ADVERTISEMENT

ಗ್ರಾಹಕರಿಗೆ ಖುಷಿ; ಕೈಗಾರಿಕೆಗಳಿಗೆ ಕಹಿ !

ಇದೇ ಮೊದಲ ಬಾರಿ ಗೃಹ ಬಳಕೆ ವಿದ್ಯುತ್‌ ದರ ಇಳಿಕೆಗೆ ಬೆಸ್ಕಾಂ ಪ್ರಸ್ತಾವ * ವಾಣಿಜ್ಯ ಬಳಕೆ ದರ ಹೆಚ್ಚಳಕ್ಕೆ ಅರ್ಜಿ

ಗುರು ಪಿ.ಎಸ್‌
Published 31 ಡಿಸೆಂಬರ್ 2020, 19:48 IST
Last Updated 31 ಡಿಸೆಂಬರ್ 2020, 19:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಿದ್ಯುತ್‌ ಸರಬರಾಜಿಗಾಗಿ ದರ ನಿಗದಿ ಪಡಿಸಲು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಅರ್ಜಿ ಸಲ್ಲಿಸಿರುವ ಬೆಸ್ಕಾಂ, ಗೃಹ ಬಳಕೆಯ ಉದ್ದೇಶಕ್ಕೆ ಬಳಸುವ ವಿದ್ಯುತ್‌ಗೆ ಸಂಬಂಧಿಸಿದಂತೆ ಪ್ರಸ್ತುತ ದರಕ್ಕಿಂತ ಪ್ರಸ್ತಾಪಿತ ದರವನ್ನು ಕಡಿಮೆ ನಿಗದಿ ಮಾಡಿದೆ. ಕೆಇಆರ್‌ಸಿ ಸ್ಥಾಪನೆಯಾದಾಗಿನಿಂದ ಅಂದರೆ, 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಸ್ತುತ ದರಕ್ಕಿಂತ ಪ್ರಸ್ತಾಪಿತ ದರ ಕಡಿಮೆ ನಿಗದಿ ಮಾಡಿ ಪ್ರಸ್ತಾವ ಸಲ್ಲಿಸಿದೆ.

‘ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿ ಗೃಹಬಳಕೆ ವಿದ್ಯುತ್‌ ದರ ಕಡಿಮೆ ಮಾಡುವಂತೆ ಪ್ರಸ್ತಾವ ಸಲ್ಲಿಸಿರುವುದು ಖುಷಿಯ ವಿಚಾರ. ಇದನ್ನು ನಂಬಲಿಕ್ಕೂ ಆಗುತ್ತಿಲ್ಲ. ಪ್ರತಿ ಬಾರಿ ವಿದ್ಯುತ್‌ ದರ ಏರಿಕೆ ಮಾಡಿ ಅಥವಾ ಅದೇ ದರವನ್ನು ಮುಂದುವರಿಸುವಂತೆ ಬೆಸ್ಕಾಂ ಪ್ರಸ್ತಾವ ಸಲ್ಲಿಸುತ್ತಿತ್ತು. ಹೊಸ ದರಕ್ಕೆ ಕೆಇಆರ್‌ಸಿ ಒಪ್ಪಿಗೆ ಸೂಚಿಸಿದರೆ ವಿದ್ಯುತ್‌ ಬಳಕೆದಾರರಿಗೆ ಸಾಕಷ್ಟು ಅನುಕೂಲವಾಗುತ್ತದೆ’ ಎಂದು ಗ್ರಾಹಕ ರಮೇಶ್‌ ಗೌಳಿ ಹೇಳಿದರು.

