ADVERTISEMENT

ಹೆಚ್ಚು ವಿದ್ಯುತ್ ಬಳಕೆಯಿಂದ ಬಿಲ್ ಏರಿಕೆ: ಬೆಸ್ಕಾಂ

​ಪ್ರಜಾವಾಣಿ ವಾರ್ತೆ
Published 14 ಮೇ 2020, 1:36 IST
Last Updated 14 ಮೇ 2020, 1:36 IST
ವಿದ್ಯುತ್‌ ಬಿಲ್‌ ನೀಡುವಲ್ಲಿ ನಿರತರಾಗಿರುವ ಬೆಸ್ಕಾಂ ಸಿಬ್ಬಂದಿ
ವಿದ್ಯುತ್‌ ಬಿಲ್‌ ನೀಡುವಲ್ಲಿ ನಿರತರಾಗಿರುವ ಬೆಸ್ಕಾಂ ಸಿಬ್ಬಂದಿ    

ಬೆಂಗಳೂರು: ಲಾಕ್‍ಡೌನ್ ಇರುವ ಕಾರಣ ಎಲ್ಲರೂ ಮನೆಯಲ್ಲಿದ್ದಾರೆ. ಬೇಸಿಗೆಯಾದ ಕಾರಣ ಮನೆಗಳಲ್ಲಿ ಫ್ಯಾನ್, ಎ.ಸಿ ಸೇರಿ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳ ಬಳಕೆ ಹೆಚ್ಚಾಗಿದೆ. ಇದರ ಪರಿಣಾಮ ಕಳೆದೆರಡು ತಿಂಗಳ ವಿದ್ಯುತ್ ಬಿಲ್ ಏರಿಕೆಯಾಗಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.

ಲಾಕ್‍ಡೌನ್ ವೇಳೆ ಬೇರೆ ತಿಂಗಳಿಗಿಂತ ಈ ಬಾರಿ ವಿದ್ಯುತ್ ಬಿಲ್ ಎರಡು ಪಟ್ಟು ಜಾಸ್ತಿಯಾಗಿದೆ ಎಂದು ವಿದ್ಯುತ್‌ ಬಳಕೆದಾರರು ದೂರಿದ್ದರು. ಈ ಹಿನ್ನೆಲೆಯಲ್ಲಿ ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್ ಹಾಗೂಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಗೌಡ ಅವರು ಬುಧವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.

'ನಾವು ಮನಬಂದಂತೆ ವಿದ್ಯುತ್ ಬಿಲ್ ನೀಡಿಲ್ಲ. ಬಿಲ್‍ನಲ್ಲೂ ಯಾವುದೇ ಏರಿಕೆ ಮಾಡಿಲ್ಲ. ಒಂದೆಡೆ ಬೇಸಿಗೆ ಹಾಗೂ ಬಹುತೇಕರು ಮನೆಯಿಂದಲೇ ಕೆಲಸ ಮಾಡುತ್ತಿರುವ ಹಿನ್ನೆಲೆ ವಿದ್ಯುತ್ ಬಳಕೆಯೂ ಹೆಚ್ಚಿದೆ. ವಿದ್ಯುತ್ ಬಳಕೆ ಹೆಚ್ಚಾದಂತೆ ಸ್ಲ್ಯಾಬ್ ದರಗಳು ಅನ್ವಯವಾಗುತ್ತವೆ. ಇದರಿಂದ ಸಾಮಾನ್ಯವಾಗಿ ದರ ಏರಿದೆ. ಬಿಲ್‍ನಲ್ಲಿ ನಿಗದಿತ ಶುಲ್ಕ, ಪ್ರಸಕ್ತ ರೀಡಿಂಗ್ ಹಾಗೂ ತೆರಿಗೆ ಎಂಬ ಅಂಶಗಳು ಇರುತ್ತವೆ. ವಿದ್ಯುತ್ ಬಳಕೆ ಮಾಡದಿದ್ದರೂ ನಿಗದಿತ ಶುಲ್ಕ ಮಾತ್ರ ಬಿಲ್‍ನಲ್ಲಿ ಬರುತ್ತದೆ. 3 ತಿಂಗಳಲ್ಲಿ 3 ಕಂತುಗಳಲ್ಲಿ ವಿದ್ಯುತ್ ಬಿಲ್ ಕಟ್ಟಲು ಅವಕಾಶ ನೀಡಲಾಗಿದೆ' ಎಂದರು.

ADVERTISEMENT

'ಮೊದಲ ಸ್ಲ್ಯಾಬ್‍ನಲ್ಲಿ ಪ್ರತಿ 30 ಯುನಿಟ್‍ವರೆಗೆ ಕನಿಷ್ಠ ದರ ಹಾಕಲಾಗುತ್ತದೆ. ಈ ಬಾರಿ ಎರಡೂ ತಿಂಗಳ ಬಿಲ್ ಸೇರಿರುವ ಕಾರಣ 60 ಯುನಿಟ್‍ಗೆ ಇದನ್ನು ನಿಗದಿ ಮಾಡಲಾಗಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಡೋರ್ ಲಾಕ್, ಸೀಲ್‍ಡೌನ್ ಹಾಗೂ ಕ್ವಾರಂಟೈನ್ ಪ್ರದೇಶಗಳಲ್ಲಿ ಸರಾಸರಿ ಬಿಲ್ ನೀಡಲಾಗಿದೆ. ಇದರಲ್ಲಿ ವ್ಯತ್ಯಾಸಗಳು ಕಂಡುಬಂದರೆ ಸಹಾಯವಾಣಿ ಸಂಖ್ಯೆ 1912ಕ್ಕೆ ಕರೆ ಮಾಡಿ ಪರಿಷ್ಕೃತ ಬಿಲ್ ಪಡೆದುಕೊಳ್ಳಬಹುದು' ಎಂದು ಮಹೇಂದ್ರ ಜೈನ್ ತಿಳಿಸಿದರು.

'ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‍ಎಂಇ) ಏಪ್ರಿಲ್ ಮತ್ತು ಮೇ ತಿಂಗಳ ವಿದ್ಯುತ್ ಬಿಲ್ ಮೇಲಿನ ನಿಗದಿತ ಶುಲ್ಕ ಮನ್ನಾ ಮಾಡಲಾಗಿದ್ದು, ಮಾರ್ಚ್ ತಿಂಗಳಲ್ಲಿ ಬಳಕೆಯಾದ ವಿದ್ಯುತ್ ಬಿಲ್ ಮೊತ್ತ ಹಾಗೂ ನಿಗದಿತ ಶುಲ್ಕ ಪಾವತಿಸಬೇಕು. ಬೇರೆ ಕೈಗಾರಿಕೆಗಳಿಗೆ ಜೂನ್‍ವರೆಗೆ ನಿಗದಿತ ಶುಲ್ಕ ಪಾವತಿ ಮುಂದೂಡಲಾಗಿದೆ‘ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.