ಭಾರಿ ಮಳೆಯಿಂದಾಗಿ ಜಲಾವೃತಗೊಂಡಿದ್ದ ಬೆಂಗಳೂರಿನ ಸಾಯಿ ಲೇಔಟ್‌ನಲ್ಲಿ ಸೋಮವಾರ ವ್ಯಕ್ತಿಯೊಬ್ಬರು ಮರದ ಹಲಗೆಯನ್ನೇ ದೋಣಿಯನ್ನಾಗಿ ಮಾಡಿಕೊಂಡು ಸಾಗಿದರು
ಚಿತ್ರ: ಬಿ.ಕೆ.ಜನಾರ್ದನ್
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿಯಿಂದ ಸೋಮವಾರ ಮುಂಜಾನೆವರೆಗೆ ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಯಿಂದ ನಗರದ ಅರ್ಧಭಾಗ ಜಲಾವೃತಗೊಂಡಿತು.
ನಗರದ ವಿವಿಧ ಭಾಗಗಳಲ್ಲಿ ಸುಮಾರು ನಾಲ್ಕು ಗಂಟೆ ಸುರಿದ ಬಿರುಸಾದ ಮಳೆಯಿಂದ ಹಲವು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ, ನಿವಾಸಿಗಳ ರಾತ್ರಿಯ ನಿದ್ದೆಗೆಡಿಸಿತು. ಪ್ರಮುಖ ರಸ್ತೆಗಳು ಜಲಾವೃತವಾಗಿದ್ದರಿಂದ ಸೋಮವಾರ ಬೆಳಿಗ್ಗೆ ಕಚೇರಿಗೆ ತೆರಳುವ ನಾಗರಿಕರು ಸಂಕಷ್ಟಕ್ಕೊಳಗಾದರು. ಬಿಎಂಟಿಸಿ ಬಸ್ ಸೇರಿದಂತೆ ಹಲವು ವಾಹನಗಳು ರಸ್ತೆ ಮಧ್ಯದಲ್ಲಿಯೇ ನಿಂತಿದ್ದವು.
ಮಹದೇವಪುರದ ಶ್ರೀಸಾಯಿ ಲೇಔಟ್ ಸಂಪೂರ್ಣ ಜಲಾವೃತಗೊಂಡಿದ್ದು, ಜನರನ್ನು ಬೋಟ್ ಹಾಗೂ ಟ್ರ್ಯಾಕ್ಟರ್ ಮೂಲಕ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲಾಯಿತು. ಹೆಣ್ಣೂರಿನ ನೆಲಮಹಡಿಯಲ್ಲಿದ್ದ ಅನಾಥಾಶ್ರಮ ವೊಂದಕ್ಕೆ ಭಾನುವಾರ ರಾತ್ರಿ ಮಳೆನೀರು ನುಗ್ಗಿದ್ದು, ಅಂಗವಿಕಲರೂ ಸೇರಿದಂತೆ 55 ವೃದ್ಧರು ಸೋಮವಾರದ ಮಧ್ಯಾಹ್ನ ದವರೆಗೂ ಹೊರಬರಲಾಗದೆ ಪರಿತಪಿಸಿದರು.
ನಗರದ ಎಲ್ಲ ಭಾಗಗಳಲ್ಲೂ ಭಾರಿ ಮಳೆಯಾಗಿದ್ದು, ಕೆಂಗೇರಿ ವ್ಯಾಪ್ತಿಯಲ್ಲಿ ಅತಿಹೆಚ್ಚು (13.2 ಸೆಂ.ಮೀ) ಮಳೆಯಾಗಿದೆ. ಗೊಟ್ಟಿಗೆರೆಯಲ್ಲಿ 3.2 ಸೆಂ.ಮೀ ಮಳೆಯಾಗಿದ್ದು, ಸರಾಸರಿ 6.6 ಸೆಂ.ಮೀ ಮಳೆಯಾಗಿದೆ.
