ಚಾಕು
(ಸಾಂದರ್ಭಿಕ ಚಿತ್ರ)
ಬೆಂಗಳೂರು: ಯುವತಿಯನ್ನು ಪ್ರೀತಿಸುವ ವಿಚಾರಕ್ಕೆ ಸಂಬಂಧಿಸಿ, ಯುವಕನೊಬ್ಬನಿಗೆ ಚಾಕುವಿನಿಂದ ಇರಿದಿರುವ ಘಟನೆ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಾಕು ಇರಿತದಿಂದ ಗಾಯಗೊಂಡಿರುವ ಚಂದನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಯತೀಶ್ ಪರಾರಿಯಾಗಿದ್ದು, ಪೊಲೀಸರು ಪತ್ತೆ ಕಾರ್ಯ ಆರಂಭಿಸಿದ್ದಾರೆ.
‘ಗಾಯಾಳು ಚಂದನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದಾನೆ. ಆದರೆ, ಅದೇ ಯುವತಿಯನ್ನು ಆರೋಪಿ ಯತೀಶ್ ಸಹ ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಜಗಳವಾಗಿತ್ತು. ಬಳಿಕ ಆತನಿಂದ ಅಂತರ ಕಾಯ್ದುಕೊಂಡಿದ್ದಳು. ಚಂದನ್ ಎಂಬಾತ ತನ್ನ ಮಾಜಿ ಪ್ರೇಯಸಿಯನ್ನು ಪ್ರೀತಿಸುತ್ತಿರುವ ವಿಚಾರ ಆರೋಪಿಗೆ ಗೊತ್ತಾಗಿದೆ. ಹಾಗಾಗಿ ಮಾತುಕತೆಯ ನೆಪದಲ್ಲಿ ಚಂದನ್‌ನನ್ನು ಕರೆಸಿಕೊಂಡು ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದು, ಪರಿಸ್ಥಿತಿ ಗಂಭೀರವಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪರಾರಿಯಾಗಿರುವ ಆರೋಪಿ ಹಾಗೂ ಆತನ ಸಹಚರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.