ADVERTISEMENT

ಬೆಂಗಳೂರು: ಟಿಪ್ಪರ್ ಹರಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 16:24 IST
Last Updated 16 ಫೆಬ್ರುವರಿ 2026, 16:24 IST
<div class="paragraphs"><p>ಅಪಘಾತ</p></div>

ಅಪಘಾತ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಾಯಿ ಮೃತಪಟ್ಟಿದ್ದು, ಅವರ ಮಗನಿಗೆ ಸಣ್ಣ ಗಾಯವಾಗಿದೆ.

ADVERTISEMENT

ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಅಮಲಾ (49) ಅವರು ರಸ್ತೆ ಮೇಲೆ ಬಿದ್ದರು. ಅವರ ಮೇಲೆ ಟಿಪ್ಪರ್​​ ಹರಿದ ಕಾರಣ ಎರಡೂ ಕಾಲುಗಳು ಜಖಂಗೊಂಡಿದ್ದವು. ಗಾಯಾಳುವನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಸಂಬಂಧ ಟಿಪ್ಪರ್ ಚಾಲಕನ ವಿರುದ್ಧ ಆಡುಗೋಡಿ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

‘ರಸ್ತೆ ಗುಂಡಿಗಳಿಂದಲೇ ಅಪಘಾತ ಸಂಭವಿಸಿದೆ’ ಎಂದು‌ ಸ್ಥಳೀಯರು ಆರೋಪಿಸಿದರೆ, ‘ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ಆಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಚರ್ಚ್​​ಗೆ ಹೋಗಿ ದ್ವಿಚಕ್ರ ವಾಹನದಲ್ಲಿ ಅಮಲಾ ಅವರು ಮಗನ ಜೊತೆ ಹಿಂತಿರುಗುವ ವೇಳೆ ಆಡುಗೋಡಿಯ ಬಾಷ್ ಕಂಪನಿ ಮುಂದೆ ಅಪಘಾತ ಸಂಭವಿಸಿದೆ. ಎದುರಿಗೆ ಆಟೊ ಬಂದ ಕಾರಣ ಅಮಲಾ ಬ್ರೇಕ್​​ ಹಾಕಿದ್ದಾರೆ. ಆಗ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್​​, ದ್ವಿಚಕ್ರ ವಾಹನದ ಮೇಲೆ ಹರಿದಿದೆ. ಅಪಘಾತದಲ್ಲಿ ಅವರ ಮಗನಿಗೆ ಸಣ್ಣ ಗಾಯಗಳಾಗಿವೆ. ಘಟನೆ ಬಳಿಕ ಟಿಪ್ಪರ್​​ ಚಾಲಕ ಪರಾರಿಯಾಗಿದ್ದಾನೆ’ ಎಂದು ಮೃತ ಅಮಲಾ ಅವರ ಸಹೋದರ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.