ADVERTISEMENT

ಬೈಬಲ್‌ ಕಡ್ಡಾಯ ಪ್ರಕರಣ: ಸರ್ಕಾರದಿಂದ ಬೆಂಗಳೂರಿನ ಕ್ಲಾರೆನ್ಸ್‌ ಶಾಲೆಗೆ ನೋಟಿಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2022, 8:07 IST
Last Updated 27 ಏಪ್ರಿಲ್ 2022, 8:07 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಇಲ್ಲಿನ ರಿಚರ್ಡ್ಸ್‌ ಟೌನ್‌ನ ಕ್ಲಾರೆನ್ಸ್‌ ಪ್ರೌಢಶಾಲೆಯಲ್ಲಿ ಬೈಬಲ್‌ ಅಧ್ಯಯನ ಕಡ್ಡಾಯಗೊಳಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ನೋಟಿಸ್‌ ಜಾರಿ ಮಾಡಿದ್ದು, ಈ ಬಗ್ಗೆ ವಿವರ ನೀಡುವಂತೆ ಆದೇಶಿಸಿದೆ.

ಮಾಧ್ಯಮಗಳ ವರದಿ ಮತ್ತು ಪೊಷಕರ ದೂರುಗಳನ್ನು ಆಧರಿಸಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಂಗಳವಾರ ನೋಟಿಸ್‌ ನೀಡಿದೆ. ಶಾಲೆಯ ಪ್ರತಿಕ್ರಿಯೆಯ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ದೃಢಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ನಾಗೇಶ್‌, 'ಬೈಬಲ್‌ ಕಡ್ಡಾಯಗೊಳಿಸಿರುವ ಕ್ಲಾರೆನ್ಸ್‌ ಶಾಲೆಯ ನಡೆಯು ರಾಜ್ಯ ಶಿಕ್ಷಣ ನೀತಿಯ ಉಲ್ಲಂಘನೆಯಾಗಿದೆ. ಬೇರೆ ಬೋರ್ಡ್‌ ಶಾಲೆಗಳಿಗೆ ನಿರಾಕ್ಷೇಪಣ ಪತ್ರವನ್ನು ನೀಡುವ ಮೊದಲು ಕಾಯಿದೆಯ ನಿಬಂಧನೆಗಳಿಗೆ ಒಳಪಟ್ಟಿರಬೇಕೆಂದು ಒತ್ತಿಹೇಳುತ್ತೇವೆ. ಧಾರ್ಮಿಕ ಪುಸ್ತಕಗಳನ್ನು ಬೋಧನೆ ಮಾಡಲು ಪ್ರತ್ಯೇಕ ನಿಬಂಧನೆಗಳಿಲ್ಲ. ಇದೆಲ್ಲವೂ ನಿರಾಕ್ಷೇಪಣ ಪತ್ರದಲ್ಲಿ ಉಲ್ಲೇಖಗೊಂಡಿರುತ್ತದೆ' ಎಂದಿದ್ದಾರೆ.

ADVERTISEMENT

ಕರ್ನಾಟಕ ಪ್ರಾದೇಶಿಕ ಕ್ಯಾಥೋಲಿಕ್‌ ಬಿಷಪ್‌ ಕೌನ್ಸಿಲ್‌ನ ಅಧ್ಯಕ್ಷ ಡಾ. ಪೀಟರ್‌ ಮ್ಯಾಖೆಡೊ ಅವರು ಬೈಬಲ್‌ ಕಡ್ಡಾಯ ಆರೋಪವನ್ನು ತಳ್ಳಿ ಹಾಕಿದ್ದಾರೆ. 'ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಆಚರಣೆಯ ಬಗ್ಗೆ ಶಾಲೆಯ ಆಡಳಿತ ಮಂಡಳಿಯು ಈಗಾಗಲೇ ಸ್ಪಷ್ಟನೆಯನ್ನು ನೀಡಿದೆ. ಕಳೆದ 1 ವರ್ಷದಿಂದ ಯಾವ ವಿದ್ಯಾರ್ಥಿಯೂ ಶಾಲೆಗೆ ಬೈಬಲ್‌ ಪ್ರತಿಯನ್ನು ತರುವಂತೆ ಇಲ್ಲ. ಒತ್ತಾಯದಿಂದ ಬೈಬಲ್‌ ಪಠಿಸುವಂತೆಯೂ ಹೇಳುತ್ತಿಲ್ಲ' ಎಂದಿದ್ದಾರೆ.

'ಕ್ರಿಶ್ಚಿಯನ್‌ ಸಂಸ್ಥೆಯು ಶಾಲಾ ಅವಧಿಯನ್ನು ಹೊರತುಪಡಿಸಿ ಕ್ರಿಶ್ಚಿಯನ್‌ ವಿದ್ಯಾರ್ಥಿಗಳಿಗೆ ಬೈಬಲ್‌ ಅಥವಾ ಧಾರ್ಮಿಕ ಬೋಧನೆ ಮಾಡುವ ಹಕ್ಕನ್ನು ಹೊಂದಿದೆ' ಎಂದು ಪೀಟರ್‌ ಮ್ಯಾಖೆಡೊ ಹೇಳಿದ್ದಾರೆ ಎಂದು 'ಡೆಕ್ಕನ್‌ ಹೆರಾಲ್ಡ್‌' ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.