ADVERTISEMENT

ಚಿಂದಿ ಆಯುವ ಯುವಕ ಸಾವು: ಬೆಸ್ಕಾಂ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 16:58 IST
Last Updated 22 ಜುಲೈ 2022, 16:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜಕಾಲುವೆಯಲ್ಲಿ ತುಂಡರಿಸಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ಅಪ್ಪು (25) ಎಂಬುವರು ಮೃತಪಟ್ಟಿದ್ದು, ನಿರ್ಲಕ್ಷ್ಯ ಆರೋಪದಡಿ ಬೆಸ್ಕಾಂ ವಿರುದ್ಧ ಹಲಸೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಸ್ಥಳೀಯ ನಿವಾಸಿ ಅಪ್ಪು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ನಿತ್ಯವೂ ಬೆಳಿಗ್ಗೆ ನಗರದೆಲ್ಲೆಡೆ ಸಂಚರಿಸಿ ಚಿಂದಿ ಆಯ್ದು ಮಾರುತ್ತಿದ್ದರು. ಬಂದ ಹಣದಲ್ಲೇ ಜೀವನ ಸಾಗಿಸುತ್ತಿದ್ದರು. ಇವರ ಸಾವಿನ ಬಗ್ಗೆ ಸ್ಥಳೀಯರೊಬ್ಬರು ದೂರು ನೀಡಿದ್ದಾರೆ. ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಜಕಾಲುವೆ ಬಳಿಯೇ ವಿದ್ಯುತ್ ತಂತಿ ಹಾದು ಹೋಗಿದೆ. ಇದೇ ವಿದ್ಯುತ್ ತಂತಿ ತುಂಡರಿಸಿ ರಾಜಕಾಲುವೆಗೆ ಬಿದ್ದಿತ್ತು. ರಾಜಕಾಲುವೆ ಬಳಿ ಶುಕ್ರವಾರ ಬೆಳಿಗ್ಗೆ ಹೋಗಿದ್ದ ಅಪ್ಪು, ನೀರಿನಲ್ಲಿದ್ದ ಕಬ್ಬಿಣದ ರಾಡ್ ಹಾಗೂ ಇತರೆ ವಸ್ತುಗಳನ್ನು ಆಯ್ದುಕೊಳ್ಳಲು ಮುಂದಾಗಿದ್ದರು. ಇದೇ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ತಿಳಿಸಿವೆ.

ADVERTISEMENT

‘ಕೊಳೆಗೇರಿ ಪ್ರದೇಶಕ್ಕೆ ಹೊಂದಿಕೊಂಡು ರಾಜಕಾಲುವೆ ಇದ್ದು, ಇಲ್ಲಿಯ ವಿದ್ಯುತ್ ತಂತಿಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ಶುಕ್ರವಾರ ಸಹ ವಿದ್ಯುತ್ ತಂತಿ ತುಂಡರಿಸಿದ್ದರಿಂದಲೇ ಅಪ್ಪು ಮೃತಪಟ್ಟಿದ್ದಾರೆ. ಇವರ ಸಾವಿಗೆ ಬೆಸ್ಕಾಂ ನಿರ್ಲಕ್ಷ್ಯವೇ ಕಾರಣವೆಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಬೆಸ್ಕಾಂ ಅಧಿಕಾರಿಗಳಿಗೆ ನೋಟಿಸ್ ನೀಡಿ, ವಿಚಾರಣೆ ನಡೆಸಬೇಕಿದೆ’ ಎಂದು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.