ಮಳೆ ಹೆಚ್ಚಳ ಹಾಗೂ ಸಂಚಾರ ದಟ್ಟಣೆ ಉಂಟಾಗಬಹುದೆಂಬ ಕಾರಣಕ್ಕೆ ಸ್ಥಳ ಭೇಟಿ ಕೈಬಿಟ್ಟ ಇಬ್ಬರೂ ನಾಯಕರು, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ‘ವಾರ್‌ರೂಮ್’ಗೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಮಂಗಳವಾರ ನಡೆಯಲಿರುವ ಸಾಧನಾ ಸಮಾವೇಶದ ಸಿದ್ಧತೆಗಾಗಿ ಹೊಸಪೇಟೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರು, ಪ್ರವಾಸ ಮೊಟಕುಗೊಳಿಸಿ ಬೆಂಗಳೂರಿಗೆ ದೌಡಾಯಿಸಿದರು. ಮಳೆಯಿಂದ ಹಾನಿಗೊಳಗಾದ ಸಿಲ್ಕ್ ಬೋರ್ಡ್ ಹಾಗೂ ರಾಜರಾಜೇಶ್ವರಿನಗರ ಕೆಲವು ಸ್ಥಳಗಳಿಗೆ ಸೋಮವಾರ ರಾತ್ರಿ ಭೇಟಿ ನೀಡಿದ ಅವರು, ಸ್ಥಳೀಯರ ಅಹವಾಲು ಆಲಿಸಿದರು.
ಸಿಸಿಬಿ, ಪೊಲೀಸ್ ಠಾಣೆ ಜಲಾವೃತ
ಶಾಂತಿನಗರದಲ್ಲಿರುವ ಕೇಂದ್ರ ಅಪರಾಧ ಪತ್ತೆ ದಳದ ( ಸಿಸಿಬಿ) ಕಚೇರಿ ಹಾಗೂ ಸಂಪಂಗಿರಾಮನಗರ ಪೊಲೀಸ್ ಠಾಣೆ ಸಂಪೂರ್ಣ ಜಲಾವೃತಗೊಂಡಿವೆ.
ಸಿಸಿಬಿ ಕಚೇರಿಗೆ ಮಳೆ ನೀರು ನುಗ್ಗಿ ಕಡತಗಳಿಗೆ ಹಾನಿಯಾಗಿದೆ. ಅಧಿಕಾರಿಗಳು ಹಾನಿಯ ಕುರಿತು ಮೌಲ್ಯಮಾಪನ ಮಾಡುತ್ತಿದ್ದಾರೆ. ಕಚೇರಿಯ ಕೆಳ ಮಹಡಿಯಲ್ಲಿ ಮೊಣಕಾಲುವರೆಗೂ ನೀರು ನಿಂತಿದ್ದು, ಸಂಜೆವರೆಗೂ ನೀರಿನ ಮಟ್ಟ ಕಡಿಮೆಯಾಗಿರಲಿಲ್ಲ.
ಚಾಮರಾಜಪೇಟೆಯಲ್ಲಿದ್ದ ಸಿಸಿಬಿ ಕಚೇರಿಯ ಹಳೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದರಿಂದ ಶಾಂತಿನಗರದಲ್ಲಿರುವ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಲಕ್ಷಾಂತರ ರೂಪಾಯಿ ಬಾಡಿಗೆ ನೀಡಿದರೂ ಮಳೆ ಸಂದರ್ಭದಲ್ಲಿ ಸೂಕ್ತ ನಿರ್ವಹಣೆ ಸೌಲಭ್ಯ ಇಲ್ಲದಿರುವುದು ಕಚೇರಿ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ.
ರಾಜಕಾಲುವೆಗಳು ಒತ್ತುವರಿಯಾಗಿ ಹೂಳು ತುಂಬಿರುವುದರಿಂದ ತೊಂದರೆಯಾಗಿದೆ. ತೆರವು ಮಾಡಲು ನಗರಪಾಲಿಕೆಗೆ ಸೂಚಿಸಲಾಗಿದೆ.– ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಿಲ್ಕ್ ಬೋರ್ಡ್ ಹೆಬ್ಬಾಳ ಜಂಕ್ಷನ್‌ಗಳಲ್ಲಿ ಮಳೆನೀರು ಹರಿದುಹೋಗುವಂತೆ ದಾರಿ ಮಾಡಲು ರೈಲ್ವೆಯವರಿಗೆ ಕೆಲಸ ವಹಿಸಲಾಗಿದೆ.– ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿ
ಐವರ ಸಾವು
ರಾಜ್ಯದಾದ್ಯಂತ ಭಾನುವಾರ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಬೆಂಗಳೂರಿನಲ್ಲಿ ಮೂವರು ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿದ್ದಾರೆ.
