ಬೆಂಗಳೂರು: ಮೇಲು– ಕೀಳು ಎಂದು ಇಬ್ಭಾಗ ಮಾಡುವ ಚಾತುರ್ವರ್ಣವನ್ನು ವಿರೋಧಿಸಿದ್ದ ಅಂಬೇಡ್ಕರ್, ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಯನ್ನು ಪ್ರತಿಪಾದಿಸಿದ್ದರು. ಚಾತುರ್ವರ್ಣ ವ್ಯವಸ್ಥೆಯನ್ನು ಪೋಷಿಸುವ ಪಕ್ಷಗಳನ್ನು ಈ ಬಾರಿಯ ಚುನಾವಣೆಯಲ್ಲಿ ದೂರ ಇಡಬೇಕು ಎಂದು ನಿವೃತ್ತ ಪ್ರಾಧ್ಯಾಪಕ ಟಿ.ಆರ್. ಚಂದ್ರಶೇಖರ ತಿಳಿಸಿದರು.
ನಗರದ ಸ್ಫೂರ್ತಿಧಾಮದಲ್ಲಿ ಭಾನುವಾರ ನಡೆದ ‘ಅಂಬೇಡ್ಕರ್ ಹಬ್ಬ-ನನ್ನ ಮತ ನನ್ನ ಭವಿಷ್ಯʼ ವಿಚಾರ ಸಂಕಿರಣ, ‘ಬೋಧಿವೃಕ್ಷ’, ‘ಬೋಧಿವರ್ಧನ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತೆಗೆ ಅಪಾಯ ಎದುರಾಗಿದೆ. ಒಬ್ಬ ವ್ಯಕ್ತಿ ಒಂದು ಮತ, ಒಂದು ಮೌಲ್ಯ ಎಂಬ ಸೂತ್ರ ಅರ್ಥ ಕಳೆದುಕೊಳ್ಳುತ್ತಿದೆ. ಬಂಡವಾಳಶಾಹಿಗಳು, ಹಣದ ಬಲ, ತೋಳ್ಬಲ ಇರುವವರು, ಹಿಂದುತ್ವವಾದಿಗಳು, ಸರ್ವಾಧಿಕಾರಿಗಳು ಅಧಿಕಾರ ನಡೆಸುತ್ತಿದ್ದಾರೆ. ಅಂಬೇಡ್ಕರ್ ಮೌಲ್ಯಕ್ಕೆ ಮತ ಚಲಾಯಿಸಬೇಕೇ ಹೊರತು ಸಂವಿಧಾನ, ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವವರಿಗೆ ಅಲ್ಲ’ ಎಂದು ಪ್ರತಿಪಾದಿಸಿದರು.
‘ಸಂವಿಧಾನದ ಆಶಯದಲ್ಲಿ ದೇಶ ನಡೆಯಬೇಕೇ ಹೊರತು, ಮನುವಾದದ ಕಡೆಗೆ ದೇಶವನ್ನು ಒಯ್ಯಬಾರದು. ಹಾಗಾಗಿ ದೇವಾಲಯದ ಪ್ರವೇಶ ನಿರಾಕರಿಸಿದವರನ್ನು, ಫ್ಯಾಸಿಸ್ಟ್‌ಗಳನ್ನು, ಮನುವಾದಿಗಳನ್ನು, ಅಕ್ಷತೆ ಹಾಕಿಸಿದವರನ್ನು, ಇಟ್ಟಿಗೆ ಹೊರಿಸಿದವರನ್ನು, ಮೌಢ್ಯಕ್ಕೆ ದೂಡುವವರನ್ನು, ಅಭಿವೃದ್ಧಿಯ ಪರಿಭಾಷೆಯಲ್ಲಿ ಜನರನ್ನು ಸಂಕಷ್ಟಕ್ಕೆ ದೂಡುವವರನ್ನು ಆರಿಸಬಾರದು’ ಎಂದು ಸಲಹೆ ನೀಡಿದರು.
ಸ್ಫೂರ್ತಿಧಾಮ ಅಧ್ಯಕ್ಷ ಎಸ್. ಮರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಸಬಿಹಾ ಭೂಮಿಗೌಡ, ಚಿಂತಕ ಇಂದೂಧರ ಹೊನ್ನಾಪುರ ಪ್ರಶಸ್ತಿ ಪ್ರದಾನ ಮಾಡಿದರು.
‘ಬೋಧಿವೃಕ್ಷ’ ಪ್ರಶಸ್ತಿ: ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಎಸ್.ಆರ್. ಹಿರೇಮಠ ಅವರಿಗೆ ‘ಬೋಧಿವೃಕ್ಷ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯು ₹ 1 ಲಕ್ಷ ನಗದು ಬಹುಮಾನ ಹೊಂದಿದೆ.
‘ಬೋಧಿವರ್ಧನ’ ಪ್ರಶಸ್ತಿ: ದಲಿತ ಚಳವಳಿಯನ್ನು ಕಟ್ಟಿದ್ದ ಪತ್ರಕರ್ತ ರಾಮ್‌ದೇವ್ ರಾಖೆ, ಕರ್ನಾಟಕದ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವ ಸುಶೀಲ ನಾಡ, ಚಾರ್ಮಾಡಿ ಘಾಟ್‌ನಲ್ಲಿ ಅಪಘಾತ ಉಂಟಾದಾಗಲೆಲ್ಲ ಆಪತ್ಬಾಂಧವನಾಗಿ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸುತ್ತಿರುವ ಹಸನಬ್ಬ, ಋತುಮತಿಯಾದ ಮಕ್ಕಳನ್ನು ಮನೆಯಿಂದ ಹೊರಗೆ ಕೂರಿಸುವ ಅನಿಷ್ಟ ಪದ್ಧತಿಯ ವಿರುದ್ಧ ಹೋರಾಡುತ್ತಿರುವ ಜಿ.ಕೆ. ಪ್ರೇಮಾ ಅವರಿಗೆ ‘ಬೋಧಿವರ್ಧನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿ ತಲಾ ₹ 25 ಸಾವಿರ ನಗದು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.