ADVERTISEMENT

ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಕೋವಿಡ್ ಆರೈಕೆ ಕೇಂದ್ರ

​ಪ್ರಜಾವಾಣಿ ವಾರ್ತೆ
Published 17 ಮೇ 2021, 18:45 IST
Last Updated 17 ಮೇ 2021, 18:45 IST
ಕೋವಿಡ್ ಆರೈಕೆ ಕೇಂದ್ರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿರ್ಮಲಾನಂದನಾಥಸ್ವಾಮೀಜಿ ವಿವರಿಸಿದರು. ಸಚಿವ ಎಸ್.ಟಿ. ಸೋಮಶೇಖರ್ ಇದ್ದರು –ಪ್ರಜಾವಾಣಿ ಚಿತ್ರಗಳು
ಕೋವಿಡ್ ಆರೈಕೆ ಕೇಂದ್ರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನಿರ್ಮಲಾನಂದನಾಥಸ್ವಾಮೀಜಿ ವಿವರಿಸಿದರು. ಸಚಿವ ಎಸ್.ಟಿ. ಸೋಮಶೇಖರ್ ಇದ್ದರು –ಪ್ರಜಾವಾಣಿ ಚಿತ್ರಗಳು   

ಬೆಂಗಳೂರು: ಕೆಂಗೇರಿಯ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿನ ಬಿ.ಜಿ.ಎಸ್. ಗ್ಲೋಬಲ್ ಇನ್ಸ್‌ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮತ್ತು ಆಸ್ಪತ್ರೆಯಲ್ಲಿ 210 ಆಮ್ಲಜನಕ ಸಹಿತ ಹಾಸಿಗೆ ಸೌಲಭ್ಯದ ಕೋವಿಡ್ ಆರೈಕೆ ಕೇಂದ್ರ ಸೋಮವಾರದಿಂದ ಆರಂಭಗೊಂಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೋವಿಡ್ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದರು. ‘ಕ್ಲಿಷ್ಟಕರ ಸಂದರ್ಭದಲ್ಲಿ ಬಿಜಿಎಸ್‌ ಆಸ್ಪತ್ರೆಯ ಆಡಳಿತ ಮಂಡಳಿ ಜನರ ನೆರವರಿಗೆ ಬಂದಿರುವುದು ಶ್ಲಾಘನೀಯ. ಇದರ ಉಪಯೋಗವನ್ನು ನಗರದ ನಾಗರಿಕರು ಪಡೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ‘ಕೋವಿಡ್ ಸೋಂಕಿತರ ಆರೈಕೆಗೆ ಆಸ್ಪತ್ರೆಯ ಶೇ 75ರಷ್ಟು ಹಾಸಿಗೆ ಮೀಸಲಿಟ್ಟಿದ್ದೇವೆ. ಎಲ್ಲೆಡೆ ಆಮ್ಲಜನಕ ಕೊರತೆ ಇರುವ ಕಾರಣ, 13 ಕಿಲೋ ಲೀಟರ್ ಸಾಮರ್ಥ್ಯದ ಆಮ್ಲಜನಕ ಟ್ಯಾಂಕ್ ಅಳವಡಿಸಲಾಗಿದೆ. ಕೋವಿಡ್‌ ನಿಯಮ ಸರಿಯಾಗಿ ಪಾಲಿಸದ ಕಾರಣ ಸೋಂಕು ಹೆಚ್ಚಾಗಿದೆ. ಮುಂದಾದರೂ ಜನರು ಮಾಸ್ಕ್ ಧರಿಸುವ ಮತ್ತು ಅಂತರ ಕಾಪಾಡುವ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು.

ADVERTISEMENT

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ‘ಕೋವಿಡ್ ಆರೈಕೆ ಕೇಂದ್ರ ತೆರೆಯಬೇಕು ಎಂಬ ನಮ್ಮ ಮನವಿಗೆ ಸ್ವಾಮೀಜಿ ಸ್ಪಂದಿಸಿದ್ದಾರೆ. ಅವರಿಗೆ ನಾನು ಅಭಾರಿ’ ಎಂದರು.

ಯಶವಂತಪುರ ಕ್ಷೇತ್ರದಲ್ಲಿ ‌ಸುಸಜ್ಜಿತ ಹಾಗೂ ಶಾಶ್ವತ ಕೋವಿಡ್ ಆರೈಕೆ ಕೇಂದ್ರ ತೆರೆಯಲು ಪ್ರಯತ್ನ ನಡೆಯುತ್ತಿದೆ ಎಂದೂ ಅವರು ತಿಳಿಸಿದರು.

ಮೈಸೂರು ಹಸಿರು ಪ್ರತಿಷ್ಠಾನದಿಂದ ಮಠಕ್ಕೆ 2 ಸಾವಿರ ಸಸಿಗಳನ್ನು ಇದೇ ವೇಳೆ ನೀಡಲಾಯಿತು. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ರಾಜೀವ್ ಅವರು ಸಸಿಗಳನ್ನು ಮಠಕ್ಕೆ ಹಸ್ತಾಂತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.