ಬೆಂಗಳೂರು: ಹೊಸ ವಿದ್ಯುತ್ ಸಂಪರ್ಕಗಳು ಹಾಗೂ ತಾತ್ಕಾಲಿಕ ಸಂಪರ್ಕಕ್ಕಾಗಿ ಅಳವಡಿಸುತ್ತಿರುವ ಸ್ಮಾರ್ಟ್ ಮೀಟರ್‌ಗಳನ್ನು ಸಂಪೂರ್ಣವಾಗಿ ತಂತ್ರಾಂಶದೊಂದಿಗೆ (ಸಾಫ್ಟ್‌ವೇರ್) ಸಮರ್ಪಕವಾಗಿ ಸಂಯೋಜಿಸದ ಕಾರಣ, ಅವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಗ್ರಾಹಕರು ದೂರುತ್ತಿದ್ದಾರೆ.
ಸ್ಮಾರ್ಟ್ ಮೀಟರ್‌ಗಳನ್ನು ತಂತ್ರಾಂಶಕ್ಕೆ ಸರಿಯಾಗಿ ಜೋಡಣೆ ಮಾಡದಿದ್ದರೆ, ಆ ಮೀಟರ್‌ಗಳು ಸಾಮಾನ್ಯ ಡಿಜಿಟಲ್ ಮೀಟರ್‌ನಂತೆ ಕಾರ್ಯನಿರ್ವಹಿಸುತ್ತವೆ. ಸ್ಮಾರ್ಟ್ ಮೀಟರ್‌ಗೆ ಅಗತ್ಯವಾಗಿ ಬೇಕಾಗಿರುವ ತಂತ್ರಾಂಶವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸದೇ, ಹೊಸ ವಿದ್ಯುತ್ ಸಂಪರ್ಕಗಳಿಗೆ ಅಳವಡಿಸಲಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವರು(ಕೆಎಸ್‌ಎಲ್‌ಇಸಿಇ) ಆರೋಪಿಸಿದ್ದಾರೆ.
‘ದುಬಾರಿ ಹಣದಲ್ಲಿ ಟಿ.ವಿ ಖರೀದಿಸಿ, ಅದರಲ್ಲಿ ಏನೂ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂಬಂತಾಗಿದೆ, ದುಬಾರಿ ಹಣ ತೆತ್ತು ಸ್ಮಾರ್ಟ್ ಮೀಟರ್ ಖರೀದಿಸಿರುವ ಗ್ರಾಹಕರ ಪರಿಸ್ಥಿತಿ’ ಎಂದು ಕೆಎಸ್‌ಎಲ್‌ಇಸಿಎ ಅಧ್ಯಕ್ಷ ಸಿ.ರಮೇಶ್ ಹೇಳಿದರು.
‘ಸ್ಮಾರ್ಟ್ ಮೀಟರ್ ಅಳವಡಿಕೆ ಕಡ್ಡಾಯಗೊಳಿಸುವ ಮುನ್ನ ಬೆಸ್ಕಾಂ, ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು’ ಎಂದು ಸ್ಮಾರ್ಟ್ ಮೀಟರ್ ಅಳವಡಿಕೆಯ ಒತ್ತಡ ಎದುರಿಸಿದ ಹಲವು ಗ್ರಾಹಕರು ಅಭಿಪ್ರಾಯಪಟ್ಟಿದ್ದಾರೆ.
‘ಸ್ಮಾರ್ಟ್ ಮೀಟರ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಿಂದ ವಿದ್ಯುತ್ ಬಳಕೆ ಮಾಪನ ಮತ್ತು ಇತರೆ ವಿವರಗಳನ್ನು ಟ್ರ್ಯಾಕ್ ಮಾಡಬಹುದು ಎಂದು ಹೇಳಲಾಗಿತ್ತು. ಆದರೆ, ಈ ಸ್ಮಾರ್ಟ್ ಮೀಟರ್‌ಗಳು ಸಾಮಾನ್ಯ ಡಿಜಿಟಲ್ ಮೀಟರ್‌ನಂತೆ ಕಾರ್ಯನಿರ್ವಹಿಸುತ್ತಿವೆ. ಹಾಗಿದ್ದಲ್ಲಿ ನಾವು ಏಕೆ ಹೆಚ್ಚು ಹಣ ಪಾವತಿಸಬೇಕು’ ಎಂದು ಜೆ.ಪಿ ನಗರದ ನಿವಾಸಿಯೊಬ್ಬರು ಪ್ರಶ್ನಿಸಿದರು.