ನಗರದಲ್ಲಿ ಹನ್ನೆರಡು ವರ್ಷದ ಬಾಲಕ ಸೇರಿ ಮೂವರು ಮೃತಪಟ್ಟಿದ್ದಾರೆ. ಮಹದೇವಪುರ ನಿವಾಸಿ ಶಶಿಕಲಾ (35), ಬಿಟಿಎಂ ಎರಡನೇ ಹಂತದ ಡಾಲರ್ಸ್ ಕಾಲೊನಿ ಬಳಿಯ ಎನ್. ಎಸ್. ಪಾಳ್ಯ ನಿವಾಸಿ ಮನಮೋಹನ್ ಕಾಮತ್ (63) ಹಾಗೂ ದಿನೇಶ್ (12) ಮೃತಪಟ್ಟವರು.
ಮಹದೇವಪುರದಲ್ಲಿರುವ ಐಜೆಡ್ ಎಂಬ ಕಂಪನಿಯ ಕಾಂಪೌಂಡ್ ಕುಸಿದು ಸ್ವಚ್ಛತಾ ಕೆಲಸ ಮಾಡುತ್ತಿದ್ದ ಯಾದಗಿರಿ ಜಿಲ್ಲೆಯ ಶಹಾಪುರದ ಶಶಿಕಲಾ ಅವರು ಮೃತಪಟ್ಟಿದ್ದಾರೆ.
ಠಾಣಾ ವ್ಯಾಪ್ತಿಯ ಚನ್ನಸಂದ್ರದಲ್ಲಿರುವ ಕಂಪನಿಗೆ ಸೋಮವಾರ ಬೆಳಿಗ್ಗೆ 7 ಗಂಟೆಗೆ ಅವರು ಕೆಲಸಕ್ಕೆ ಬಂದಿದ್ದರು. ಸ್ವಚ್ಛತಾ ಸಾಮಗ್ರಿಗಳನ್ನು ತೆಗೆದುಕೊಳ್ಳುವ ಸಂದರ್ಭದಲ್ಲಿ ಅವರ ಮೇಲೆ ಗೋಡೆ ಕುಸಿದಿದೆ. ರಾತ್ರಿಯಿಡೀ ಸುರಿದ ಮಳೆಗೆ ಕಾಂಪೌಂಡ್ ನೆನೆದಿತ್ತು.
ಎನ್.ಎಸ್.ಪಾಳ್ಯದ ಮಧುವನ ಅಪಾರ್ಟ್‌ಮೆಂಟ್ ಫ್ಲ್ಯಾಟ್‌ನಲ್ಲಿ ವಾಸವಿದ್ದ ಮನಮೋಹನ್ ಅವರು ಅಪಾರ್ಟ್‌ಮೆಂಟ್ ಸೆಲ್ಲಾರ್‌ನಲ್ಲಿ ಸಂಗ್ರಹಗೊಂಡಿದ್ದ ನೀರನ್ನು ಹೊರ ತೆಗೆಯಲು ಮೋಟಾರು ಪಂಪ್ ಸ್ವಿಚ್ ಆನ್ ಮಾಡಿದ್ದಾರೆ. ನೀರು ಹೊರ ತೆಗೆಯುವ ವೇಳೆ ಶಾರ್ಟ್ ಸರ್ಕಿಟ್‌ನಿಂದಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದೇ ಅಪಾರ್ಟ್‌ಮೆಂಟ್‌ನಲ್ಲಿ ಭದ್ರತಾ ಸಿಬ್ಬಂದಿ ಆಗಿರುವ ನೇಪಾಳ ಪ್ರಜೆ ಭರತ್ ಅವರ ಮಗ ದಿನೇಶ್‌ಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ.
