ADVERTISEMENT

ವಿಮಾನ ನಿಲ್ದಾಣಕ್ಕೆ ಕ್ಷಿಪ್ರ ಸಾರಿಗೆ: ನಡೆಯಲಿದೆ ಅಧ್ಯಯನ

ಬಿಐಎಎಲ್‌-ವರ್ಜಿನ್‌ ಹೈಪರ್‌ಲೂಪ್‌ ಮಧ್ಯೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 20:57 IST
Last Updated 27 ಸೆಪ್ಟೆಂಬರ್ 2020, 20:57 IST
ಕೆಂಪೇಗೌಡ ವಿಮಾನ ನಿಲ್ದಾಣ
ಕೆಂಪೇಗೌಡ ವಿಮಾನ ನಿಲ್ದಾಣ   

ಬೆಂಗಳೂರು: ‘ನಗರದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆಅತಿಕಡಿಮೆ ಸಮಯದಲ್ಲಿ ಸಂಚರಿಸಲು ಹೈಪರ್‌ಲೂಪ್‌ ಕಾರಿಡಾರ್‌ ನಿರ್ಮಿಸುವ ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸುವ ಒಪ್ಪಂದಕ್ಕೆ ವರ್ಜಿನ್ ಹೈಪರ್‌ಲೂಪ್‌ ಸಂಸ್ಥೆ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ (ಬಿಐಎಎಲ್‌) ಭಾನುವಾರ ಸಹಿ ಹಾಕಿವೆ.

ವರ್ಜಿನ್‍ ಹೈಪರ್‌ಲೂಪ್‌ಸಂಸ್ಥೆ ಅಧ್ಯಕ್ಷ ಸುಲ್ತಾನ್‌ ಬಿನ್‌ ಸುಲಾಯೆಮ್‌, ‘ಬೆಂಗಳೂರಿನ ವಾಹನದಟ್ಟಣೆ ನಿವಾರಣೆಗೆ ಪರಿಹಾರ ರೂಪಿಸುವುದರ ಭಾಗವಾಗಲು ನಮಗೆ ಅವಕಾಶ ಸಿಕ್ಕಿದ್ದು ಗೌರವದ ವಿಷಯ. ಹೈಪರ್‌ಲೂಪ್‌ ವ್ಯವಸ್ಥೆಯಡಿ, ಸಂಚಾರ ಮಾತ್ರವಲ್ಲದೆ, ಸರಕು ಸಾಗಣೆಯ ವ್ಯವಸ್ಥೆಯಲ್ಲೂ ಸುಧಾರಣೆ ಸಾಧ್ಯ’ ಎಂದರು.

‘ವಿಮಾನ ನಿಲ್ದಾಣವನ್ನು ಸಾರಿಗೆಯ ಕೇಂದ್ರನ್ನಾಗಿಸುವ ಮೂಲಕ ಜನರು ಮತ್ತು ಸ್ಥಳಗಳ ಸಂಪರ್ಕ ಕಲ್ಪಿಸಲಾಗುತ್ತದೆ. ಉಪನಗರ ರೈಲಿನ ಮೂಲಕ ಹಲವು ಸ್ಥಳಗಳನ್ನು ಸಂಪರ್ಕಿಸುವ ವ್ಯವಸ್ಥೆ ರೂಪಿಸಲಾಗುವುದು’ ಎಂದರು.

ADVERTISEMENT

‘ಬೆಂಗಳೂರು ವಿಮಾನ ನಿಲ್ದಾಣದಿಂದ ಹೈಪರ್‌ಲೂಪ್‌ ಸಂಪರ್ಕದ ಸಾಧ್ಯತೆ ಕುರಿತು ಅಧ್ಯಯನ ನಡೆಸುವುದು ಈ ಒಪ್ಪಂದದ ಪ್ರಮುಖ ಹೆಜ್ಜೆ. ಆರು ತಿಂಗಳಲ್ಲಿ ಈ ಅಧ್ಯಯನ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಗಂಟೆಗೆ 1,080 ಕಿ.ಮೀ. ವೇಗದ ಪ್ರಯಾಣದ ಅವಕಾಶ ಕಲ್ಪಿಸುವ ಹೈಪರ್‌ಲೂಪ್‌ ವಿಮಾನ ನಿಲ್ದಾಣದಿಂದ ನಗರದ ಕೇಂದ್ರ ಭಾಗಕ್ಕೆ 10 ನಿಮಿಷದಲ್ಲಿ ಸಾವಿರಾರು ಪ್ರಯಾಣಿಕರನ್ನು ಕರೆದೊಯ್ಯಲಿದೆ ಎಂದು ಪೂರ್ವ ವಿಶ್ಲೇಷಣೆ ತಿಳಿಸಿದೆ’ ಎಂದು ಎಂದು ಬಿಐಎಎಲ್‌ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಟಿ.ಎಂ. ವಿಜಯ್ ಭಾಸ್ಕರ್ ತಿಳಿಸಿದ್ದಾರೆ.

‘ವಿಮಾನ ನಿಲ್ದಾಣದ ಸುತ್ತ–ಮುತ್ತಲಿನ ಪ್ರದೇಶದ ಹಾಗೂರಾಜ್ಯದ ಆರ್ಥಿಕ ವೃದ್ಧಿಯ ವೇಗವನ್ನು ಹೆಚ್ಚಿಸಬಹುದಾದ ಕ್ರಮಗಳ ಬಗ್ಗೆ ಅಧ್ಯಯನ ವರದಿ ಬೆಳಕು ಚೆಲ್ಲಲಿದೆ’ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್ ಹೇಳಿದರು.

ಮೂಲಸೌಕರ್ಯ ಅಭಿವೃದ್ದಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.