ಬೆಂಗಳೂರು: ಭೂಮಿ, ಡಿಜಿಟಲ್ ಕೃಷಿ ವೇದಿಕೆ ನೀಡುವ 2025ನೇ ಸಾಲಿನ ‘ಭೂಮಿ ರೈತ ಪ್ರಶಸ್ತಿ’ಯನ್ನು 120ಕ್ಕೂ ಅಧಿಕ ರೈತರಿಗೆ ಫೆ.28ರಂದು (ಶನಿವಾರ) ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುತ್ತದೆ.
‘ಇದೇ ಸಮಾರಂಭದಲ್ಲಿ ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಇರುವ ಅವಕಾಶಗಳ ಕುರಿತು ಮಾಹಿತಿ ನೀಡಲು ರೈತ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪಿಎಂಎಫ್ಎಂಇ ಯೋಜನೆಯ ವಿವರಗಳನ್ನು ಕೃಷಿಕರಿಗೆ ನೀಡಲಾಗುತ್ತದೆ’ ಎಂದು ವೇದಿಕೆಯ ಮಾಧ್ಯಮ ಸಲಹೆಗಾರ ಹನುಮೇಶ್ ಕೆ. ಯಾವಗಲ್ ತಿಳಿಸಿದ್ದಾರೆ.
‘ನಗರ ಪ್ರದೇಶದ ಜನರು ಗ್ರಾಮೀಣ ಭಾಗದ ರೈತರಿಗೆ ನೈತಿಕ ಸ್ಥೈರ್ಯ ತುಂಬುವ ಹಾಗೂ ಅನ್ನದಾತನ ಜೊತೆಗೆ ಸದಾ ನಿಲ್ಲುವ ಉದ್ದೇಶದಿಂದ ಐ ಸಪೋರ್ಟ್ ಫಾರ್ಮರ್ ಎಂಬ ವಿಶಿಷ್ಟ ಯೋಜನೆಯನ್ನು ಭೂಮಿ, ಕೃಷಿ ಡಿಜಿಟಲ್ ವೇದಿಕೆ ವತಿಯಿಂದ ಆರಂಭಿಸಲಾಗುತ್ತಿದೆ’ ಎಂದು ವಿವರಿಸಿದ್ದಾರೆ.
‘ಅನ್ನದಾತನೇ ಸೆಲೆಬ್ರಿಟಿ’ ಎಂದು ಸಮಾಜಕ್ಕೆ ಸಾರಿ ಹೇಳುವ ಮೂಲಕ ಯುವ ಜನಾಂಗಕ್ಕೆ ಕೃಷಿ ಕ್ಷೇತ್ರದ ಮಹತ್ವ ತಿಳಿಸುವ ಪ್ರಯತ್ನ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಕೃಷಿ ಇಲಾಖೆಯ ನಿರ್ದೇಶಕ ಜಿ.ಟಿ. ಪುತ್ರ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ (ಕೆಪೆಕ್) ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ಅವರು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.