ಗದರ್ಶಕರಾಗಲು ಅವಕಾಶವಿಲ್ಲ ಎಂದು ವಿವರಿಸಿದರು.

ವಸತಿನಿಲಯದ ಸೌಲಭ್ಯವಿಲ್ಲ

ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಕ್ಯಾಂಪಸ್‌ಗೆ ಬರುತ್ತಾರೆ. ಅವರಿಗೆ ಇಲ್ಲಿ ಉಳಿದುಕೊಳ್ಳಲು ವಸತಿನಿಲಯ ಸೌಲಭ್ಯವಿಲ್ಲ. ಇದರಿಂದಾಗಿ ಬಹಳಷ್ಟು
ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಜ್ಞಾನಭಾರತಿಯಲ್ಲಿ ಇರುವ ಹಾಗೆ, ಇಲ್ಲಿಯೂ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ನಿಲಯ ನಿರ್ಮಿಸುವ ಅಗತ್ಯವಿದೆ. ಸರ್ಕಾರ ಇತ್ತ ಗಮನಹರಿಸಬೇಕು ಎಂದು ಅಧ್ಯಾಪಕರೊಬ್ಬರು ಮನವಿ ಮಾಡಿದರು.

ಸುಮಾರು ಮೂರು ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಕೆಲವರು ಸದ್ಯಕ್ಕೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದಿದ್ದಾರೆ. ಎಲ್ಲರಿಗೂ ಅಲ್ಲಿ ಪ್ರವೇಶ ಸಿಗುವುದಿಲ್ಲ.
ವಿಶ್ವವಿದ್ಯಾಲಯದಲ್ಲೇ ವಸತಿ ನಿಲಯ ಆರಂಭಿಸಬೇಕು ಎಂಬುದು ಅವರ ಬೇಡಿಕೆ.

ಒಳ ಮೀಸಲಾತಿ ತೊಡಕು

ಖಾಲಿ ಇರುವ ಹುದ್ದೆಗಳ ಪೈಕಿ 59 ಬೋಧಕ ಮತ್ತು 47 ಬೋಧಕೇತರ ಹುದ್ದೆಗಳನ್ನು ತುಂಬಿಕೊಳ್ಳಲು 2019ರಲ್ಲಿ ಸರ್ಕಾರ ಅನುಮತಿ ನೀಡಿದೆ. ರೋಸ್ಟರ್‌ ನಿಗದಿ, ನಿಯಮಗಳನ್ನು ರೂಪಿಸಲು ಸಮಯ ತೆಗೆದುಕೊಂಡಿತು. ಈ ಪ್ರಕ್ರಿಯೆಗಳು ಮುಗಿಯುವ ವೇಳೆಗೆ ಒಳ ಮೀಸಲಾತಿ ವಿಷಯ ಚರ್ಚೆಗೆ ಬಂತು. ಇದು ಇತ್ಯರ್ಥವಾಗುವವರೆಗೂ ಹೊಸ ನೇಮಕಾತಿಗಳ ಮೇಲೆ ಸರ್ಕಾರ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಸದ್ಯಕ್ಕೆ ನೇಮಕಾತಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಸರ್ಕಾರ ಈಗ ಕಾಯಂ ಅಧ್ಯಾಪಕರಿಗೆ ಅಷ್ಟೇ ವೇತನ ಅನುದಾನ ನೀಡುತ್ತಿದೆ. ಅತಿಥಿ ಉಪನ್ಯಾಸಕರ ವೇತನವನ್ನು ವಿಶ್ವವಿದ್ಯಾಲಯವೇ ಭರಿಸುತ್ತಿದೆ. ಕಾಯಂ ನೇಮಕಾತಿ ಆದರೆ, ವಿಶ್ವವಿದ್ಯಾಲಯಕ್ಕೆ ಆ ಹಣ ಉಳಿಯಲಿದ್ದು ಅದನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ವೇತನಕ್ಕಾಗಿ ಸರ್ಕಾರ ನೀಡಿರುವ ಅನುದಾನ

ವರ್ಷ    ಮೊತ್ತ

2023–24*  ₹7.45 ಕೋಟಿ

2024–25 ₹6.28 ಕೋಟಿ

2025–26 ₹6.64 ಕೋಟಿ

* ಪಿಂಚಣಿಗಾಗಿ 2013–24ರಲ್ಲಿ ಪ್ರತ್ಯೇಕವಾಗಿ ನೀಡಿದ್ದ ಅನುದಾನ ₹55 ಲಕ್ಷ

ನಗರ ವಿಶ್ವವಿದ್ಯಾಲಯದ ವ್ಯಾಪ್ತಿ ಹಿರಿದು

*220 ಕಾಲೇಜುಗಳು 

*8 ಸ್ವಾಯತ್ತ ಕಾಲೇಜುಗಳು 

*20 ಕ್ಯಾಂಪಸ್‌ನಲ್ಲಿನ ಸ್ನಾತಕೋತ್ತರ ವಿಭಾಗಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.