ಎಂ.ಬಿ.ಪಾಟೀಲ
ಬೆಂಗಳೂರು: ‘ಬೆಂಗಳೂರು ಹಾಗೂ ವಿಜಯಪುರ ನಡುವಿನ ಸಂಚಾರ ಅವಧಿಯನ್ನು ಐದು ಗಂಟೆ ಕಡಿತ ಮಾಡಲು ಪ್ರತ್ಯೇಕ ರೈಲು ಸಂಚಾರ ಆರಂಭಿಸುವಂತೆ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗುವುದು’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ರಾಜ್ಯದಲ್ಲಿ ಅನುಷ್ಠಾನ ಹಂತದಲ್ಲಿರುವ ವಿವಿಧ ರೈಲ್ವೆ ಯೋಜನೆಗಳ ಕುರಿತು ನಗರದಲ್ಲಿ ಬುಧವಾರ ನಡೆದ ನೈರುತ್ಯ ರೈಲ್ವೆ ಅಧಿಕಾರಿಗಳ ಸಭೆಯಲ್ಲಿ ಸಚಿವರು ಮಾಹಿತಿ ಪಡೆದುಕೊಂಡರು.
ಹುಬ್ಬಳ್ಳಿ-ಗದಗ ಬೈಪಾಸ್ ಮಾರ್ಗಗಳಲ್ಲಿ ಬೆಂಗಳೂರು– ವಿಜಯಪುರ ನಡುವಿನ ರೈಲು ಓಡಿಸಲು ತೊಂದರೆ ಇಲ್ಲ. ಚಾಲ್ತಿಯಲ್ಲಿರುವ ರೈಲುಗಳ ಮಾರ್ಗ ಬದಲಿಸಲು ಸಾಧ್ಯವಿಲ್ಲ. ಇದಕ್ಕಾಗಿ ರೈಲ್ವೆ ಮಂಡಳಿಯಿಂದ ಹೊಸ ರೈಲು ಮಂಜೂರು ಮಾಡಿಸಿಕೊಳ್ಳಬೇಕು ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ. ಈ ಸಂಬಂಧ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಹಾಗೂ ವಿ.ಸೋಮಣ್ಣ ಅವರಿಗೆ ಪತ್ರ ಬರೆಯಲಾಗುವುದು ಎಂದು ಪಾಟೀಲ ಹೇಳಿದರು.
‘ಈ ಮಾರ್ಗದ ವಂದಾಲ ಮತ್ತು ಆಲಮಟ್ಟಿ ನಡುವೆ ಜೋಡಿ ಹಳಿ ಕಾಮಗಾರಿ 2026ರ ಫೆಬ್ರವರಿಯಲ್ಲಿ ಮುಗಿಯಲಿದೆ. ಕೃಷ್ಣಾ ನದಿಗೆ ಅರ್ಧ ಕಿ.ಮೀ. ಉದ್ದದ ಉಕ್ಕು ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮಾರ್ಚ್ ವೇಳೆಗೆ ಜೋಡಿ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಮುಗಿಯಲಿದೆ. ಆ ಬಳಿಕ ಹಾಲಿ ರೈಲುಗಳ ವೇಗ ಹೆಚ್ಚಾಗಲಿದೆ. ಆಗ ಹೊಸ ರೈಲು ಬೇಡಿಕೆ ಸಲ್ಲಿಸಲು ಸುಲಭವಾಗಲಿದೆ’ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ವಂದೇ ಭಾರತ್: ‘ಬೆಂಗಳೂರು-ವಿಜಯಪುರ ನಡುವೆ ವಂದೇ ಭಾರತ್ ರೈಲು ಸೇವೆ ಬೇಡಿಕೆಯಿದ್ದರೂ ಅದು ಕಾರ್ಯಸಾಧುವಲ್ಲ. ಬದಲಿಗೆ ವಂದೇಭಾರತ್ ಸ್ಲೀಪರ್ ಕೋಚ್ ಸೇವೆ ಆರಂಭಿಸಬಹುದು ಎಂದು ಅಧಿಕಾರಿಗಳು ಸಲಹೆ ನೀಡಿದ್ದು, ಸೋಮಣ್ಣ ಅವರ ಜತೆಗೆ ಸಭೆ ಮಾಡಿ ಮನವಿ ಮಾಡಲಾಗುವುದು’ ಎಂದು ಎಂ.ಬಿ. ಪಾಟೀಲ ತಿಳಿಸಿದರು.
