ADVERTISEMENT

ಎ.ರವಿ ನೇಮಕ: ವಿಚಾರಣೆಯಲ್ಲಿ ಆರ್.ಅಶೋಕ, ವಿಶ್ವನಾಥ್‌ ಒಳಗೊಳ್ಳಲು ಅನುಮತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2021, 0:07 IST
Last Updated 5 ಜೂನ್ 2021, 0:07 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ (ಬಿಐಎಎಪಿಎ) ಅಧ್ಯಕ್ಷ ಎ.ರವಿ ನೇಮಕ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕಂದಾಯ ಸಚಿವ ಆರ್. ಅಶೋಕ ಮತ್ತು ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಅವರನ್ನು ಪ್ರತಿವಾದಿಗಳಾಗಿ ಒಳಗೊಳ್ಳಲು ಹೈಕೋರ್ಟ್ ಅನುಮತಿ ನೀಡಿದೆ.

ನೇಮಕ ಸಂಬಂಧ ಕಡತ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ರವಿ ನೇಮಕ ಕೋರಿ ಮುಖ್ಯಮಂತ್ರಿಗೆ ಈ ಇಬ್ಬರು ಶಿಫಾರಸು ಪತ್ರ ಬರೆದಿರುವುದನ್ನು ಗಮನಿಸಿತು.

ರವಿ ಅವರು 2008, 2013 ಮತ್ತು 2018ರಲ್ಲಿ ಬ್ಯಾಟರಾಯನಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 2019ರ ಡಿಸೆಂಬರ್ 9ರಂದು ಎಸ್.ಆರ್. ವಿಶ್ವನಾಥ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆರ್. ಅಶೋಕ ಅವರು 2019ರ ಡಿ.30ರಂದು ಶಿಫಾರಸು ಪತ್ರ ಕಳುಹಿಸಿದ್ದಾರೆ. ವಿಶ್ವನಾಥ್ ಅವರು ಪತ್ರದಲ್ಲಿ ರವಿ ಅವರ ಹೆಸರು ಮಾತ್ರವಲ್ಲದೇ, ಪ್ರಾಧಿಕಾರಕ್ಕೆ ಇತರ ಮೂವರು ಸದಸ್ಯರ ಹೆಸರನ್ನೂ ಸೂಚಿಸಿದ್ದಾರೆ. ರವಿ ಅವರು ಬಿಜೆಪಿಗೆ ಸಲ್ಲಿಸಿದ ಸೇವೆ ಪರಿಗಣಿಸಿ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆರ್. ಅಶೋಕ್ ಅವರು ಪತ್ರದಲ್ಲಿ ವಿನಂತಿಸಿದ್ದಾರೆ

ADVERTISEMENT

‘ಯಾವುದೇ ಪ್ರಕ್ರಿಯೆಗಳನ್ನು ನಡೆಸದೆ ಈ ಪತ್ರಗಳನ್ನಷ್ಟೇ ಆಧರಿಸಿ ರವಿ ಅವರ ಹೆಸರನ್ನು ಮುಖ್ಯಮಂತ್ರಿ ಅನುಮೋದಿಸಿದ್ದಾರೆ. 2020ರ ಜ.27ರಂದು ನೇಮಿಸಲಾಗಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆಗಳ ಕಾಯ್ದೆ 4ಎ ಪ್ರಕಾರ, ಈ ಪ್ರಾಧಿಕಾರ ರಚಿಸಲಾಗಿದೆ. ಈ ಹುದ್ದೆ ನಿರ್ವಹಿಸಲು 1965 ರ ಕರ್ನಾಟಕ ಯೋಜನಾ ಪ್ರಾಧಿಕಾರದ ನಿಯಮ 5ರ ಪ್ರಕಾರ ಇರಬೇಕಾದ ಯಾವುದೇ ಅರ್ಹತೆಗಳು ರವಿ ಅವರಿಗೆ ಇಲ್ಲ. ಇವರು ಆರ್. ಅಶೋಕ ಅವರ ಹತ್ತಿರದ ಸಂಬಂಧಿ. ರಾಜಕೀಯ ಕಾರಣಕಷ್ಟೇ ಅವರನ್ನು ನೇಮಿಸಲಾಗಿದೆ’ ಎಂದು ಅರ್ಜಿದಾರ ಟಿ.ನರಸಿಂಹಮೂರ್ತಿ ಆರೋಪಿಸಿದ್ದಾರೆ.

ನೇಮಕಗೊಂಡ ವ್ಯಕ್ತಿಗಿಂತ, ನೇಮಕ ಮಾಡಲು ರಾಜ್ಯ ಸರ್ಕಾರ ಅನುಸರಿಸಿದ ಪ್ರಕ್ರಿಯೆ ಪ್ರಶ್ನಾರ್ಹವಾಗಿದೆ ಎಂದು ಪೀಠ ಮೌಖಿಕವಾಗಿ ಹೇಳಿತು. ಮುಖ್ಯಮಂತ್ರಿಗೆ ಶಿಫಾರಸು ಪತ್ರಗಳನ್ನು ಏಕೆ ಕಳುಹಿಸಿದ್ದಾರೆ ಎಂಬುದನ್ನು ಶಾಸಕರು ವಿವರಿಸಬೇಕಾಗಬಹುದು. ಅರ್ಜಿಯನ್ನು ತಿದ್ದುಪಡಿ ಮಾಡಿ ಸಲ್ಲಿಸುವಂತೆ ಅರ್ಜಿದಾರರಿಗೆ ಪೀಠ ನಿರ್ದೇಶನ ನೀಡಿತು. ಜು.13ಕ್ಕೆ ವಿಚಾರಣೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.