‘ಗ್ರಾಹಕರಿಗೆ ನೀಡಿರುವ ಮೀಟರ್‌ಗಳಿಗೆ ತಂತ್ರಾಂಶವನ್ನು ಸಂಯೋಜಿಸಬೇಕಿದೆ ಹಾಗೂ ಬಳಕೆದಾರ ಇಂಟರ್‌ಫೇಸ್ ಅನ್ನು ಒದಗಿಸಿಲ್ಲ’ ಎಂಬುದನ್ನು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶಂಕರ್ ಒಪ್ಪಿಕೊಂಡರು.
‘ಈಗಾಗಲೇ ಸಂವಹನ ವ್ಯವಸ್ಥೆ ಸಿದ್ಧವಾಗಿದ್ದು, ರಿಮೋಟ್ ಮೂಲಕ ವಿದ್ಯುತ್ ಬಳಕೆಯನ್ನು ಟ್ರ್ಯಾಕ್ ಮಾಡಲು ಸಮರ್ಥರಾಗಿದ್ದೇವೆ. ಈ ಸೌಲಭ್ಯವನ್ನು ಗ್ರಾಹಕರಿಗೆ ತಲುಪಿಸುವುದು ಬಾಕಿ ಇದೆ. ಈ ಪ್ರಕ್ರಿಯೆ ಹಂತ ಹಂತವಾಗಿ ನಡೆಯಲಿದೆ’ ಎಂದು ಅವರು ತಿಳಿಸಿದರು.
‘ಆದರೆ, ಬೆಸ್ಕಾಂನವರು ರಿಮೋಟ್ ಮೂಲಕ ಮೀಟರ್ ರೀಡಿಂಗ್ ಮಾಡಲು ಇನ್ನೂ ಪೂರ್ಣಪ್ರಮಾಣದಲ್ಲಿ ಸಿದ್ಧರಾಗಿಲ್ಲ’ ಎಂದು ವಿದ್ಯುತ್ ಗುತ್ತಿಗೆದಾರರು ಬಲವಾಗಿ ವಾದಿಸುತ್ತಾರೆ.
‘ಬೆಸ್ಕಾಂನವರು ರಿಮೋಟ್ ಮೂಲಕ ಮೀಟರ್ ರೀಡಿಂಗ್ ಮಾಡಲು ಸಮರ್ಥರಿದ್ದರೆ, ಮೀಟರ್ ರೀಡರ್‌ಗಳು ಏಕೆ ಸ್ಮಾರ್ಟ್ ಮೀಟರ್ ಅಳವಡಿಸಿರುವ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಸ್ಮಾರ್ಟ್ ಮೀಟರ್‌ಗೆ ಸಂಬಂಧಿಸಿದ ಎಲ್ಲ ಕೆಲಸಗಳು ಪೂರ್ಣಗೊಂಡಿರುವ ವಿಶ್ವಾಸವಿದ್ದರೆ, ಅದನ್ನು ಸಾಬೀತುಪಡಿಸಲಿ. ನಾವು ಸ್ಮಾರ್ಟ್‌ಮೀಟರ್ ಇರುವ ಗ್ರಾಹಕರ ಆರ್.ಆರ್ ನಂಬರ್ ಒದಗಿಸುತ್ತೇವೆ. ಅವರು ಆ ಮೀಟರ್‌ನ ರೀಡಿಂಗ್ ತೋರಿಸಲಿ’ ಎಂದು ರಮೇಶ್ ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.