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗದಲ್ಲಿ ಊರುಕೆರೆ-ತಿಮ್ಮರಾಯನಹಳ್ಳಿ ನಡುವೆ 13 ಕಿ.ಮೀ.ಹಳಿ ಜೋಡಣೆ ಡಿಸೆಂಬರ್‌ನಲ್ಲೇ ಮುಗಿಯಲಿದೆ.
ತುಮಕೂರು-ರಾಯದುರ್ಗ ನಡುವೆ ಹಳಿ ಜೋಡಣೆ ನಡೆಯುತ್ತಿದೆ. ಇಲ್ಲಿ ತುಮಕೂರು-ಊರುಕೆರೆ ಮತ್ತು ದೊಡ್ಡಹಳ್ಳಿ-ಪಾವಗಡ ನಡುವೆ 27 ಕಿ.ಮೀ. ಕಾಮಗಾರಿ ಈ ವರ್ಷ ಮುಗಿಯಲಿದೆ.
ದೊಡ್ಡಹಳ್ಳಿ-ಪಾವಗಡ ನಡುವೆ (20 ಕಿ.ಮೀ) 2026ರ ಜನವರಿಯಿಂದ ರೈಲು ಸಂಚಾರ ಶುರುವಾಗಲಿದೆ.
ಮಡಕಶಿರಾ-ಪಾವಗಡ ನಡುವಿನ ಕಾಮಗಾರಿ 2026ರ ಡಿಸೆಂಬರ್ ಹೊತ್ತಿಗೆ, ಮಧುಗಿರಿ-ಪಾವಗಡ ಮಧ್ಯದ ಹಳಿ ಜೋಡಣೆ 2028ರ ಫೆಬ್ರವರಿ ವೇಳೆಗೆ ಮುಗಿಯಲಿದೆ
ಭರಮಸಾಗರ-ಹೆಬ್ಬಾಳು, ಹೆಬ್ಬಾಳು-ತೋಳಹುಣಸೆ ನಡುವೆ ಹಳಿ ಜೋಡಣೆ 2026ರ ಫೆಬ್ರವರಿಗೆ ಆಗಲಿದೆ.
ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಕುರಿತು ಡೆಹ್ರಾಡೂನ್‌ನ ವನ್ಯಜೀವಿ ಸಂಸ್ಥೆ ಅಧ್ಯಯನ ವರದಿ 2026ರ ಜೂನ್‌ಗೆ ಬರಲಿದ್ದು, ನಂತರ ನಿರ್ಧಾರ ಆಗಲಿದೆ.
‘ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ಮಾರ್ಗವನ್ನು ನಾಲ್ಕು ಹಳಿಗಳಿಗೆ ಬದಲಿಸುವ ಕಾರ್ಯಸಾಧ್ಯತಾ ವರದಿಗಳು ಕ್ರಮವಾಗಿ ಈ ತಿಂಗಳ 25 ಮತ್ತು 2026ರ ಮೇ ತಿಂಗಳಲ್ಲಿ ಕೈ ಸೇರಲಿವೆ. ಚತುಷ್ಪಥ ಮಾರ್ಗದಿಂದ ಸ್ಥಳೀಯರಿಗೆ ಅನುಕೂಲ ಆಗಲಿದೆ’ ಎಂದು ಎಂ ಬಿ ಪಾಟೀಲ ತಿಳಿಸಿದರು.
ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಜೋಡಿ ಹಳಿಗೆ ಏರಿಸುವ ಬಗ್ಗೆ ಚರ್ಚಿಸಲಾಗಿದೆ. ಹಾಸನ-ಮಂಗಳೂರು ನಡುವೆ ರಸ್ತೆ ಮತ್ತು ರೈಲು ಎರಡನ್ನೂ ಸಮಾನಾಂತರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿರುವುದನ್ನು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.