ADVERTISEMENT

ಸೌರ ಚಾವಣಿ: ರಾಜ್ಯಕ್ಕೆ ಅಗ್ರಸ್ಥಾನ

ಮನೆಗಳ ಮೇಲೆ ಸೌರವಿದ್ಯುತ್‌ ಘಟಕ ನಿರ್ಮಾಣಕ್ಕೆ ಬೆಸ್ಕಾಂನ ವಿನೂತನ ಕ್ರಮ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 20:37 IST
Last Updated 22 ಆಗಸ್ಟ್ 2019, 20:37 IST
ಸಿ. ಶಿಖಾ
ಸಿ. ಶಿಖಾ   

ಬೆಂಗಳೂರು:ಮನೆಯ ಮೇಲೆ ಸೌರವಿದ್ಯುತ್‌ ಘಟಕ ಸ್ಥಾಪಿಸಲು ಗ್ರಾಹಕರನ್ನು ಆಕರ್ಷಿಸುವಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ.

ಕೇಂದ್ರ ಸರ್ಕಾರದ ಇಂಧನ ಇಲಾಖೆ ಬಿಡುಗಡೆ ಮಾಡಿರುವ ರಾಜ್ಯ ಸೌರ ಚಾವಣಿ ಆಕರ್ಷಣೆ ಸೂಚ್ಯಂಕ ‘ಸರಳ್‌’ನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ ದೊರೆತಿದೆ. ತೆಲಂಗಾಣ, ಗುಜರಾತ್‌ ಮತ್ತು ಆಂಧ್ರಪ್ರದೇಶ ನಂತರದ ಸ್ಥಾನದಲ್ಲಿವೆ. ಕೇಂದ್ರ ಇಂಧನ ಸಚಿವ ಆರ್.ಕೆ. ಸಿಂಗ್‌ ಬುಧವಾರ ಈ ಸೂಚ್ಯಂಕವನ್ನು ಪ್ರಕಟಿಸಿದ್ದಾರೆ.

ಮನೆಯ ಮೇಲೆ ಸೌರ ಚಾವಣಿ (ಸೋಲಾರ್‌ ರೂಫ್‌ಟಾಪ್‌) ಅಳವಡಿಸಿಕೊಳ್ಳಲು ಮತ್ತು 2022ರ ವೇಳೆಗೆ 2400 ಮೆಗಾವಾಟ್‌ನಷ್ಟು ಸೌರ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಸಾಧಿಸಲು ಬೆಸ್ಕಾಂ ಹಲವು ಕ್ರಮಗಳನ್ನು ಕೈಗೊಂಡಿತ್ತು.

ADVERTISEMENT

‘ಸೌರ ಚಾವಣಿ ಅಳವಡಿಕೆಗೆ ಅರ್ಜಿ ಸಲ್ಲಿಸಲು ಸರಳವಾದ ಆನ್‌ಲೈನ್‌ ತಂತ್ರಾಂಶ, ಅರ್ಜಿಗಳ ತ್ವರಿತ ವಿಲೇವಾರಿಗೆ ಸರಳೀಕೃತ ಮಾರ್ಗಸೂಚಿ ಮತ್ತು ಕಾಲಾವಧಿ, ಚಾವಣಿ ಮಾಲೀಕರಿಂದ ಸೌರ ಘಟಕದ ಸಾಮರ್ಥ್ಯವನ್ನು ಹಾಗೂ ಹೂಡಿಕೆಯ ವ್ಯವಹಾರನ್ನು ತಿಳಿಯಲು ನೂತನ ತಂತ್ರಜ್ಞಾನದ ಅಳವಡಿಕೆ, ಇದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರವಾಣಿ ಮತ್ತು ಇ–ಮೇಲ್‌ ಮೂಲಕ ಪರಿಹರಿಸಲು ನಿಗಮ ಕಚೇರಿಯಲ್ಲಿ ಸಹಾಯವಾಣಿ ಸ್ಥಾಪಿಸಲಾಗಿತ್ತು’ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸಿ. ಶಿಖಾ ತಿಳಿಸಿದರು.

‘₹1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಬಿಲ್ಲಿಂಗ್‌ ಪಾವತಿ ನಿರ್ವಹಿಸಲು ನಿಗಮ ಕಚೇರಿಯಲ್ಲಿ ಬಿಲ್ಲಿಂಗ್‌ ಕೇಂದ್ರ ಮಾಡಲಾಗಿದೆ. ಅಲ್ಲದೆ, ಗ್ರಾಹಕ ಸಂವಹನ ಸಭೆಗಳನ್ನು ನಿಯಮಿತವಾಗಿ ಉಪವಿಭಾಗ ಮಟ್ಟದಲ್ಲಿ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

2020ರ ವೇಳೆಗೆ, 100 ಮೆಗಾವಾಟ್‌ ಗೃಹೋಪಯೋಗಿ ಸೌರ ಚಾವಣಿ ಗುರಿ ಸಾಧಿಸಲು ಬೆಸ್ಕಾಂ ಸಜ್ಜಾಗು
ತ್ತಿದೆ. ಸ್ಥಳೀಯ ಗ್ರಾಹಕರನ್ನು ಉತ್ತೇಜಿಸಲು ಕೇಂದ್ರ ಆರ್ಥಿಕ ಸಹಾಯಧನ (ಸಿಎಫ್‌ಎ) ನೀಡಬೇಕು ಎಂದು ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಕ್ಕೆ (ಎಂಎನ್‌ಆರ್‌ಇ) ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.

*

ಬೆಸ್ಕಾಂ ವ್ಯಾಪ್ತಿಯಲ್ಲಿ ಈವರೆಗೆ 125 ಮೆಗಾವಾಟ್‌ ಸಾಮರ್ಥ್ಯ ಹೊಂದಿರುವ 1800 ಸೌರಚಾವಣಿ ಘಟಕಗಳನ್ನು ಬೆಸ್ಕಾಂನ ಗ್ರಿಡ್‌ಗೆ ಸಂಪರ್ಕಗೊಳಿಸಲಾಗಿದೆ.
–ಸಿ.ಶಿಖಾ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.