‘ಗ್ರಾಹಕರಿಗೂ ಹೊರೆಯಾಗಬಾರದು, ವಿದ್ಯುತ್‌ ಬಳಕೆಗೂ ಕಡಿವಾಣ ಇರಬೇಕು ಎಂಬ ಉದ್ದೇಶದಿಂದ ಈ ರೀತಿಯ ಪ್ರಸ್ತಾವ ಸಲ್ಲಿಸಲಾಗಿದೆ. ಇದೇ ಮೊದಲ ಬಾರಿಗೆ ಗೃಹಬಳಕೆ ಉದ್ದೇಶದ ವಿದ್ಯುತ್‌ ದರ ಕಡಿಮೆ ಮಾಡುವಂತೆ ಅರ್ಜಿ ಸಲ್ಲಿಸಿದ್ದೇವೆ. ರಾಜ್ಯದಲ್ಲಿ ಬೇಡಿಕೆಗಿಂತ ಹೆಚ್ಚು ವಿದ್ಯುತ್‌ ಉತ್ಪಾದನೆಯಾಗುತ್ತಿದೆ. ಹೊರ ರಾಜ್ಯಗಳಿಗೆ ಮಾರಾಟ ಮಾಡುವ ಬದಲು, ರಾಜ್ಯದ ಗ್ರಾಹಕರೇ ಹೆಚ್ಚು ಬಳಸಿಕೊಳ್ಳಲಿ ಎಂಬ ಉದ್ದೇಶವೂ ಇದರ ಹಿಂದಿದೆ’ ಎಂದು ಬೆಸ್ಕಾಂನ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ನಿಗದಿತ ಶುಲ್ಕವನ್ನು (ಎಫ್‌ಸಿ) ಮೊದಲ ಒಂದು ಕಿಲೊ ವಾಟ್‌ಗೆ ₹70 ಇದ್ದುದನ್ನು, ₹115ಕ್ಕೆ ಏರಿಸುವ ಪ್ರಸ್ತಾವ ಸಲ್ಲಿಸಿದ್ದೇವೆ. ನೆರೆಯ ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಒಂದು ಕಿ.ವಾಟ್‌ಗೆ ₹100ರಿಂದ ₹120ಯಷ್ಟು ಕಡಿಮೆ ದರ ನಮ್ಮಲ್ಲಿದೆ. ಯಾವುದೇ ಒಂದು ಮಾರ್ಗಕ್ಕೆ ವಿದ್ಯುತ್‌ ಪೂರೈಸಬೇಕಾದರೆ ಎಷ್ಟು ಖರ್ಚು ಬರುತ್ತದೆಯೋ , ಅದರ ಆಧಾರದ ಮೇಲೆಯೇ ಎಫ್‌ಸಿ ನಿಗದಿ ಮಾಡಲಾಗಿರುತ್ತದೆ’ ಎಂದರು.

‘ಅಡುಗೆ ಅನಿಲ ದರ ಹೆಚ್ಚಾಗಿದೆ. ಅಲ್ಲದೆ, ಭವಿಷ್ಯದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಬಳಕೆ ಹೆಚ್ಚಲಿದೆ. ಇದೆಲ್ಲ ಗಮನದಲ್ಲಿಟ್ಟುಕೊಂಡು ಗೃಹಬಳಕೆ ವಿದ್ಯುತ್ ದರ ಕಡಿಮೆ ಮಾಡುವ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದೂ ಅವರು ತಿಳಿಸಿದರು.

‘ಗೃಹಬಳಕೆಗೆ ಕಡಿಮೆ ಮಾಡಿದ ಮೇಲೆ, ವಾಣಿಜ್ಯ ಬಳಕೆಯ ಉದ್ದೇಶಕ್ಕೆ ವಿದ್ಯುತ್‌ ದರವನ್ನು ಸ್ವಲ್ಪ ಹೆಚ್ಚು ಮಾಡಿ ಸಮತೋಲನ ಮಾಡಿಕೊಳ್ಳಬೇಕು. ಅದರಂತೆಯೇ ದರ ನಿಗದಿ ಮಾಡಲಾಗಿದೆ’ ಎಂದು ವಿವರಿಸಿದರು.

ಕೈಗಾರಿಕೆಗಳಿಗೆ ಹೊಡೆತ: ‘67 ಅಶ್ವಶಕ್ತಿಗಿಂತ ಮೇಲ್ಪಟ್ಟ ಕೈಗಾರಿಕೆಗಳಿಗೆ ಪ್ರತಿ ಎಚ್‌ಪಿಗೆ ₹200 ಇದ್ದದ್ದು, ₹250ಕ್ಕೆ ಏರಿಸಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಈ ದರವನ್ನು ₹65ರಿಂದ ₹110ಕ್ಕೆ ಏರಿಸಲಾಗಿದೆ. ಕೋವಿಡ್‌ನಂತಹ ಸಂಕಷ್ಟದ ಸಂದರ್ಭದಲ್ಲಿ ಈ ದರ ಏರಿಸುವ ಅಗತ್ಯವಿರಲಿಲ್ಲ’ ಎಂದು ಕೆಇಆರ್‌ಸಿ ಸಲಹಾ ಸಮಿತಿಯ ಮಾಜಿ ಸದಸ್ಯ, ಉದ್ಯಮಿ ಎಂ.ಜಿ. ಪ್ರಭಾಕರ್ ಹೇಳಿದರು.

‘ರಾಜ್ಯದ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಇರುವುದು 30 ಸಾವಿರ ಮೆಗಾವಾಟ್. ಬೇಕಾಗಿರುವುದು 13 ಸಾವಿರ ಮೆಗಾವಾಟ್‌. ಬೇಡಿಕೆ ಇರುವುದಕ್ಕಿಂತ ಉತ್ಪಾದನೆ ಹೆಚ್ಚಿರುವಾಗ ದರ ಏರಿಸುವ ಅಗತ್ಯವೇನಿತ್ತು’ ಎಂದು ಅವರು ಪ್ರಶ್ನಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.