ADVERTISEMENT

‘ರಾಜಕೀಯ: ಶೂದ್ರರೇ ನಿರ್ಣಾಯಕ’

ಬೆಂ.ವಿ.ವಿ: ಭೀಮಾ– ಕೋರೆಗಾಂವ್ 202ನೇ ವಿಜಯೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 2 ಜನವರಿ 2020, 23:32 IST
Last Updated 2 ಜನವರಿ 2020, 23:32 IST
ಕಾರ್ಯಕ್ರಮದಲ್ಲಿ ವಿಚಾರವಾದಿ ಡಾ.ಶಿವಕುಮಾರ್, ಕವಿ ಸಿದ್ಧಲಿಂಗಯ್ಯ, ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಸಚಿವರಾದ ಪ್ರೊ.ಬಿ.ಕೆ.ರವಿ ಹಾಗೂ ಸಿ.ಶಿವರಾಜ್ ಉಪಸ್ಥಿತರಿದ್ದರು
ಕಾರ್ಯಕ್ರಮದಲ್ಲಿ ವಿಚಾರವಾದಿ ಡಾ.ಶಿವಕುಮಾರ್, ಕವಿ ಸಿದ್ಧಲಿಂಗಯ್ಯ, ಪ್ರೊ.ಕೆ.ಆರ್.ವೇಣುಗೋಪಾಲ್, ಕುಲಸಚಿವರಾದ ಪ್ರೊ.ಬಿ.ಕೆ.ರವಿ ಹಾಗೂ ಸಿ.ಶಿವರಾಜ್ ಉಪಸ್ಥಿತರಿದ್ದರು   

ಕೆಂಗೇರಿ: ‘ಶೂದ್ರ ಸಮಾಜದ ಬೆಂಬಲವಿಲ್ಲದೆ ರಾಜಕೀಯವಾಗಿ ಯಾರೂ ಮೇಲುಗೈ ಸಾಧಿಸಲು ಆಗುವುದಿಲ್ಲ’ ಎಂದು ವಿಚಾರವಾದಿ ಡಾ.ಶಿವಕುಮಾರ್ ಅಭಿಪ್ರಾಯಪಟ್ಟರು.

ಬೆಂಗಳೂರು ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಿದ್ದ ಭೀಮಾ– ಕೋರೆಗಾಂವ್ 202ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜದ ವಿವಿಧ ಸ್ತರಗಳಲ್ಲಿ ಶೂದ್ರ ಸಮಾಜ ಅಮೂಲ್ಯ ಸೇವೆ ಸಲ್ಲಿಸುತ್ತಿದೆ. ಮೇಲ್ವರ್ಗದ ಜನರು ಈ ವರ್ಗವನ್ನು ಬಳಸಿಕೊಂಡು ರಾಜಕೀಯವಾಗಿ ಪಾರಮ್ಯ ಸಾಧಿಸುತ್ತಿದ್ದಾರೆ. ಆ ವರ್ಗವನ್ನು ಸೆಳೆಯದ ಹೊರತು ಯಾರೊಬ್ಬರೂ ರಾಜಕೀಯವಾಗಿ ಸುಭದ್ರರಾಗುವುದು ಕಷ್ಟಸಾಧ್ಯ. ಈ ಸತ್ಯವನ್ನು ಅಸ್ಪೃಶ್ಯ ಸಮಾಜ ಅರಿಯಬೇಕಿದೆ’ ಎಂದರು.

ADVERTISEMENT

‘ಅಸ್ಪೃಶ್ಯ ಸಮಾಜವು ನೀತಿ– ನಿಲುವುಗಳನ್ನು ಬದಲಿಸಿಕೊಳ್ಳುವ ಮೂಲಕ ಶೂದ್ರ ಸಮುದಾಯದ ಜತೆ ಸಮನ್ವಯ ಸಾಧಿಸಿದರೆ ರಾಜಕೀಯವಾಗಿಯೂ ಸೆಟೆದು ನಿಲ್ಲಬಹುದು’ ಎಂದು ಪ್ರೊ.ಶ್ರೀನಿವಾಸ್ ಹೇಳಿದರು.

ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಸಿ.ಶಿವರಾಜ್ ಮಾತನಾಡಿ, ‘ರಾಷ್ಟ್ರದ ಪ್ರಜಾಪ್ರಭುತ್ವ ಸಂಕಷ್ಟ ಸ್ಥಿತಿಯಲ್ಲಿದೆ. ಕೆಲ ಮೂಲಭೂತವಾದಿಗಳಿಂದ ಸಂವಿಧಾನಕ್ಕೆ ಸಂಚಕಾರ ಎದುರಾಗಿದ್ದು, ಅದನ್ನು ಸಮರ್ಥವಾಗಿ ಎದುರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಕರ್ತವ್ಯ ನಿರ್ವಹಣೆಯಲ್ಲಿ ನಾವು ವಿಫಲರಾದರೆ ಕೋರೆಗಾಂವ್ ವಿಜಯೋತ್ಸವದಂತಹ ಆಚರಣೆಗೆ ಯಾವುದೇ ಮಾನ್ಯತೆ ದೊರಕುವುದಿಲ್ಲ’ ಎಂದರು.

ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

‘ಆತಂಕಕಾರಿ ಬೆಳವಣಿಗೆ’
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್‌, ‘ವಿಶ್ವವಿದ್ಯಾಲಯಗಳಲ್ಲಿ ಕಲಿಕೆಗೆ ಮೊದಲ ಪ್ರಾಶಸ್ತ್ಯ ದೊರೆಯಬೇಕು. ಬದಲಾದ ಸನ್ನಿವೇಶದಲ್ಲಿ ವಿದ್ಯಾರ್ಜನೆಗಿಂತ ಹೋರಾಟಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಇದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅಂಬೇಡ್ಕರ್ ಚಿಂತನೆಗಳಿಗೆ ಪೂರಕವಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.