ಬೆಂಗಳೂರು: ಬಿ.ಜಿ.ಎಲ್. ಸ್ವಾಮಿ ಅವರ ಜನ್ಮಶತಾಬ್ದಿ ವರ್ಷದಲ್ಲಿ ಅವರ ಸಮಗ್ರ ಸಾಹಿತ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಪ್ರಕಟಿಸಲು ಪ್ರಯತ್ನಿಸಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಹೇಳಿದರು.
ಸ್ವಾಮಿ ಅವರ 24 ಲೇಖನಗಳ ಸಂಕಲನವಾದ ‘ಮೀನಾಕ್ಷಿಯ ಸೌಗಂಧ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ತಡವಾಗಿಯಾದರೂ ಸ್ವಾಮಿಯವರ ಜನ್ಮಶತಾಬ್ದಿ ಕಾರ್ಯಕ್ರಮ ನಡೆಯಬೇಕಾಗಿದೆ ಎಂದವರು ಅಭಿಪ್ರಾಯಪಟ್ಟರು.
‘ಸಸ್ಯವಿಜ್ಞಾನವನ್ನು ಬೋಧಿಸುತ್ತಿರುವ ವಿಶ್ವದ ಎಲ್ಲ ವಿಶ್ವವಿದ್ಯಾಲಯಗಳ ಪಠ್ಯಗಳಲ್ಲಿ ಬಿ.ಜಿ.ಎಲ್. ಸ್ವಾಮಿ ಅವರ ಹೆಸರಿರುವುದು ಸಸ್ಯಶಾಸ್ತ್ರಜ್ಞರಾಗಿ ಅವರ ಸಾಧನೆಗೆ ಉದಾಹರಣೆಯಾಗಿದೆ’ ಎಂದು ಕಥೆಗಾರ ಎಸ್. ದಿವಾಕರ್ ಹೇಳಿದರು.
ಚಿತ್ರಕಲೆ, ಸಂಗೀತ ಸೇರಿದಂತೆ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಸ್ವಂತಿಕೆಯನ್ನು ಸಾಧಿಸಿದ ಕೀರ್ತಿ ಸ್ವಾಮಿ ಅವರದು ಎಂದರು.
‘ವಿಜ್ಞಾನ ಸಾಹಿತ್ಯವನ್ನು ಸಾಹಿತ್ಯದ ಮಟ್ಟಿಗೆ ಏರಿಸಿದವರು ಬಿ.ಜಿ.ಎಲ್. ಸ್ವಾಮಿ ಹಾಗೂ ಕೃಷ್ಣಾನಂದ ಕಾಮತ್. ಇಬ್ಬರೂ ಕನ್ನಡ ಸಾಹಿತ್ಯಕ್ಕೆ ತಿರುವು ಕೊಟ್ಟವರು’ ಎಂದು ಕೃತಿಯ ಸಂಪಾದಕರಲ್ಲಿ ಒಬ್ಬರಾದ ಟಿ.ಆರ್. ಅನಂತರಾಮು ಹೇಳಿದರು. ಕೆ.ಎಸ್. ಮಧುಸೂದನ, ಜಿ.ಎನ್. ನರಸಿಂಹಮೂರ್ತಿ ಹಾಗೂ ಎಸ್.ಎಲ್. ಶ್ರೀನಿವಾಸಮೂರ್ತಿ ಕೃತಿಯ ಉಳಿದ ಸಂಪಾದಕರು.
ಬಿ.ಜಿ.ಎಲ್. ಸ್ವಾಮಿ ಅವರ ಕೃತಿಗಳ ವೈಶಿಷ್ಟ್ಯದ ಬಗ್ಗೆ ಪ್ರೊ. ಎಂ.ಎಚ್. ಕೃಷ್ಣಯ್ಯ ಹಾಗೂ ಎಂ.ಎಸ್. ಶ್ರೀರಾಮ್ ಮಾತನಾಡಿದರು. ವಸಂತ ಪ್ರಕಾಶನ ಪ್ರಕಟಿಸಿರುವ ಕೃತಿಯ ಬೆಲೆ ₹ 180.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.