ADVERTISEMENT

ವರದಕ್ಷಿಣೆ ಕಿರುಕುಳ | ಪತ್ನಿ ಆತ್ಮಹತ್ಯೆ: ‌ಪತಿ, ಕುಟುಂಬಸ್ಥರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 15:41 IST
Last Updated 26 ಜನವರಿ 2026, 15:41 IST
ಕೀರ್ತಿ ಹಾಗೂ ಗುರುಪ್ರಸಾದ್‌ 
ಕೀರ್ತಿ ಹಾಗೂ ಗುರುಪ್ರಸಾದ್‌    

ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಮನನೊಂದ ಕೀರ್ತಿ (24) ಎಂಬುವವರು ಯಡಿಯೂರಿನ ಮನೆಯಲ್ಲಿ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಗುರುಪ್ರಸಾದ್ ಹಾಗೂ ಅವರ ಕುಟುಂಬದ ಸದಸ್ಯರ ವಿರುದ್ಧ ವರದಕ್ಷಿಣೆ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತುಮಕೂರು ಜಿಲ್ಲೆ ಮಧುಗಿರಿಯ ಕೀರ್ತಿ ಅವರು 2023ರ ನವೆಂಬರ್‌ನಲ್ಲಿ ಗುರುಪ್ರಸಾದ್ ಅವರನ್ನು ಮದುವೆ ಆಗಿದ್ದರು. ಜಿಮ್ ತರಬೇತುದಾರರಾಗಿ ಗುರುಪ್ರಸಾದ್ ಅವರು ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.

ನಗರದ ಬಡಾವಣೆಯೊಂದರಲ್ಲಿ ಹೊಸ ಮನೆ ನಿರ್ಮಿಸಲು ಗುರುಪ್ರಸಾದ್ ಆರಂಭಿಸಿದ್ದರು. ಆಗ, ₹10 ಲಕ್ಷ ಕೊಡುವಂತೆ ಕೀರ್ತಿ ಅವರ ಪೋಷಕರಲ್ಲಿ ಗುರುಪ್ರಸಾದ್ ಕೇಳಿಕೊಂಡಿದ್ದರು. ಕೀರ್ತಿ ಪೋಷಕರು, 2025ರ ಡಿಸೆಂಬರ್‌ನಲ್ಲಿ ₹8 ಲಕ್ಷ ಕೊಟ್ಟಿದ್ದರು. ಆ ನಂತರವೂ ಆತ ತವರು ಮನೆಯಿಂದ ಹೆಚ್ಚಿನ ಹಣ ತರುವಂತೆ ಪತ್ನಿಗೆ ಕಿರುಕುಳ ಕೊಡುತ್ತಿದ್ದರು ಎನ್ನಲಾಗಿದೆ.

ADVERTISEMENT

ಪತಿ ಮತ್ತು ಅವರ ಪೋಷಕರ ಕಿರುಕುಳದಿಂದ ಮನನೊಂದಿದ್ದ ಕೀರ್ತಿ, ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆ ಆಗಿದೆ. ಪುತ್ರಿ ಸಾವಿಗೆ ಅಳಿಯ ಗುರುಪ್ರಸಾದ್, ಆತನ ಮತ್ತು ಕುಟುಂಬದ ಸದಸ್ಯರ ವರದಕ್ಷಿಣೆ ಕಿರುಕುಳವೇ ಕಾರಣವೆಂದು ಕೀರ್ತಿಯ ತಂದೆ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು.

ಮದುವೆಗೆ ₹ 35 ಲಕ್ಷ ಖರ್ಚು:

‘₹35 ಲಕ್ಷ ಖರ್ಚು ಮಾಡಿ ಗುರುಪ್ರಸಾದ್ ಜತೆ ಅದ್ಧೂರಿಯಾಗಿ ಮದುವೆ ಮಾಡಿದ್ದೆವು. ಮದುವೆ ಸಂದರ್ಭದಲ್ಲಿ ಗುರುಪ್ರಸಾದ್‍ಗೆ ವರದಕ್ಷಿಣೆಯಾಗಿ ಹಣ ಹಾಗೂ ಚಿನ್ನಾಭರಣ ಕೊಟ್ಟಿದ್ದೆವು. ಆ ನಂತರವೂ ಗುರುಪ್ರಸಾದ್ ಮತ್ತು ಆತನ ಕುಟುಂಬದ ಸದಸ್ಯರು ಕಿರುಕುಳ ಕೊಡುತ್ತಿದ್ದರು. ಈ ಬಗ್ಗೆ ಮಗಳು ಮಾಹಿತಿ ನೀಡಿದ್ದಳು. ಹಿಂದೆಯೂ ಗುರುಪ್ರಸಾದ್ ಅವರ ಜತೆ ಸಂಧಾನ ನಡೆಸಲಾಗಿತ್ತು. ಮತ್ತೆ ಕಿರುಕುಳ ನೀಡಿದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕೀರ್ತಿ ಅವರ ತಂದೆ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.