ಶಶಿಕಲಾ ಅವರು ಕುಟುಂಬ ಸಮೇತ ಕೆಲವು ವರ್ಷಗಳಿಂದ ನಗರದಲ್ಲಿ ವಾಸಿಸುತ್ತಿದ್ದರು.
ಶಶಿಕಲಾಗೆ ಇಬ್ಬರು ಮಕ್ಕಳಿದ್ದು, ಪತಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಮೃತ ಮಹಿಳೆ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಲಾಗಿದೆ.
ಸಿಡಿಲು ಬಡಿದು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಜಾಲಹಳ್ಳಿಯ ಬಳಿಯ ಬಿ.ಆರ್. ಗುಂಡ ಗ್ರಾಮದ ಕುರಿಗಾಹಿ ಬಾಲಕ ಹನುಮಗೌಡ ನಾಯಕ (16) ಮತ್ತು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಉಳುವರೆ ಗ್ರಾಮದಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ತಮ್ಮಣ್ಣಿ ಅನಂತ ಗೌಡ (65) ಎಂಬುವರು ಮೃತಪಟ್ಟಿದ್ದಾರೆ.
ಅನಂತ ಗೌಡ ಅವರು ಮನೆಯ ಜಗುಲಿಯಲ್ಲಿ ಕೂತಿದ್ದ ವೇಳೆ ಸಿಡಿಲು ಬಡಿದಿದೆ ಎಂದು ಅಂಕೋಲಾ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಸೋಮವಾರ ಮಧ್ಯಾಹ್ನದಿಂದ ಸಂಜೆಯವರೆಗೂ ಸಾಧಾರಣ ಮಳೆ ಸುರಿದಿದೆ.
ಮಡಿಕೇರಿಯ ಕೆಲವೆಡೆ ತುಂತುರು ಮಳೆಯಾಗಿದೆ.
ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ, ಉಡುಪಿ ಜಿಲ್ಲೆಯ ಕೆಲವೆಡೆ ಮಳೆ ಆಗಿದೆ.
ಬೀದರ್ ಜಿಲ್ಲೆಯಲ್ಲಿ ಮಳೆಯ ಆರ್ಭಟ ಸೋಮವಾರವೂ ಮುಂದುವರಿಯಿತು.
7 ಜಿಲ್ಲೆಗಳಿಗೆ ರೆಡ್ ಅಲರ್ಟ್
ರಾಜ್ಯದ ವಿವಿಧೆಡೆ ಮಂಗಳವಾರ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಏಳು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’, ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಷಿಸಿದೆ.
ಬೆಳಗಾವಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಧಾರವಾಡ, ಹಾವೇರಿ ಮತ್ತು ಹಾಸನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳು ಭಾರಿ ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 20ರಿಂದ 22ರವರೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ.
ಎಲ್ಲೆಲ್ಲಿ ಏನೇನಾಯ್ತು?
ಮಹದೇವಪುರದಲ್ಲಿ 10 ಪ್ರದೇಶಗಳು ಜಲಾವೃತ, ನಿವಾಸಿಗಳಿಗೆ ಟ್ರ್ಯಾಕ್ಟರ್ ಮೂಲಕ ಉಪಾಹಾರ, ನೀರು ಪೂರೈಕೆ
ರಾಜಕಾಲುವೆಗಳಿಂದ ನೀರು ಹಿಮ್ಮುಖವಾಗಿ ಹರಿದು ಎಚ್‌ಆರ್ ಬಿಆರ್ ಲೇಔಟ್, ಹೊರಮಾವು, ಬೈರಸಂದ್ರ ಲೇಔಟ್ ಜಲಾವೃತ
ವೃಷಭಾವತಿ ಕಣಿವೆಯಲ್ಲಿ ನೀರಿನಮಟ್ಟ ಹೆಚ್ಚಾಗಿ ಮೂರು ಹಸು, ಒಂದು ಕರು ಹಾಗೂ ಒಂದು ಎಮ್ಮೆ ಸಾವು
ಧರೆಗುರುಳಿದ 27 ಮರಗಳು, 43 ಮರದ ಕೊಂಬೆಗಳು, ತೆರವು ಕಾರ್ಯಾಚರಣೆಗೆ 30 ತಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.